Vande Bharat Train: ಇಂದು ಚಾಲನೆ ನೀಡಲಾಗುತ್ತಿರುವ ವಂದೇ ಭಾರತ್ ರೈಲಿನ ವೈಶಿಷ್ಟ್ಯಗಳು ಇಲ್ಲಿವೆ

ಇಂದು ಪ್ರಧಾನಿ ಮೋದಿ ಅವರು ವಂದೇ ಭಾರತ್ ನಂತರ, ಭಾರತ್ ಗೌರವ್ ಕಾಶಿ ದರ್ಶನ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲು ಚಾಲನೆ ನೀಡಲಾಗುತ್ತಿದೆ.

Vande Bharat Train: ಇಂದು ಚಾಲನೆ ನೀಡಲಾಗುತ್ತಿರುವ ವಂದೇ ಭಾರತ್ ರೈಲಿನ ವೈಶಿಷ್ಟ್ಯಗಳು ಇಲ್ಲಿವೆ
ಇಂದು ಚಾಲನೆ ನೀಡಲಾಗುತ್ತಿರುವ ವಂದೇ ಭಾರತ್ ರೈಲಿನ ವೈಶಿಷ್ಟ್ಯಗಳು
Follow us
TV9 Web
| Updated By: Rakesh Nayak Manchi

Updated on:Nov 11, 2022 | 9:13 AM

ಬೆಂಗಳೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ನಗರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ವಂದೇ ಭಾರತ್ ರೈಲು (Vande Bharat Train) ಮತ್ತು ಭಾರತ್ ಗೌರವ್ ಕಾಶಿ ದರ್ಶನ (Bharat Gaurav Kashi Darshan train) ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಮೊದಲಿಗೆ 10.25ಕ್ಕೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿರುವ ಮೋದಿ, 10.33 ಕ್ಕೆ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲುಗಳಿಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಏಳು ಅಥವಾ ಎಂಟನೇ ಪ್ಲಾಟ್ ಫಾರಂನಲ್ಲಿ ಚಾಲನೆ ದೊರಕಲಿದೆ. ಇಂದು ವಂದೇ ಭಾರತ್ ರೈಲಿನಲ್ಲಿ ಕೆಲವೇ ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ಇರಲಿದ್ದು, ಸಿಟಿ ರೈಲ್ವೆ ನಿಲ್ದಾಣದಿಂದ ಮುಂದಿನ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರಿಗೂ ಸಂಚರಿಸಲು ಅವಕಾಶ ಇರಲಿದೆ.  ಹಾಗಿದ್ದರೆ ವಂದೇ ಭಾರತ್ ರೈಲಿನ ವೈಶಿಷ್ಟ್ಯಗಳು (Vande Bharat Train Features) ಏನು? ಇಲ್ಲಿದೆ ನೋಡಿ.

ಇಂದಿನಿಂದ ಮೈಸೂರು, ಬೆಂಗಳೂರು ಮತ್ತು ಚೆನ್ನೈಗೆ ಸೇವೆ ಆರಂಭಿಸಲಿರುವ ವಂದೇ ಭಾರತ್ ರೈಲು ಹವಲು ವಿಶೇಷಣಗಳನ್ನು ಒಳಗೊಂಡಿದೆ. ಭಾರತದ ಮೊದಲ ಇಂಜಿನ್ ರಹಿತ ಸೆಮಿ ಹೈ ಸ್ಪೀಡ್ ರೈಲು ಇದಾಗಿದ್ದು, ಇದರಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಮಾನ ರೀತಿಯಲ್ಲಿ ಅನುಭವ ನೀಡಲಿದೆ. ಒಂದು ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ ಈ ರೈಲು, ಮೈಸೂರು ಟೂ ಚೆನ್ನೈ ಸೆಂಟ್ರಲ್​ವರೆಗೆ ಸಂಚರಿಸಲಿದೆ.

ಇಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಕೆಎಸ್​ಆರ್)ದಿಂದ ಬೆಳಿಗ್ಗೆ 10.25 ಕ್ಕೆ ಬಿಟ್ಟು ಸಂಜೆ 5.20ಕ್ಕೆ ಚೆನ್ನೈ ತಲುಪಲಿದೆ. ಒಟ್ಟು ಹದಿನಾರು ಕೋಚ್​ಗಳನ್ನು ಹೊಂದಿರುವ ವಂದೇ ಭಾರತ್ ರೈಲು, ಮೇಕ್ ಇನ್ ಇಂಡಿಯಾದಡಿ ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸಲಾಗಿದೆ.

