ಕಾರವಾರ(ಆ.22): ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿ (Sirsi) ತಾಲೂಕಿನ ಕಲ್ಲಿ(Kalli) ಗ್ರಾಮದಲ್ಲಿನ ಮುರಾರ್ಜಿ ವಸತಿ ಶಾಲೆಗೆ (Morarji Desai Residential School) ಅಧಿಕಾರ ಸ್ವೀಕರಿಸಲು ಆಗಮಿಸಿದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಂಶುಪಾಲರ ಕೊಠಡಿಗೆ ನುಗ್ಗಿ ವಿದ್ಯಾರ್ಥಿಗಳು ಬಾಗಿಲು ಮುರಿದು ದಾಂಧಲೆ ಮಾಡಿದ್ದಾರೆ. ಹೊಸದಾಗಿ ನೇಮಕಗೊಳ್ಳುತ್ತಿರುವ ಪ್ರಾಂಶುಪಾಲರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವಿರುವುದರಿಂದ, ಹೊಸ ನೇಮಕಾತಿಯನ್ನು ವಿದ್ಯಾರ್ಥಿಗಳು ವಿರೋಧಿಸಿ, ಹಳೆಯ ಪಾಂಶುಪಾಲರನ್ನೇ ಮುಂದುವರೆಸುವಂತೆ ಆಗ್ರಹಿಸಿದ್ದಾರೆ.
ಬಿಸಿಲಿನಲ್ಲಿ ಕೂತು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿಸುತ್ತಿದ್ದು, ಅವರೊಂದಿಗೆ ಹಳೆ ವಿದ್ಯಾರ್ಥಿಗಳು ಹಾಗೂ ಪಾಲಕರೂ ಕೈ ಜೋಡಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದರೂ, ಸ್ಥಳಕ್ಕೆ ಬಾರದೆ ಇದ್ದಿದ್ದರಿಂದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಂಶುಪಾಲರ ವರ್ಗಾವಣೆಯನ್ನು ರದ್ದು ಮಾಡದೇ ಇದ್ದಲ್ಲಿ, ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಅಲ್ಲದೇ ನಮಗೆ ತೊಂದರೆಯಾದರೆ ಸಂಬಂಧಿಸಿದ ಅಧಿಕಾರಿಗಳು ನೇರ ಹೊಣೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ. ಅಲ್ಲದೇ ಮಕ್ಕಳ ವರ್ಗಾವಣೆ ಪತ್ರ ನೀಡುವಂತೆ ಪಾಲಕರು ಒತ್ತಡ ಹಾಕಿದ್ದಾರೆ.
ಇದನ್ನೂ ಓದಿ: ಕಾರವಾರ: ಚಾಕೊಲೇಟ್ ಎಂದು ಪ್ಯಾಂಟ್ ಬಟನ್ ನುಂಗಿದ ಹಸುಳೆ: ಜೀವ ಉಳಿಸಿದ ಸರಕಾರಿ ಆಸ್ಪತ್ರೆ ವೈದ್ಯರು
ವಿದ್ಯಾರ್ಥಿಗಳು ನಮಗೆ ಹೊಸ ಪ್ರಾಂಶುಪಾಲರು ಬೇಡ ಎಂದು ಕಂಪೌಂಡ್ ಜಿಗಿಯಲು ಮುಂದಾದಾಗ ಪೊಲೀಸರು ತಡೆಯಲು ಹರಸಾಹಸ ಪಟ್ಟರರು. ಮುನ್ನೆಚ್ಚರಿಕೆಯಾಗಿ ಮೊರಾರ್ಜಿ ವಸತಿ ಶಾಲೆಯ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಿದ್ಯಾರ್ಥಿಗಳ ವಿರೋಧದ ನಡುವೆ ಪ್ರಾಂಶುಪಾಲ ಚಂದ್ರಶೇಖರ ನಾಯ್ಕ ಅಧಿಕಾರ ಸ್ವೀಕರಿಸಿ, ಪೊಲೀಸ್ ರಕ್ಷಣೆಯಲ್ಲಿ ಕೆಲವೇ ನಿಮಿಷದಲ್ಲಿ ವಾಪಸ್ ಆಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