ಬೆಲ್ಲ ಬೆಲ್ಲ ಮಂಡ್ಯದ ಬೆಲ್ಲ ಅಂದ್ರೆ ಸಾಕು ಗೃಹಿಣಿಯರು ದೂರ ಓಡಿಹೋಗ್ತಿದ್ದಾರೆ! ಯಾಕೆ ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Dec 11, 2020 | 2:59 PM

ಬೆಲ್ಲ ಬೆಲ್ಲ.. ಮಂಡ್ಯದ ಬೆಲ್ಲ! ಅನ್ನೋ ಕಾಲ ಈಗ ದೂರವಾಗುತ್ತಿದೆ. ಸಕ್ಕರೆ ನಾಡಿನಲ್ಲಿ ತಯಾರಿಸುತ್ತಿರುವ ಬೆಲ್ಲ ಅಂದ್ರೆ ಗೃಹಿಣಿಯರು ದೂರ ಓಡಿಹೋಗುವಂತಾಗಿದೆ. ಬೆಲ್ಲ ತಯಾರಿಕೆಯಲ್ಲಿ ಕೆಮಿಕಲ್ಸ್‌ ಮತ್ತು ಸಕ್ಕರೆ ಮಿಕ್ಸ್‌ ಮಾಡಲಾಗುತ್ತಿದೆಯಂತೆ! ಇದರಿಂದ ಪರಿಶುದ್ಧ ಬೆಲ್ಲ ತಯಾರಕ ರೈತರು ಸುಸ್ತೂ ಸುಸ್ತು! ಯಾಕೆ ಹೀಗೆ? ಖಡಕ್ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಏನನ್ತಾರೆ?

ಬೆಲ್ಲ ಬೆಲ್ಲ ಮಂಡ್ಯದ ಬೆಲ್ಲ ಅಂದ್ರೆ ಸಾಕು ಗೃಹಿಣಿಯರು ದೂರ  ಓಡಿಹೋಗ್ತಿದ್ದಾರೆ! ಯಾಕೆ ಗೊತ್ತಾ?
ಮಂಡ್ಯ ಬೆಲ್ಲಕ್ಕೆ ಕೆಮಿಕಲ್ಸ್‌ ಮಿಕ್ಸ್?
Follow us on

ಮಂಡ್ಯ: ಈ ಜಿಲ್ಲೆ ಇಡೀ ರಾಜ್ಯಕ್ಕೆ ಸಿಹಿ ಉಣಿಸುತ್ತಿರುವ ಜಿಲ್ಲೆ ಅಂತಾನೇ ಫೇಮಸ್‌.‌ ಇಲ್ಲಿನ ಬೆಲ್ಲಕ್ಕೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಫುಲ್ ಡಿಮ್ಯಾಂಡ್ ಇದೆ. ಹೀಗಿರುವಾಗ ಇಲ್ಲಿನ ಬೆಲ್ಲ ಇದೀಗ ತನ್ನ ಮೊದಲಿನ ಅಸ್ತಿತ್ವ ಕಳೆದುಕೊಳ್ಳಲಾರಂಭಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಬೆಲ್ಲ ತಯಾರಿಕೆಯಲ್ಲಿ ಕಳಪೆ ಗುಣಮಟ್ಟದ ಸಕ್ಕರೆಯನ್ನ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ.

ಸಮಗ್ರ ವರದಿಗೆ ಜಿಲ್ಲಾಧಿಕಾರಿ ಸೂಚನೆ
ಜಿಲ್ಲೆಯ ವಿವಿಧ ಆಲೆಮನೆಗಳಲ್ಲಿ ಈ ಸಕ್ಕರೆ ಹಾಕಿ ಬೆಲ್ಲ ತಯಾರಿಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಇದು ಪರಿಶುದ್ಧ ಬೆಲ್ಲ ತಯಾರಿಸುವ ರೈತರಲ್ಲಿ ಆತಂಕವನ್ನುಂಟು ಮಾಡಿದೆ. ಹೀಗಾಗಿ ಈ ಬಗ್ಗೆ ವಿಚಾರಣೆ ನಡೆಸಿ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಉತ್ತರ ಭಾರತದಿಂದ ಬಂದ ಅಲೆಮನೆಯ ಕೆಲಸಗಾರರ ಕುತಂತ್ರ:
ಸಕ್ಕರೆ ನಾಡು ಮಂಡ್ಯ ಅಂದ್ರೆ ಇಡೀ ರಾಜ್ಯದಲ್ಲೇ ಬೆಲ್ಲಕ್ಕೆ ಫೇಮಸ್. ಇಲ್ಲಿನ ಅಲೆಮನೆಗಳಲ್ಲಿ ಮಾಡುವ ರಾಸಾಯನಿಕ ರಹಿತ ಬೆಲ್ಲಕ್ಕೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಬೇಡಿಕೆ ಇದೆ. ಹೀಗಿರುವಾಗ ಮಂಡ್ಯ ಜಿಲ್ಲೆಯ ಬೆಲ್ಲದ ಗುಣಮಟ್ಟ ಕೆಡುವುದರ ಜೊತೆಗೆ, ಈ ಜಿಲ್ಲೆಯ ಬೆಲ್ಲದ ವರ್ಚಸ್ಸು ಕೂಡ ಕಡಿಮೆಯಾಗುತ್ತಿದೆ‌.‌ ಇದಕ್ಕೆ ಮೂಲ ಕಾರಣ ಉತ್ತರ ಭಾರತದಿಂದ ಬಂದಿರುವ ಅಲೆಮನೆಯ ಕೆಲಸಗಾರರು.