ವಂದೇ ಭಾರತ್ ರೈಲಿನ ವಿಶೇಷತೆಗಳು

ಇಂಟಲಿಜೆಂಟ್ ಬ್ರೇಕಿಂಗ್ ಸಿಸ್ಟಮ್, ಆಟೋಮ್ಯಾಟಿಕ್ ಡೋರ್, ಜಿಪಿಎಸ್ ಬೇಸ್ಡ್ ಆಡಿಯೋ ವಿಷುಯಲ್ ಪ್ಯಾಸೆಂಜರ್ ಇನ್ಫಾರ್ಮೇಶನ್, ಉಚಿತ ವೈಫೈ, ತಿರುಗುವ ಆಸನಗಳು, ಸಂಪೂರ್ಣ ಹವಾನಿಯಂತ್ರಿತ, 1128 ಆಸನದ ಸಾಮರ್ಥ್ಯ, ಬಯೋ ವ್ಯಾಕುಮ್ ಟಾಯ್ಲೆಟ್ ಒಳಗೊಂಡಿದೆ.

ಮೈಸೂರು ಪ್ರಯಾಣ ದರ, ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್:

ಎಸಿ ಕೋಚ್​ನಲ್ಲಿ ಪ್ರಯಾಣಿಸಲು ಚೆನ್ನೈನಿಂದ ಮೈಸೂರಿಗೆ 1200 ರೂ. ಮತ್ತು ಎಕ್ಸಿಕ್ಯೂಟಿವ್ ಕೋಚ್​ನಲ್ಲಿ ಚೆನ್ನೈನಿಂದ ಮೈಸೂರಿಗೆ ಪ್ರಯಾಣಿಸಲು 2295 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಅದೇ ರೀತಿ ಮೈಸೂರಿನಿಂದ ಚೆನ್ನೈಗೆ ಎಸಿ ಕೋಚ್​ನಲ್ಲಿ 1365 ರೂ. ಮತ್ತು ಎಕ್ಸಿಕ್ಯುಟಿವ್ ಕೋಚ್​ನಲ್ಲಿ 2485 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಮೈಸೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಮೈಸೂರಿನಿಂದ ಚೆನ್ನೈಗೆ ದೂರವನ್ನು ಕ್ರಮಿಸಲು 6 ಗಂಟೆ 25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಚೆನ್ನೈನಿಂದ ಮೈಸೂರಿಗೆ ದೂರವನ್ನು ಕ್ರಮಿಸಲು 6 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಮೇಲಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಯಾವುದೇ ರಿಯಾಯಿತಿ ಮತ್ತು ಮಕ್ಕಳ ಶುಲ್ಕವನ್ನು ಅನುಮತಿಸಲಾಗುವುದಿಲ್ಲ. ಪೂರ್ಣ ದರದ ವಯಸ್ಕ ಟಿಕೆಟ್‌ಗಳನ್ನು ಮಾತ್ರ ನೀಡಲಾಗುತ್ತದೆ. ಬುಕಿಂಗ್, ರದ್ದತಿ, ಮರುಪಾವತಿ ಇತ್ಯಾದಿಗಳಿಗೆ ಇತರ ನಿಯಮಗಳು ಮತ್ತು ಷರತ್ತುಗಳು ಶತಾಬ್ದಿ ರೈಲುಗಳ ಪ್ರಕಾರವೇ ಇರುತ್ತವೆ.

ರೈಲು ಸಂಖ್ಯೆ 20607/20608 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ನಿಯಮಿತ ಕಾರ್ಯಾಚರಣೆಯು ನವೆಂಬರ್ 12 ರಂದು ಮತ್ತು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಮತ್ತು ಮೈಸೂರು ಎರಡೂ ಸ್ಥಳಗಳಿಂದ ಪ್ರಾರಂಭವಾಗಲಿದೆ. ರೈಲು ಸಂಖ್ಯೆ 20607/20608 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಾರದಲ್ಲಿ ಆರು ದಿನಗಳು (ಬುಧವಾರ ಹೊರತುಪಡಿಸಿ) ನಿರ್ವಹಿಸಲಾಗುತ್ತದೆ.

ಭಾರತ್ ಗೌರವ್ ಕಾಶಿ ದರ್ಶನ ರೈಲು

ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಚಾಲನೆ ದೊರಕಲಿದ್ದು, ಬನಾರಸ್​ವರೆಗೆ ಸಂಚರಿಸಲಿದೆ. ಬೆಳಿಗ್ಗೆ 10.33ಕ್ಕೆ ಪ್ರಧಾನಿ ಮೋದಿಯಿಂದ ಚಾಲನೆ ದೊರಕಲಿದ್ದು, 13ರಂದು ಭಾನುವಾರ ಬನಾರಸ್ ತಲುಪಲಿದೆ. ಮುಜರಾಯಿ ಇಲಾಖೆಯ ಅಡಿಯಲ್ಲಿ ಸಂಚಾರ ಮಾಡಲಿರುವ ಈ ರೈಲು, ಬನಾರಸ್​ನಿಂದ ನ.15 ರಂದು ಬೆಳಿಗ್ಗೆ 5.30ಕ್ಕೆ ಹೊರಟು ನ.18 ರಂದು ಸಂಜೆ 6.40ಕ್ಕೆ ಬೆಂಗಳೂರು ತಲುಪಲಿದೆ. ಒಟ್ಟು ಹದಿನಾಲ್ಕು ಕೋಚ್​ಗಳುಳ್ಳ ಈ ರೈಲಿನಲ್ಲಿ ಪ್ರಯಾಣಿಸುವವರಿಗೆ ಮುಜರಾಯಿ ಇಲಾಖೆಯಿಂದ ಐದು ಸಾವಿರ ರುಪಾಯಿ ಸಬ್ಸಿಡಿ ನೀಡಲಾಗುತ್ತದೆ.

