ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶಿರಸಿಯಲ್ಲಿ ಪರಿಸರ ವಿವಿ ಸ್ಥಾಪನೆ: ಸಿಎಂ ಬಸವರಾಜ ಬೊಮ್ಮಾಯಿ
ಕರಾವಳಿ ಘಟ್ಟದ ಮೇಲಿರುವ ತಾಲ್ಲೂಕುಗಳ ಜನರಿಗೆ ಅನುಕೂಲವಾಗುವಂತೆ ಕುಮಟಾ ಕ್ಷೇತ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉತ್ತರಕನ್ನಡ: ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಇದೆ. ಕರಾವಳಿ ಘಟ್ಟದ ಮೇಲಿರುವ ತಾಲ್ಲೂಕುಗಳ ಜನರಿಗೆ ಅನುಕೂಲವಾಗುವಂತೆ ಕುಮಟಾ ಕ್ಷೇತ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಅವಶ್ಯವಿರುವ ಅನುದಾನಕ್ಕೆ ಮಂಜೂರಾತಿಯನ್ನು ನೀಡಲಾಗುವುದು. ಈ ಯೋಜನೆಗೆ ಶೀಘ್ರ ಅಡಿಕಲ್ಲು ಕಾರ್ಯಕ್ರಮ ಮಾಡಲಾಗುವುದು. ಅದೇ ರೀತಿ ಶಿರಸಿಯಲ್ಲಿ ಪರಿಸರ ವಿಶ್ವವಿದ್ಯಾಲಯ (Environment University) ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು. ಶಿರಸಿಯ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಹಾಗೂ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿರಸಿಯಲ್ಲಿ ಭೂ ಕುಸಿತ, ಹಸಿರು ಪ್ರದೇಶ ವಿಸ್ತರಣೆ, ಪಶ್ಚಿಮ ಘಟ್ಟ, ಪರಿಸರ ಸೂಕ್ಷ ವಲಯ, ವನ್ಯಜೀವಿಗಳ ಸಂರಕ್ಷಣೆ, ವನ ಮತ್ತು ಜನಗಳ ನಡುವೆ ಸಾಮರಸ್ಯದ ಸಂಬಂಧ ಹಸಿರಿನಿಂದ ಜನರ ಆದಾಯ ಹೆಚ್ಚಳದ ಜೊತೆಗೆ ಪರಿಸರ ಸಂರಕ್ಷಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಧ್ಯಯನವನ್ನು ಸಾಧ್ಯವಾಗಿಸಲು ಪರಿಸರ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು. ವಿಶ್ವವಿದ್ಯಾಲಯ ಸ್ಥಾಪನೆಗೆ ಅನುದಾನ, ರೂಪುರೇಷೆಗಳನ್ನು ಸಿದ್ಧಪಡಿಸಿ ಅಡಿಗಲ್ಲು ಹಾಕಲಾಗುವುದು ಎಂದರು.
ಹೊಸ ತಂತ್ರಜ್ಞಾನ, ಡಿಜಟಲೀಕರಣ, ದೂರಶಿಕ್ಷಣ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳುಳ್ಳ ವಿಶ್ವವಿದ್ಯಾಲಯಗಳನ್ನು ರಾಜ್ಯದಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ. ಈ ಭಾಗದಲ್ಲಿ ಅರಣ್ಯ, ತೋಟಗಾರಿಕಾ ಕಾಲೇಜುಗಳಿದ್ದು, ಇವುಗಳ ಮೂಲಸೌಕರ್ಯಗಳನ್ನು ಬಳಸಿಕೊಂಡು ಪರಿಸರ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. ಈ ಯೋಜನೆ ರಾಜ್ಯದಲ್ಲಿ ಪ್ರಥಮವಾಗಿದೆ. ಪರಿಸರ ರಕ್ಷಣೆಯ ಅಧ್ಯಯನಕ್ಕೆ ಈ ಕಾಲೇಜು ಉಪಯುಕ್ತವಾಗಲಿದೆ. ಆಯವ್ಯಯದಲ್ಲಿ ಹಸಿರು ಬಜೆಟ್ ಅಡಿಯಲ್ಲಿ 100 ಕೋಟಿಗಳನ್ನು ಮೀಸಲಿರಿಸಿದ್ದು, ಇದರಡಿ ಉತ್ತರ ಕರ್ನಾಟಕಕ್ಕೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು.
ಇದನ್ನೂ ಓದಿ: Haveri News: ಗಂಗಾಮತ ಸಮುದಾಯವನ್ನು ಎಸ್ಟಿಗೆ ಸೇರಿಸುತ್ತೇವೆ: ಸಿಎಂ ಬೊಮ್ಮಾಯಿ ಭರವಸೆ
800 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಅರಣ್ಯದಲ್ಲಿ ವಾಸಿಸುವವರ ಹಕ್ಕು ರಕ್ಷಣೆಗಾಗಿ ಸುಪ್ರೀಂ ಕೋರ್ಟ್ನಲ್ಲಿ ಈ ವಿಷಯವಿದ್ದು ಅಂತಿಮ ಹಂತದಲ್ಲಿದೆ, ರಾಜ್ಯದಿಂದ ಅಫಿಡವಿಟ್ ಸಲ್ಲಿಸಲಾಗಿದೆ. ಅರಣ್ಯವಾಸಿಗಳ ರಕ್ಷಣೆಗಾಗಿ ಕಾನೂನು ಚರ್ಚೆಗಳನ್ನು ನಡೆಸಿ ಮತ್ತೊಂದು ಅಫಿಡೆವಿಟ್ ಸಲ್ಲಿಸಲಾಗುವುದು. ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಸರ್ಕಾರ ಮಾಡಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ಯಾವುದೇ ರೀತಿಯ ಕ್ರಮಗಳನ್ನು ಅಧಿಕಾರಿಗಳು ನನ್ನ ಗಮನಕ್ಕೆ ತರಲೇಬೇಕೆಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಮ್ ಹೆಬ್ಬಾರ್, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಸೇರಿದಂತೆ ಶಾಸಕರು ಮತ್ತಿತರರು ಹಾಜರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