ಉತ್ತರ ಕನ್ನಡ: ದೇಶದ ಬಗ್ಗೆ ಅಭಿಮಾನ, ದೇಶಪ್ರೇಮ, ನಾಡಿನ ನೆಲ, ಜಲ, ಭಾಷೆಗಳ ಬಗ್ಗೆ ಗಟ್ಟಿ ನಿಲುವು ಉಳ್ಳವರು. ಬಡಜನರ ತುಳಿತಕ್ಕೊಳಗಾದವರ ಹಿತರಕ್ಷಣೆಗೆ ತುಡಿಯುವ ಮಾನವತಾವಾದಿ. ಜೀವನೋತ್ಸಾಹವಿರುವ ವಿಶ್ವೇಶ್ವರ ಹೆಗಡೆ ಕಾಗೇರಿ (vishweshwar hegde kageri) ಯವರು ಅಪರೂಪದ ವ್ಯಕ್ತಿ. ಅವರ ಅಗಾಧ ಅನುಭವದ ಮಾರ್ಗದರ್ಶನದಲ್ಲಿ ರಾಜ್ಯ ಅಭಿವೃದ್ಧಿ ಕಾಣಬಹುದಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ತಿಳಿಸಿದರು. ಶಿರಸಿಯ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಹಾಗೂ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಪರೂಪದ ವ್ಯಕ್ತಿತ್ವ. ಸಾರ್ವಜನಿಕ ಜೀವನಕ್ಕೆ ಬಂದಿರುವುದು ಹಗಲಿರುಳು ಕೆಲಸ ಮಾಡುವ ಕಾರ್ಯಕರ್ತನಾಗಿ, ಸಂಘಟನಾ ಚತುರನಾಗಿ ಪ್ರತಿಯೊಬ್ಬರ ಮನದಲ್ಲಿ ಸ್ಥಾನ ಗಳಿಸಿರುವವರು. ವ್ಯಕ್ತಿಗತ ಯಾವುದೇ ಗಾಡ್ ಫಾದರ್ ಇಲ್ಲದವರು. ನಿರಂತರವಾಗಿ ಪರಿಶ್ರಮಿಸಿ, ಎಲ್ಲರಿಗೂ ಬೇಕಾಗಿರುವವರು. ತನ್ನ ಕಾಯಕ, ಸಾಮರ್ಥ್ಯದಿಮದ ಮುಂದೆ ಬಂದಿರುವವರು. ಸಂಘಟನೆಯೇ ಕಾಗೇರಿಯವರ ಗಾಡ್ ಫಾದರ್. ಯಾವುದೇ ರೀತಿಯ ರಾಜಿಮಾಡಿಕೊಳ್ಳದೇ ಜೀವನದಲ್ಲಿ ಏಳು ಬೀಳುಗಳನ್ನು ಕಂಡುಕೊಂಡವರು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾದವರಲ್ಲ. ಗಟ್ಟಿ ನಿಲುವಿನ, ಜನಹಿತ ಸಲುವಾಗಿ ಸಹಕಾರವನ್ನು ನೀಡುವಂಥವರು. ಸ್ಥಿತಪ್ರಜ್ಞೆಯ ವ್ಯಕ್ತಿಯಾದವರು ಎಂದೂ ತಪ್ಪು ಮಾಡುವುದಿಲ್ಲ. 6 ಬಾರಿ ಶಾಸಕರಾಗಿದ್ದು, 7 ನೇ ಬಾರಿಯೂ ಗೆಲ್ಲುವ ವಿಶ್ವಾಸವಿದೆ ಎಂದರು.
ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಚಿವರಾಗಿ, ಸಭಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದು, ಕರ್ತವ್ಯದ ಸಂಬಂಧವೇ ಹೊರತು ತಮ್ಮ ಸ್ಥಾನದ ಅಹಂ ಎಂದೂ ಇರಲಿಲ್ಲ. ವಿಷಯಾಧಾರಿತ ಚರ್ಚೆಗಳಲ್ಲಿ ಗಟ್ಟಿತನವನ್ನು ತೋರಿದರೂ ಸ್ನೇಹಕ್ಕೆ ಎಂದೂ ಕೊರತೆ ಮಾಡಿಲ್ಲ. ಸ್ಥಾನದ ಬಗ್ಗೆ ಯಾವ ಮೋಹವೂ ಇಲ್ಲ. ತಮಗೆ ವಹಿಸಿದ ಯಾವುದೇ ಕರ್ತವ್ಯವನ್ನು ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರವೃತ್ತಿ ಹಾಗೂ ಬದ್ಧತೆಯುವಳ್ಳವರು. ಬಸವರಾಜ ಹೊರಟ್ಟಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿಕ್ಷಣ ಸಚಿವರಾಗಿ ಕರ್ತವ್ಯ ನಿರ್ವಹಿಸಿ, ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಸೂಚಿಯನ್ನು ನೀಡಿದವರು.
ಶ್ರೀಯುತರು ಕೇವಲ ಸಭಾಧ್ಯಕ್ಷರಾಗಿ ದುಡಿಯಬಹುದಾಗಿತ್ತು. ಆದರೆ ಮೌಲ್ಯಾಧಾರಿತ ಪ್ರಜಾಪ್ರಭುತ್ವ ಉಳಿಸುವ ಕಾರ್ಯವನ್ನು ಮಾಡಿದವರು. ಶ್ರೀಯುತರು ಸಂವಿಧಾನದ ಆಶಯ, ಸಾಮಾಜಿಕ ನ್ಯಾಯ, ಹಕ್ಕುಬಾಧ್ಯತೆಗಳ ಬಗ್ಗೆ, ಸಂವಿಧಾನದ ಎಲ್ಲ ರಂಗಗಳ ಬಗ್ಗೆ ಕರ್ತವ್ಯ ಪ್ರಜ್ಞೆ ಮೂಡಿಸುವ ಚಿಂತನ ಮಂಥನ ಕಾರ್ಯಕ್ರಮವನ್ನು ಮಾಡಿದರು ಎಂದು ತಿಳಿಸಿದರು.
ಚುನಾವಣೆಯಲ್ಲಿ ಸುಧಾರಣೆ, ಪಾರದರ್ಶಕತೆ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಜನರು ಭಾಗವಹಿಸಬೇಕು, ಪ್ರಭಾವ ರಹಿತ ಚುನಾವಣೆ ನಡೆಸುವಂತಾಗಬೇಕು ಎಂಬ ಬಗ್ಗೆ ಚರ್ಚೆ, ಒಂದು ದೇಶ ಒಂದು ಚುನಾವಣೆಗೆ ಒಲವು ತೋರಿದರು. ಪದೇ ಪದೇ ವಿವಿಧ ಸ್ತರಗಳಲ್ಲಿ ಚುನಾವಣೆಯಾಗುವುದರಿಂದ ವೆಚ್ಚಗಳು, ಪ್ರಗತಿ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ.
ಜನಪ್ರತಿನಿಧಿಗಳು ಆತ್ಮಾವಲೋಕನ, ಜನಪ್ರತಿನಿಧಿಗಳ ಕರ್ತವ್ಯ, ಉತ್ತರದಾಯಿತ್ವ, ಜನರಿಗಾಗಿ ಇರುವ ನೀತಿಗಳ ಚರ್ಚೆ ನಡೆಸಿದರು. ಇಂತಹ ಹಲವು ದಾಖಲೆಯ ಕಾರ್ಯಕ್ರಮಗಳನ್ನು ಮಾಡಿದರು. ಸಭಾಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲರಾಗಿ, ಶಾಸಕರಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶಿವರಾಂ ಹೆಬ್ಬಾರ್ ಸೇರಿದಂತೆ ಇಬ್ಬರ ಶ್ರಮದಿಂದ ಶಿರಸಿ ತಾಲ್ಲೂಕಿನ ಅಭಿವೃದ್ದಿ ಸಾಧ್ಯವಾಗುತ್ತಿದೆ. ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಮ್ ಹೆಬ್ಬಾರ್, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಆರ್. ವಿ. ದೇಶಪಾಂಡೆ ಶಾಸಕರು ಮತ್ತಿತರ ಗಣ್ಯರು ಹಾಜರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:14 pm, Sun, 15 January 23