ರೈಲಿನ ಸಾರಥಿಗಳು ಇವರೇ ನೋಡಿ

ಇಂದು ಮೋದಿ ಚಾಲನೆ ನೀಡುವ ರೈಲಿಗೆ ಸುರೇಂದ್ರನ್ ಹಾಗೂ ರವಿಚಂದ್ರನ್ ಸಾರಥಿಗಳಾಗಿದ್ದಾರೆ. ಇವರಿಬ್ಬರು ಟಿವಿ9 ಜೊತೆ ಮಾತನಾಡಿದ್ದಾರೆ. ಮೂವತ್ತು ವರ್ಷ ಸರ್ವಿಸ್ ಮಾಡಿದ್ದೇನೆ ಎಂದು ಹೇಳಿದ ಸುರೇಂದ್ರನ್, ಇವತ್ತು ನನಗೆ ದೊಡ್ಡ ಉಡುಗೊರೆ ಸಿಕ್ಕಿದೆ. ಸ್ವತಃ ಪ್ರಧಾನಿಗಳು ಉದ್ಘಾಟನೆ ಮಾಡುವ ರೈಲಿನ ಚಾಲಕರಾಗಿ ನಾವು ನೇಮಕ ಆಗಿದ್ದೇವೆ. ದೆಹಲಿಯಲ್ಲಿ ನಮ್ಮಗೆ ವಂದೇ ಭಾರತ್ ರೈಲಿನ ತರಬೇತಿ ನೀಡಲಾಗಿದೆ. ನಾವು ಇಷ್ಟು ದಿನ ಪ್ರಧಾನಿಯವರನ್ನ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ನೋಡಿದ್ದೆವು. ಆದರೆ ಇವತ್ತು ನೇರವಾಗಿ ನೋಡುತ್ತಾ ಇದ್ದೇವೆ. ಇಂತಹ ಪ್ರಧಾನಿ ನಮಗೆ ಸಿಕ್ಕಿರುವುದು ಅದೃಷ್ಟ ಎಂದರು.‘

ಇಷ್ಟು ದಿನ ನಾವು ಓಡಿಸಿರುವ ರೈಲುಗಳು ವಿದೇಶಿ ನಿರ್ಮಿತವಾಗಿದ್ದವು, ಆದರೆ ವಂದೇ ಭಾರತ್ ರೈಲು ಭಾರತ ದೇಶದಲ್ಲೇ ನಿರ್ಮಾಣ ಆಗಿರುವುದು ನಮ್ಮ‌ಹೆಮ್ಮೆ. ರೈಲು ಓಡಿಸಲು ಸುಲಭವಾಗಿರುತ್ತದೆ. 4.30 ಗಂಟೆಗಳಲ್ಲಿ ನಾವು ಚೆನ್ನೈ ತಲುಪುತ್ತೇವೆ. ರೈಲಿನ ಎಲ್ಲಾ ದ್ವಾರಗಳು ತೆರೆಯುವ ಮತ್ತು ಮುಚ್ಚುವ ವ್ಯವಸ್ಥೆ ಚಾಲಕನ ಬಳಿ ಇರುತ್ತದೆ. ಹಿಂಬದಿ ಇರುವ ಸಿಬ್ಬಂದಿ ಡೋರ್ ಓಪನ್ ಕ್ಲೋಸ್ ಮಾಡುತ್ತಾರೆ ಎಂದರು. ಅಲ್ಲದೆ, ಇದು ಅಟೋಮೆಟಿಕ್ ಡೋರ್ ಆಗಿರುವುದರಿಂದ ಮುಂಚಿತವಾಗಿಯೇ ಪ್ರಯಾಣಿಕರು ಒಳಗೆ ಇರಬೇಕು ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ಅವರು, ಈಗ ಸೀಟಿಂಗ್ ಇರುವ ವಂದೇ ಭಾರತ್ ರೈಲು ಬಂದಿದೆ. ಮುಂದೆ ಸ್ಲೀಪರ್ ಕೋಚ್ ಇರುವ ರೈಲು ಬರಲಿದೆ ಎಂದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:52 am, Fri, 11 November 22