ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಬಸನಗೌಡ ದದ್ದಲ್, ಮಾಜಿ ಸಚಿವ ನಾಗೇಂದ್ರ ಮನೆ ಸೇರಿ 18 ಕಡೆ ಇ.ಡಿ ದಾಳಿ

| Updated By: Ganapathi Sharma

Updated on: Jul 10, 2024 | 1:00 PM

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಉರುಳು ಇದೀಗ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ ನಾಗೇಂದ್ರ ಮೇಲೆ ಬಲವಾಗಿ ಸುತ್ತಿಕೊಳ್ಳುತ್ತಿದೆ. ಪ್ರಕರಣ ಸಂಬಂಧ ಮಂಗಳವಾರವಷ್ಟೇ ಎಸ್​​ಐಟಿ ವಿಚಾರಣೆಗೆ ಹಾಜರಾಗಿದ್ದ ದದ್ದಲ್ ಹಾಗೂ ನಾಗೇಂದ್ರ ಅವರ ನಿವಾಸಗಳ ಮೇಲೆ ಬುಧವಾರ ಬೆಳ್ಳಂಬೆಳಗ್ಗೆಯೇ ಇ.ಡಿ ದಾಳಿ ನಡೆದಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಬಸನಗೌಡ ದದ್ದಲ್, ಮಾಜಿ ಸಚಿವ ನಾಗೇಂದ್ರ ಮನೆ ಸೇರಿ 18 ಕಡೆ ಇ.ಡಿ ದಾಳಿ
ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ದದ್ದಲ್ ನಿವಾಸ
Follow us on

ರಾಯಚೂರು, ಜುಲೈ 10: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ದದ್ದಲ್ ನಿವಾಸಕ್ಕೆ ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಮಂಗಳವಾರವಷ್ಟೇ ಬಸನಗೌಡ ದದ್ದಲ್​ ಎಸ್​ಐಟಿ ವಿಚಾರಣೆ ಎದುರಿಸಿದ್ದರು.

ಬೆಂಗಳೂರಿನ ಯಲಹಂಕದಲ್ಲಿರುವ ಬಸನಗೌಡ ದದ್ದಲ್ ನಿವಾಸದ ಮೇಲೂ ದಾಳಿ ನಡೆದಿದ್ದು, ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಬಳ್ಳಾರಿಯ ನೆಹರು ಕಾಲೋನಿಯಲ್ಲಿರುವ ಮಾಜಿ ಸಚಿವ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್​ ಶಾಸಕ ನಾಗೇಂದ್ರ ಮನೆ ಮೇಲೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಡಾಲರ್ಸ್​ ಕಾಲೋನಿಯಲ್ಲಿರುವ ನಾಗೇಂದ್ರ ಫ್ಲ್ಯಾಟ್​ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳಿಂದ ಫ್ಲ್ಯಾಟ್​ನಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಬೆಂಗಳೂರಿನಲ್ಲಿ ನಾಗೇಂದ್ರ, ಬಸವರಾಜ್ ದದ್ದಲ್, ಸುಚಿ ಸ್ಮಿತಾ, ದೀಪಾ, ಕೃಷ್ಣಮೂರ್ತಿ ಇವರಿಗೆ ಸಂಬಂಧಿಸಿದ ಒಟ್ಟು ಆರು ಕಡೆಗಳಲ್ಲಿ ದಾಳಿ ನಡೆದಿದೆ.

18 ಕಡೆ ಇ.ಡಿ ಅಧಿಕಾರಿಗಳಿಂದ ದಾಳಿ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ ಎಸ್‌ಐಟಿ ತನಿಖೆ ನಡೆಸ್ತಿದೆ. ಅವ್ಯವಹಾರದ ಬೆನ್ನುಬಿದ್ದಿದೆ. ಆದ್ರೀಗ, ಏಕಾಏಕಿ ಜಾರಿ ನಿರ್ದೇಶನಾಲಯ ಹಗರಣದ ತನಿಖೆಗೆ ಎಂಟ್ರಿ ಕೊಟ್ಟಿದೆ.. ಏಕಕಾಲಕ್ಕೆ 18 ಕಡೆ ದಾಳಿ ನಡೆಸಿದೆ.