ಇವರು ಬೆಲ್ಲವನ್ನ ತಯಾರು ಮಾಡುವ ವಿಧಾನವನ್ನೇ ಬದಲಾಯಿಸಿದ್ದಾರೆ. ಈ ಕಾರ್ಮಿಕರು ಇಲ್ಲಿನ ಅಲೆಮನೆಗಳ ಕೆಲವು ಮಾಲೀಕರಿಗೆ ಬೆಲ್ಲವನ್ನು ಸಕ್ಕರೆಯಿಂದಲೂ ತಯಾರಿಸಬಹುದು ಎಂಬುದಾಗಿ ತೋರಿಸಿಕೊಟ್ಟಿದ್ದಾರಂತೆ. ಹೀಗಾಗಿ ಜಿಲ್ಲೆಯ ಕೆಲ ಅಲೆಮನೆಗಳಲ್ಲಿ ಈ ರೀತಿ ಕಬ್ಬಿನ ಹಾಲಿನ ಜೊತೆಯಲ್ಲಿ ಸಕ್ಕರೆ ಹಾಕಿ ಬೆಲ್ಲ ತಯಾರಿಸಲಾಗುತ್ತಿದೆ. ಹೀಗೆ ಬೆಲ್ಲದ ಕೊಪ್ಪರಿಗೆಯಲ್ಲಿ ಸಕ್ಕರೆ ಹಾಕಿ ಬೆಲ್ಲ ಮಾಡುತ್ತಿರುವ ವಿಡಿಯೋ ಸದ್ಯ ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮಾಮೂಲಿಯಾಗಿ ಬೆಲ್ಲ ತಯಾರಿಸುವ ರೈತರು ಈಗ ಆತಂಕಗೊಂಡಿದ್ದಾರೆ.

ಬೆಲ್ಲ ಕಲರ್ ಬರಲಿ ಎಂದು ಕೆಮಿಕಲ್ ಬಳಕೆ:
ಜಿಲ್ಲೆಯಲ್ಲಿ ಕೆಮಿಕಲ್ ಹಾಕದೆ ಬೆಲ್ಲ ತಯಾರಿಸುತ್ತಿದ್ದ ದಿನಗಳಲ್ಲಿ ಇಲ್ಲಿನ ಬೆಲ್ಲಕ್ಕೆ ಒಳ್ಳೆಯ ಬೇಡಿಕೆ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಲ್ಲ ತಯಾರಿಕೆಯಲ್ಲಿ ಕೆಮಿಕಲ್ ಬಳಸುತ್ತಿರೋದು, ಜೊತೆಗೆ ಈ ರೀತಿ ಕಳಪೆ ಗುಣಮಟ್ಟದ ಸಕ್ಕರೆ ಹಾಕಿ ಬೆಲ್ಲ ತಯಾರಿಸುತ್ತಿರೋದು ಹೆಚ್ಚಾಗಿರೋದರಿಂದ, ಬೆಲ್ಲಕ್ಕೆ ಹೊರಗಡೆ ಮಾರ್ಕೆಟ್ ಮೌಲ್ಯ ಕುಸಿದು ಬಿದ್ದಿದೆಯಂತೆ. ಜೊತೆಗೆ ಬೆಲ್ಲ ಕಲರ್ ಬರಲಿ ಅನ್ನೋ ಕಾರಣಕ್ಕೆ ಕೆಮಿಕಲ್ ಸಹ ಹಾಕಲಾಗುತ್ತಿದ್ದು ಕೆಮಿಕಲ್ ಹಾಕಿರುವ ಬೆಲ್ಲವನ್ನು ಸೇವನೆ ಮಾಡಿದರೆ ಜನರಿಗೆ ಹಲವು ರೋಗಗಳು ಬರುವ ಸಾಧ್ಯತೆಗಳು ಇವೆ ಎನ್ನಲಾಗ್ತಿದೆ.

