ಉತ್ತರ ಕನ್ನಡ ಲೋಕಸಭೆ ಟಿಕೆಟ್‌ಗೆ ಭಾರಿ ಪೈಪೋಟಿ; ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತ್ ಕುಮಾರ್ ಹೆಗಡೆ ಜೊತೆ ನಾಯಕರ ಚರ್ಚೆ
ಉತ್ತರ ಕನ್ನಡದ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಮಾಡದಿರುವುದು ಕುತೂಹಲ ಕೆರಳಿಸಿದೆ. ಬಿಜೆಪಿ ಹಿರಿಯ ಮುಖಂಡರು, ನಾಯಕರು ಅನಂತ್ ಕುಮಾರ್ ಹೆಗಡೆ ಮತ್ತು ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ಮಾತುಕತೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಪ್ರಯೋಗ ಬೇಡ ಎಂದು ರಾಜ್ಯ ಬಿಜೆಪಿ ಘಟಕಕ್ಕೆ ಸಂಘ ಪರಿವಾರದ ಮುಖಂಡರು ಸೂಚನೆ ನೀಡಿದ್ದಾರೆ.
ಕಾರವಾರ, ಮಾರ್ಚ್.16: ಉತ್ತರ ಕನ್ನಡದ ಲೋಕಸಭಾ ಕ್ಷೇತ್ರದಲ್ಲಿ (Uttara Kannada Lok Sabha ticket) ಬಿಜೆಪಿ ಟಿಕೆಟ್ ಕುತೂಹಲ ಮೂಡಿಸಿದೆ. ಈ ಬಾರಿ ಅನಂತ್ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ಸಿಗೋದು ಕಷ್ಟ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅವರು ಅನಂತ್ ಕುಮಾರ್ ಹೆಗಡೆ ಜೊತೆ ಮಾತುಕತೆ ನಡೆಸಿದ್ದಾರೆ. ಅನಂತ್ ಕುಮಾರ್ ಹೆಗಡೆ (Ananth Kumar Hegde) ಅವರು ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದು ಸಂಘ ಪರಿವಾರದ ಮುಖಂಡರು ಅನಂತ್ ಕುಮಾರ್ ಹೆಗಡೆ ಪರ ಬ್ಯಾಟ್ ಬೀಸಿದ್ದಾರೆ.
ಜಿಲ್ಲಾ ಸಂಘ ಪರಿವಾರ ಮುಖಂಡ, ಹನುಮಂತ ಶಾನಭಾಗ್, ಜಗದೀಶ್ ಕಾರಂತ್ ಅವರು ಮಾತುಕತೆ ನಡೆಸಿ ಜಿಲ್ಲೆಯಲ್ಲಿ ಯಾವುದೇ ಪ್ರಯೋಗ ಬೇಡ ಎಂದು ರಾಜ್ಯ ಬಿಜೆಪಿ ಘಟಕಕ್ಕೆ ಸೂಚನೆ ನೀಡಿದ್ದಾರೆ. ಇನ್ನೊಂದೆಡೆ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆಯೂ ಹಿರಿಯ ನಾಯಕರು ಮಾತುಕತೆ ನಡೆಸಿದ್ದಾರೆ. ಈ ಬಾರಿ ಬದಲಾವಣೆಯ ವಿಶ್ವಾಸದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದಾರೆ. ಕಾಗೇರಿ ಅವರು ನಾಲ್ಕು ದಿನಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಅನಂತ್ ಕುಮಾರ್ ಹೆಗಡೆ ಅವರು ಸಾಕಷ್ಟು ಚರ್ಚೆಗಳ ನಡುವೆಯೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಆರು ಬಾರಿ ಬಿಜೆಪಿ ಗೆದ್ದಿರುವ ಉತ್ತರ ಕನ್ನಡ ಕ್ಷೇತ್ರದ ಟಿಕೆಟ್ ಇದುವರೆಗೂ ಘೋಷಣೆ ಮಾಡದ ವಿಚಾರಕ್ಕೆ ಸಂಬಂಧಿಸಿ ಶಿರಸಿಯಲ್ಲಿ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದ್ದು, ಈ ಲೋಕಸಭಾ ಚುನಾವಣೆಯನ್ನ ಸಮರ್ಥವಾಗಿ ಎದುರಿಸಲು ಪೂರ್ವ ಸಿದ್ದತೆ ಮಾಡಲಾಗಿದೆ. ಬಿಜೆಪಿ ಒಂದೇ 370ಕ್ಕೂ ಹೆಚ್ಚು