ಬೆಂಗಳೂರು, ಜುಲೈ 9: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇ 24ರಂದು ಬೆಂಗಳೂರಿನ ಹೋಟೆಲ್ನಲ್ಲಿ ನಡೆದಿತ್ತಾ ರಹಸ್ಯ ಮೀಟಿಂಗ್ ಎಂಬ ಅನುಮಾನ ಇದೀಗ ಬಲವಾಗಿದೆ. ಇದಕ್ಕೆ ಕಾರಣ ಆಡಿಯೋವೊಂದು ವೈರಲ್ ಆಗಿರುವುದು. ಪ್ರಕರಣದ ಆರೋಪಿಗಳ ನಡುವೆ ನಡೆದಿದೆ ಎನ್ನಲಾದ ಆಡಿಯೋ, ವಿಡಿಯೋ ವೈರಲ್ ಆಗಿದೆ. ಇದು ಲೆಕ್ಕ ಪರಿಶೋಧಕ ಪರಶುರಾಮ್ ಮತ್ತು ಎಂಡಿ ಪದ್ಮನಾಭ್ ನಡುವಣ ಮಾತುಕತೆಗೆ ಸಂಬಂಧಿಸಿದ್ದಾಗಿದೆ.
ಹೋಟೆಲ್ಗೆ ಪರಶುರಾಮ್ರನ್ನು ಕರೆಸಿಕೊಂಡಿದ್ದ ಎಂಡಿ ಪದ್ಮನಾಭ್ ಸಭೆ ನಡೆಸಿದ್ದರು. ಸದ್ಯ ಪ್ರಕರಣದಲ್ಲಿ ಪದ್ಮನಾಭ್ ಎ7 ಹಾಗೂ ಪರಶುರಾಮ್ ಎ8 ಆಗಿದ್ದಾರೆ. ಉಭಯರ ನಡುವೆ ನಡೆದ ಮಾತುಕತೆ ವೇಳೆ, ‘ಹಗರಣದ ವಿಚಾರ ಅಧ್ಯಕ್ಷರಿಗೆ ಹೇಳೋಣ್ವಾ’ ಎಂದು ಪರಶುರಾಮ್ ಹೇಳಿದ್ದರು. ಇದಕ್ಕುತ್ತರವಾಗಿ, ‘ಹೇಳಿದ್ರೆ ರಾದ್ಧಾಂತ ಆಗುತ್ತೆ, ಸ್ವಲ್ಪ ದಿನ ಬೇಡ’ ಎಂದು ಪದ್ಮನಾಭ್ ಹೇಳಿದ್ದರು. ಇದಾದ ಎರಡೇ ದಿನಗಳಲ್ಲಿ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಯಿಂದ 18 ಖಾತೆಗಳಿಗೆ ಬರೋಬ್ಬರಿ 94.73 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿತ್ತು. ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣ ವರ್ಗಾವಣೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ಐಟಿ ರಚಿಸಿತ್ತು. ಹಗರಣ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಪ್ತ ಎನ್ನಲಾದ ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್ ಎಂಬುವವರನ್ನು ಎಸ್ಐಟಿ ಬಂಧಿಸಿದ್ದು ವಿಚಾರಣೆಗೆ ಒಳಪಡಿಸುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:36 am, Tue, 9 July 24