ಆಹಾರ ಇಲಾಖೆ ಅಧಿಕಾರಿಗಳಿಗೆ DC ಡಾ ವೆಂಕಟೇಶ್ ಸೂಚನೆ
ಅಲೆಮನೆಗಳನ್ನ ನಡೆಸುತ್ತಿರುವ ರೈತರು, ಸಕ್ಕರೆ ಹಾಕಿ ಬೆಲ್ಲ ತಯಾರಿಸುತ್ತಿರುವವರ ವಿರುದ್ಧ ಕ್ರಮಕ್ಕಾಗಿ ದೂರು ನೀಡಿದ್ದಾರೆ. ಹೀಗಾಗಿ ಈ ಸಂಬಂಧ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಎಲ್ಲೆಲ್ಲಿ ಈ ರೀತಿ ಸಕ್ಕರೆಯಿಂದ ಬೆಲ್ಲ ಮಾಡಲಾಗುತ್ತಿದೆ ಅನ್ನೋದರ ವರದಿ ನೀಡುವಂತೆ ಸೂಚಿಸಿದ್ದಾರೆ.

ಸಕ್ಕರೆಯಿಂದ ತಯಾರಿಸಿದ ಬೆಲ್ಲ ಸೇವನೆ ಎಷ್ಟು ಸರಿ:
ಈ ರೀತಿಯಾಗಿ ಸಕ್ಕರೆಯಿಂದ ತಯಾರಿಸಿದ ಬೆಲ್ಲವನ್ನ ಸೇವನೆ ಮಾಡೋದರಿಂದ ನಮ್ಮ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮ ಬೀರುವುದಿಲ್ಲ. ಯಾಕಂದ್ರೆ ಸಕ್ಕರೆ ಹಾಗೂ ಬೆಲ್ಲ ಸಮಪ್ರಮಾಣದಲ್ಲೇ ಸಿಹಿಯ ಅಂಶವನ್ನ ಹೊಂದಿವೆ. ರೈತರು ಮಾರುಕಟ್ಟೆಗೆ ಅನುಗುಣವಾಗಿ ಈ ರೀತಿ ಮಾಡ್ತಾರೆ ಎಂದು ಮೈಸೂರು ವಿವಿಯ ಸಕ್ಕರೆ ತಂತ್ರಜ್ಞಾನ ವಿಭಾಗದ ಸಿಬ್ಬಂದಿ ಅಭಿಪ್ರಾಯ ಪಟ್ಟಿದ್ದಾರೆ.

ಆದ್ರೆ ಇಷ್ಟೆಲ್ಲಾ ಹೇಳೋ ಮೈಸೂರು ವಿವಿಯ ಸಕ್ಕರೆ ತಂತ್ರಜ್ಞಾನ ವಿಭಾಗದ ಡಾ ಮನೋಹರ್, ಬೆಲ್ಲಕ್ಕೆ ಬಣ್ಣ ಬರಲು ಕೆಮಿಕಲ್ಸ್‌ ಮಿಕ್ಸ್‌ ಮಾಡೋದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಮಾತ್ರ ಬಾಯಿಬಿಡುತ್ತಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಮಂಡ್ಯದ ಬೆಲ್ಲವನ್ನು ಖರೀದಿ ಮಾಡಲು ಮಾರುಕಟ್ಟೆಯಲ್ಲಿ ಜನ ಹಿಂದೆ ಮುಂದೆ ನೋಡುತ್ತಿದ್ದಾರೆ.

ತಕ್ಷಣವೇ ಈ ಪರಿಸ್ಥಿತಿ ಕುರಿತು ರೈತರಿಗೆ ಸೂಕ್ತ ತಿಳಿವಳಿಕೆ ಹಾಗೂ ಮಾರ್ಗದರ್ಶನ ಮಾಡಬೇಕಿದೆ. ಇಲ್ಲದಿದ್ರೆ ಒಂದು ಕಾಲದಲ್ಲಿ ಮಂಡ್ಯದ ಬೆಲ್ಲಕ್ಕೆ ಮುಗಿ ಬೀಳುತ್ತಿದ್ದವರು, ಓಡಿಹೋಗುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.