ಎಲ್ಲೆಲ್ಲಿ ಇಡಿ ದಾಳಿ?

  • ಬೆಂಗಳೂರಿನ ಡಾಲರ್ಸ್‌ ಕಾಲೋನಿಯ ಬಿ.ನಾಗೇಂದ್ರ ಫ್ಲ್ಯಾಟ್‌
  • ನ್ಯೂ ಬಿಇಎಲ್‌ ರಸ್ತೆಯಲ್ಲಿರುವ ನಾಗೇಂದ್ರರ 2 ಫ್ಲ್ಯಾಟ್‌ಗಳು
  • ಬಳ್ಳಾರಿಯಲ್ಲಿರುವ ಮಾಜಿ ಸಚಿವ ನಾಗೇಂದ್ರ ಅವರ ನಿವಾಸ
  • ಯಲಹಂಕದಲ್ಲಿರುವ ಶಾಸಕ ಬಸನಗೌಡ ದದ್ದಲ್‌ ನಿವಾಸ
  • ರಾಯಚೂರಿನಲ್ಲಿರುವ ಶಾಸಕ ಬಸನಗೌಡ ದದ್ದಲ್‌ ನಿವಾಸ
  • ಶಾಸಕರಾದ ನಾಗೇಂದ್ರ ಮತ್ತು ದದ್ದಲ್‌ ಅವರ ಕಚೇರಿಗಳು
  • ವಸಂತನಗರದಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿ
  • ಕೊಡಿಗೆಹಳ್ಳಿಯಲ್ಲಿರುವ ಹಿಂದಿನ MD ಪದ್ಮನಾಭರ ನಿವಾಸ
  • ನಾಲ್ವರು ನಾಗೇಂದ್ರ ಆಪ್ತರ ಮನೆ ಮೇಲೆ ಕೂಡ ರೇಡ್‌
  • ಯೂನಿಯನ್‌ ಬ್ಯಾಂಕ್‌ನ ಮೂವರು ಸಿಬ್ಬಂದಿಗೆ ಸೇರಿದ ಸ್ಥಳ

ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್​ನಲ್ಲಿಯೂ ಪರಿಶೀಲನೆ

ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಕಚೇರಿಯನ್ನೂ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 3 ದಿನಗಳ ಹಿಂದೆಯೇ ಇಡಿ ಅಧಿಕಾರಿಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿ ಪರಿಶೀಲನೆ ನಡೆಸಿದ್ದರು. ಹಲವು ಮಹತ್ವದ ದಾಖಲೆಗಳನ್ನೂ ವಶಕ್ಕೆ ಪಡೆದಿದ್ದರು. ಇಂದು ಬ್ಯಾಂಕ್ ಮೇಲೆ ಯಾವುದೇ ದಾಳಿ ಮಾಡಿಲ್ಲ ಎಂದು ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ಚುರುಕುಗೊಳಿಸಿದ್ದ ಎಸ್​ಐಟಿ ಅಧಿಕಾರಿಗಳು ಮಾಜಿ ಸಚಿವ ಬಿ ನಾಗೇಂದ್ರ, ಬಸನಗೌಡ ದದ್ದಲ್​​ಗೆ ಮಂಗಳವಾರ ಪ್ರಶ್ನೆಗಳ ಸುರಿಮಳೆಗೈದಿದ್ದರು. ಸತತ 8 ಗಂಟೆ ವಿಚಾರಣೆ ನಡೆಸಿದ್ದರು. ವೈರಲ್ ಆಗಿರುವ ಆಡಿಯೋ ಆಧಾರದ ಮೇಲೆಯೂ ಬಿ.ನಾಗೇಂದ್ರರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಚಂದ್ರಶೇಖರ್ ಡೆತ್​ನೋಟ್ ಆಧರಿಸಿಯೂ ನಾಗೇಂದ್ರಗೆ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಎಸ್​ಐಟಿ ಮೂಲಗಳು ತಿಳಿಸಿವೆ.