ಸೀಟು ಗೆಲ್ಲಬೇಕೆಂದು ಪ್ರಧಾನಿ ಮೋದಿ ಗುರಿ ಹಾಕಿದ್ದಾರೆ. ಮೋದಿಯವರ ಗುರಿ ತಲುಪಲು ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲಲು ಪ್ರಯತ್ನ ನಡೆದಿದೆ. ಪ್ರಮುಖವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಮ್ಮ ಪಕ್ಷದ ಸಂಘಟನೆ ಬಲಿಷ್ಟವಾಗಿದೆ. ನರೇಂದ್ರ ಮೋದಿಯವರ ಗ್ಯಾರಂಟಿಯಿಂದ ಉತ್ತರ ಕನ್ನಡ ಕ್ಷೇತ್ರದಲ್ಲಿ ಮತ್ತೆ ಗೆಲ್ಲುವ ವಿಶ್ವಾಸ ಇದೆ. ಈಗಾಗಲೇ ಅಭ್ಯರ್ಥಿ ಆಯ್ಕೆ ವಿಚಾರವಾಗಿ ರಾಜ್ಯ ಸಮಿತಿಯಿಂದ ರಾಷ್ಟ್ರಿಯ ನಾಯಕರಿಗೆ ಪಟ್ಟಿ ತಲುಪಿದೆ. ಈಗಾಗಲೇ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವ ದಮ್ಮು, ತಾಕತ್ ಬಿಜೆಪಿಗೆ ಇಲ್ಲ -ಸಿದ್ದರಾಮಯ್ಯ
ಇನ್ನು ರಾಜ್ಯದ ಕೆಲವು ಕ್ಷೇತ್ರದಂತೆ ಉತ್ತರ ಕನ್ನಡ ಕ್ಷೇತ್ರಕ್ಕೂ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅನಂತ್ ಕುಮಾರ್ ಹೆಗಡೆ, ಈ ಕ್ಷೇತ್ರವನ್ನ ದಾಖಲೆ ಮತಗಳ ಅಂತರದಿಂದ ಗೆಲ್ಲಲು ವರಿಷ್ಠರು ಯೋಚಿಸಿದ್ದಾರೆ. ವರಿಷ್ಠರ ಯೋಚನೆಯಂತೆ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಅದಕ್ಕೆ ನಾವು ಬದ್ದ. ಉತ್ತರ ಕನ್ನಡ ಕ್ಷೇತ್ರದಲ್ಲಿ ದಾಖಲೆ ಮತಗಳ ಅಂತರದಿಂದ ಗೆಲ್ಲಲು ತಯಾರಿ ನಡೆದಿದೆ ಎಂದರು. ರಾಜ್ಯ ಸಮಿತಿಯಿಂದ ಕಳಿಸಿರುವ ಪಟ್ಟಿಯಲ್ಲಿ ಕಾಗೇರಿ ಹೆಸರಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ರಾಜ್ಯ ಸಮಿತಿಯಿಂದ ಕಳಿಸಿರುವ ಪಟ್ಟಿಯಲ್ಲಿ ಯಾರ ಹೆಸರು ಇದೆ, ಇಲ್ಲ ಎಂಬುವುದು ಆಂತರಿಕ ವಿಚಾರ. ಆದ್ರೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಆಂತರಿಕ ವಲಯದಲ್ಲಿ ಚರ್ಚೆ ಮಾಡಿ ವರದಿ ನೀಡಲಾಗುತ್ತೆ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಆಂತರಿಕವಾಗಿ ಚರ್ಚೆ ಮಾಡಿರುವುದು ನಿಜ. ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯ ಕೂಡ ಸಂಗ್ರಹಣೆ ಮಾಡಲಾಗಿದೆ. ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯ ಕುರಿತ ವರದಿ ಈಗಾಗಲೆ ಪಕ್ಷದ ನಾಯಕರಿಗೆ ಹಾಗೂ ಪ್ರಧಾನಿಗೆ ತಲುಪಿದೆ. ಅದರ ಆಧಾರದ ಮೇಲೆ ಯಾರನ್ನ ಕಣಕ್ಕಿಳಿಸುತ್ತಾರೆ ಎಂಬುವುದನ್ನ ಕಾದು ನೋಡಬೇಕಿದೆ. ವರದಿಗಳನ್ನ ಆಧರಿಸಿ ವರಿಷ್ಠರು ಯಾವ ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತಾರೆ ಅವರನ್ನು ಗೆಲ್ಲಿಸುತ್ತೆವೆ. ಒಟ್ಟಾರೆ ದಾಖಲೆ ಮತಗಳ ಅಂತರದಿಂದ ಉತ್ತರ ಕನ್ನಡದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