ಬೆಂಗಳೂರು, ಮಾ.01: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ (Vidhana Soudha Pro Pakistan Slogan) ಕೂಗಿದ ಪ್ರಕರಣಕ್ಕೆ ಸಂಬಂಧಸಿದಂತೆ ವಿಧಾನಸೌಧ ಪೊಲೀಸರು (Vidhana Soudha Police) ಇಲ್ಲಿಯವರೆಗು ಏಳು ಜನರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ. ವಿಚಾರಣೆ ವೇಳೆ ಏಳು ಜನ ತಾವು ಪಾಕಿಸ್ತಾನ (Pakistan) ಪರ ಘೋಷಣೆ ಕೂಗಿಲ್ಲ ಎಂದು ಹೇಳಿದ್ದಾರೆ. ಈ ಏಳು ಮಂದಿ ಐಕಿ ಪೈಕಿ ಮೂವರ ಧ್ವನಿ ಮಾದರಿಯನ್ನು ಪೊಲೀಸರು ಪಡೆದು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಗೆ ರವಾನೆ ಮಾಡಿದ್ದಾರೆ. ಇನ್ನು ಧ್ವನಿ ಮಾದರಿ ಜೊತೆಗೆ ವಿಡಿಯೋ ತುಣಕನ್ನು ಕಳುಹಿಸಿದ್ದಾರೆ. ಪೊಲೀಸರು ಎಲ್ಲ ಮಾಧ್ಯಮಗಳಿಂದ ವಿಡಿಯೋ ತುಣಕುಗಳನ್ನು ಪಡೆದಿದ್ದಾರೆ. ಈ ಎಲ್ಲ ವಿಡಿಯೋಗಳಲ್ಲಿ ಕೇವಲ ಒಂದು ವಿಡಿಯೋ ತುಣುಕನ್ನು ಮಾತ್ರ ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದೆ.
ಇನ್ನು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ಮೇಲೆ ವಿಧಾನಸೌಧ ಪೊಲೀಸರು 26 ಜನರ ಪಟ್ಟಿ ತಯಾರಿಸಿದ್ದು, ಇನ್ನೂ 19 ಜನರ ವಿಚಾರಣೆ ಬಾಕಿ ಇದೆ.
ಇದನ್ನೂ ಓದಿ: ಪಾಕ್ ಪರ ಘೋಷಣೆ: ವಿಧಿವಿಜ್ಞಾನದಲ್ಲಿ ವಿಡಿಯೋ ತನಿಖೆ ಹೇಗೆ ನಡೆಯುತ್ತದೆ ಗೊತ್ತಾ? ಸೈಬರ್ ಮಾಹಿತಿ ಇಲ್ಲಿದೆ
ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ವಿಜಯೋತ್ಸವದ ವೇಳೆ ಪಕ್ಕದಲ್ಲಿ ಇದ್ದ ಬೆಂಬಲಿಗ ಬ್ಯಾಡಗಿ ಮೂಲದ ಮೊಹಮ್ಮದ್ ಶಫಿ ನಾಶಿಪುಡಿ ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಹೀಗಾಗಿ ಬುಧವಾರ ಬ್ಯಾಡಗಿಗೆ ತೆರಳಿದ್ದ ಪೊಲೀಸರ ತಂಡ, ಮೊಹಮ್ಮೆದ್ ಶಫಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಈತನ ಧ್ವನಿ ಮಾದರಿ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಮಂಗಳವಾರ (ಫೆ.27) ರಂದು ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಿದ ಕಾಂಗ್ರೆಸ್‌ನ ನಾಸಿರ್ ಹುಸೇನ್ ಬೆಂಬಲಿಗರು ನಾಸಿರ್ ಹುಸೇನ್ ಪರ ಘೋಷಣೆ ಕೂಗಿದ್ದರು. ಇದರ ನಡುವೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