ನಾಗೇಂದ್ರ, ದದ್ದಲ್​ಗೆ ಏನೇನು ಪ್ರಶ್ನೆಗಳನ್ನು ಕೇಳಿತ್ತು ಎಸ್​ಐಟಿ?

ಪರಶುರಾಮ್, ಪದ್ಮನಾಭ ಆಡಿಯೋದಲ್ಲಿ ನಿಮ್ಮ ಬಗ್ಗೆ ಹೇಳುತ್ತಾರೆ, ನಿಮ್ಮ ಪಾತ್ರವಿಲ್ಲದೇ ಅವರು ನಿಮ್ಮ ಹೆಸರು ಹೇಳಲು ಸಾಧ್ಯವೇ? ನೆಕ್ಕುಂಟಿ ನಾಗರಾಜ್ ಖಾತೆ ಓಪನ್ ಮಾಡಲು ಒತ್ತಡ ಹಾಕಿದ್ದರು. ಸಚಿವರ ಕಚೇರಿಯಿಂದ ಒತ್ತಡವಿತ್ತು ಅಂತಾ ಆಡಿಯೋದಲ್ಲಿ ಇದೆ. ನಿಮಗೆ ಗೊತ್ತಿಲ್ಲದೇ ನಿಮ್ಮ ಕಚೇರಿಯಿಂದ ಒತ್ತಡ ಹೇರಲು ಸಾಧ್ಯವೇ? ನಕಲಿ ಖಾತೆ ತೆರೆದು ಹಣ ವರ್ಗಾವಣೆ ಮಾಡಲು ಹೇಳಿದ್ದು ಯಾರು? ಎಂಬೆಲ್ಲ ಪ್ರಶ್ನೆಗಳನ್ನು ನಾಗೇಂದ್ರಗೆ ಎಸ್ಐಟಿ ಅಧಿಕಾರಿಗಳು ಕೇಳಿದ್ದರು.

ಇದನ್ನೂ ಓದಿ: ಮಿನಿಸ್ಟರ್ ಕಡೆಯಿಂದ ಪ್ರೆಶರ್ ಬಂತು: ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದ ಆಡಿಯೋ ವೈರಲ್

ಶಾಸಕ ದದ್ದಲ್​ರನ್ನೂ ಎಸ್​ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ನಿಗಮದ ಅಧ್ಯಕ್ಷರಾದ ನಿಮಗೆ ಈ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದಿರಲಿಲ್ವಾ? ನಿಮ್ಮ ಗಮನಕ್ಕೆ ಬಾರದೇ ಇಷ್ಟು ಹಣ ವರ್ಗಾವಣೆ ಹೇಗೆ ಸಾಧ್ಯ? ಮಾಜಿ ಸಚಿವ ನಾಗೇಂದ್ರ ನಿಮ್ಮನ್ನು ಸಂಪರ್ಕ ಮಾಡಿರಲಿಲ್ವಾ? ಹಣ ವರ್ಗಾವಣೆ ಬಗ್ಗೆ ನಿಮ್ಮ, ನಾಗೇಂದ್ರ ನಡುವೆ ಮಾತುಕತೆ ಆಗಿತ್ತಾ? ಎಂಡಿ ಪದ್ಮನಾಭ ಈ ವಿಚಾರ ನಿಮ್ಮ ಗಮನಕ್ಕೆ ತಂದಿದ್ದು ಯಾವಾಗ? ಹಣ ವರ್ಗಾವಣೆ ಸಮಯದಲ್ಲಿ ಚೆಕ್​ಗೆ ಸಹಿ ಮಾಡೋದು ಯಾರು ಎಂದು ದದ್ದಲ್​​ರನ್ನು ಎಸ್​ಐಟಿ ಅಧಿಕಾರಿಗಳು ಪ್ರಶ್ನಿಸಿದ್ದರು ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:34 am, Wed, 10 July 24