ಕಾರವಾರ, (ಏಪ್ರಿಲ್ 11): ವಿಧಾನಸಭಾ ಚುನಾವಣೆ ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಪುತ್ರ ವಿವೇಕ್ ಹೆಬ್ಬಾರ್ (Vivek Hebbar) ಕಾಂಗ್ರೆಸ್ (Congress) ಸೇರ್ಪಡೆಯಾದರು. ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಇಂದು(ಏಪ್ರಿಲ್ 11) ತಮ್ಮ ನೂರಾರು ಬೆಂಬಲಿಗರೊಂದಿಗೆ ವಿವೇಕ್ ಕಾಂಗ್ರೆಸ್ ಸೇರ್ಪಡೆಗೊಂಡರು. ಇನ್ನು ಅವರ ತಂದೆ ಶಿವರಾಮ್ ಹೆಬ್ಬಾರ್ ಅವರು ಯಾವಾಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.
ಕಾಂಗ್ರೆಸ್ ಸೇರ್ಪಡೆ ಬಳಿಕ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ ಹೆಬ್ಬಾರ್ ಟಿವಿ9ಗೆ ಜೊತೆ ಮಾತನಾಡಿದ್ದು, ನನ್ನ ತಂದೆಯವರು ಕಾಂಗ್ರೆಸ್ ಸೆರ್ಪಡೆ ಆಗುವುದರ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಕಾರ್ಯರ್ತರಿಗೆ ಪಕ್ಷದಲ್ಲಿ ಆದ ತಾರತಮ್ಯ ಮನಗಂಡು ಈ ನಿರ್ಧಾರಕ್ಕೆ ಬಂದಿದ್ದೆನೆ. ನಮ್ಮ ಕಾರ್ಯರ್ತರಿಗೆ ಪಕ್ಷದಲ್ಲಿ ಸ್ಥಾನ ಮಾನ ಕೊಡಿಸುವ ವಿಚಾರದಲ್ಲಿ ಅಸಮಾಧಾನ ಆಗಿದೆ. ವಿಧಾನ ಸಭೆ ಚುನಾವಣೆಯಲ್ಲಿ ಕೆಲ ಬಿಜೆಪಿಯವರೆ ನಮ್ಮ ತಂದೆಯವರನ್ನ ಸೋಲಿಸಲು ಪ್ರಯತ್ನಿಸಿದ್ರು. ಆದ್ರು ಸಹಿತ ನಮ್ಮ ತಂದೆಯವರಾದ ಶಿವರಾಮ್ ಹೆಬ್ಬಾರ್ ಗೆಲುವು ಸಾಧಿಸಿದ್ರು. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕಿತ್ತು. ಆದ್ರೆ ಅವರಿಗೆ ಪಕ್ಷದ ಉನ್ನತ ಸ್ಥಾನಗಳಲ್ಲಿ ಕೆಲಸ ಮಾಡುವ ಅವಕಾಶ ಕೊಟ್ಟಿದ್ದು ನಮಗೆ ಅಸಮಾಧಾನ ಉಂಟು ಮಾಡಿತು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: ಶಿವರಾಮ್ ಹೆಬ್ಬಾರ್ ಸಮಸ್ಯೆ ಏನೆಂದು ಗೊತ್ತಾಗುತ್ತಿಲ್ಲ, ಬಾಯಿ ಬಿಟ್ಟು ಹೇಳಬೇಕಲ್ವಾ: ರೂಪಾಲಿ ನಾಯ್ಕ್
ಪಕ್ಷ ವಿರೋಧಿ ಕೆಲಸ ಮಾಡಿದವರಿಗೆ ಈ ಹಿಂದೆ ಸ್ಥಾನಮಾನಕ್ಕಿಂತ ಒಳ್ಳೆಯ ಸ್ಥಾನಮಾನ ಕೊಟ್ಟಿರುವುದು ನೋಡಿ ನಮಗೆ ಬೇಜಾರಾಯ್ತು. ಹಾಗಾಗಿ ಕಾರ್ಯರ್ತರ ಒತ್ತಾಸೆಗೆ ಮಣಿದು ಮರಳಿ ನಮ್ಮ ಹಳೆಯ ಮನೆಗೆ ಬಂದಿದ್ದೆನೆ. ನಮಗೆ ಪಕ್ಷದಲ್ಲಿ ಆದ ಅನ್ಯಾಯದ ಬಗ್ಗೆ ಯಾರಿಗೆ ಎಲ್ಲಿ, ಏನು ಹೇಳಿದ್ದೇವೆ ಎನ್ನುವುದನ್ನು ಅವರ ಆತ್ಮಕ್ಕೆ ಕೇಳಿಕೊಳ್ಳಬೇಕು ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.
ಈಗಾಗಲೇ ಅದು ಆಗಿ ಹೋಗಿರುವ ವಿಷಯ. ಹಾಗಾಗಿ ಅದರ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಂದೆಯವರಿಗೆ ಕಾಂಗ್ರೆಸ್ ಸೇರ್ಪಡೆ ಆಗುವಂತೆ ನಾನು ಹೇಳುವುದಿಲ್ಲ. ಬನವಾಸಿ ಮಧುಕೇಶ್ವರನ ಇಚ್ಚೇಯಂತೆ ಎಲ್ಲವೂ ಆಗುತ್ತೆ. ನಮ್ಮ ತಂದೆಗೆ ಸಚಿವ ಸ್ಥಾನ ಕೊಟ್ವಿ ಎಂದು ಬಿಜೆಪಿಗರು ಹೇಳುತ್ತಾರೆ. ಅಂದು ಸಚಿವ ಸ್ಥಾನ ಕೊಡುವುದಕ್ಕೆ ಸರ್ಕಾರ ಬಂದಿದ್ದು ಹೇಗೆ ಎಂಬುವುದನ್ನ ಅರ್ಥ ಮಾಡಿಕೊಳ್ಳಲಿ. ನಾನು ಈ ಬಗ್ಗೆ ಮಾತನಾಡುವುದಕ್ಕೆ ಬಹಳ ಚಿಕ್ಕವನಾಗುತ್ತೇನೆ ಜಾಸ್ತಿ ಮಾತನಾಡಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.