Hampi Utsav 2024: ಹಂಪಿ ಉತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ: ಇಲ್ಲಿದೆ ಉತ್ಸವದ ವಿಶೇಷಗಳ ವಿವರ

| Updated By: Digi Tech Desk

Updated on: Feb 02, 2024 | 9:22 AM

ಹಂಪಿ ಉತ್ಸವ 2024: ಮೂರು ದಿನಗಳ ಹಂಪಿ ಉತ್ಸವ ಸಂಭ್ರಮ ಇಂದಿನಿಂದ (ಶುಕ್ರವಾರದಿಂದ) ಆರಂಭವಾಗಲಿದೆ. ಏಕಕಾಲದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ವಿಜಯನಗರ ಜಿಲ್ಲಾಡಳಿತವು ವ್ಯಾಪಕವಾದ ವ್ಯವಸ್ಥೆಗಳನ್ನು ಮಾಡಿದ್ದು, ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿದೆ. ಹೆಲಿ ರೈಡ್​ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಪ್ರವಾಸಿಗರಿಗಾಗಿ ಮಾಡಲಾಗಿದೆ. ಉತ್ಸವದಲ್ಲಿ ಏನೇನಿದೆ ಎಂಬ ವಿವರ ಇಲ್ಲಿದೆ.

Hampi Utsav 2024: ಹಂಪಿ ಉತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ: ಇಲ್ಲಿದೆ ಉತ್ಸವದ ವಿಶೇಷಗಳ ವಿವರ
ಇಂದಿನಿಂದ ಮೂರು ದಿನ ಹಂಪಿ ಉತ್ಸವ
Follow us on

ವಿಜಯನಗರ, ಫೆಬ್ರವರಿ 2: ಬಹಳ ವಿಳಂಬದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih) ಅವರು ಇಂದು (ಶುಕ್ರವಾರ ಫೆಬ್ರವರಿ 2) ಮೂರು ದಿನಗಳ ಹಂಪಿ ಉತ್ಸವಕ್ಕೆ (Hampi Utsav 2024) ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾತ್ರಿ 8 ಗಂಟೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಂಪುಟದ ಹಲವು ಸಚಿವರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉತ್ಸವ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಜಯನಗರ ಜಿಲ್ಲಾಡಳಿತವು ಉತ್ಸವಕ್ಕೆ 17 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಿದ್ದು, ರಾಜ್ಯದಿಂದ 14 ಕೋಟಿ ರೂ. ನೀಡಲಾಗುತ್ತಿದೆ. ಉಳಿದ ಹಣವನ್ನು ಸ್ಥಳೀಯವಾಗಿ ಹೊಂದಿಸಲಾಗಿದೆ.

ಫೆಬ್ರವರಿ 2, 3 ಮತ್ತು 4 ರಂದು ಗ್ರಾಮೀಣ ಕ್ರೀಡೆಗಳು, ರಂಗೋಲಿ ಸ್ಪರ್ಧೆಗಳು, ಸಂಗೀತ, ಸಾಹಸ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಖ್ಯ ಕಾರ್ಯಕ್ರಮದ ಪೂರ್ವಭಾವಿಯಾಗಿ ಕಳೆದ ವಾರ ಜಿಲ್ಲಾಡಳಿತದ ವತಿಯಿಂದ ಬೈಕ್ ರ‍್ಯಾಲಿ, ತುಂಗಾ ಆರತಿ, ವಿವಿಧ ಕಲೆಗಳ ಪ್ರದರ್ಶನದಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಏಕಕಾಲದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಾಲ್ಕು ದೊಡ್ಡ ವೇದಿಕೆಗಳನ್ನು ರಚಿಸಲಾಗಿದೆ. ಹಂಪಿ ಉತ್ಸವದ ಸಂದರ್ಭದಲ್ಲಿ ಹಲವಾರು ಪ್ರಸಿದ್ಧ ಗಾಯಕರು ಮತ್ತು ಸಂಗೀತಗಾರರು ಪ್ರದರ್ಶನ ನೀಡಲಿದ್ದಾರೆ.

ಹೊಸಪೇಟೆ ರಸ್ತೆಯಲ್ಲಿ ವಿದ್ಯುತ್ ದೀಪಗಳ ಅಲಂಕಾರ

ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲು ವಿವಿಧ ಸಾಂಸ್ಕೃತಿಕ ತಂಡಗಳನ್ನು ನಿಯೋಜಿಸಲಾಗಿದೆ. ಹೊಸಪೇಟೆಯ ರಸ್ತೆಗಳಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಈ ಹಿಂದೆ ಪ್ರತಿ ವರ್ಷ ನವೆಂಬರ್ 3, 4 ಮತ್ತು 5 ರಂದು ಹಂಪಿ ಉತ್ಸವ ನಡೆಯುತ್ತಿತ್ತು. ಆದರೆ ಸರ್ಕಾರಗಳು ಬದಲಾದಂತೆ ದಿನಾಂಕಗಳನ್ನು ಸಹ ಬದಲಾಯಿಸಲಾಗಿದೆ.

ಹೆಲಿ ರೈಡ್ ವ್ಯವಸ್ಥೆ

ವಿಜಯನಗರ ಸಾಮ್ರಾಜ್ಯದ ಕುರುಹುಗಳನ್ನು ಆಕಾಶದಿಂದ ನೋಡಿ ಆನಂದಿಸಲು ಇಚ್ಛಿಸುವ ಪ್ರವಾಸಿಗರಿಗೆ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪ್ರಯಾಣಿಕರಿಗೆ 4,229 ರೂ. ನಿಗದಿಪಡಿಸಲಾಗಿದೆ. ಹೆಲಿಕಾಪ್ಟರ್ ರೈಡ್​ಗೆ ಪ್ರತಿ ಬಾರಿ ಐದರಿಂದ ಆರು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಇದನ್ನೂ ಓದಿ: ಫೆ.02 ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ; ಸಿದ್ದತೆಯ ವಿಡಿಯೋ ಇಲ್ಲಿದೆ

ಏತನ್ಮಧ್ಯೆ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯು ಹೊಸಪೇಟೆಯಿಂದ ಸಮೀಪದ ಹಳ್ಳಿಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ವಿಶೇಷ ಬಸ್‌ಗಳನ್ನು ಪ್ರಾರಂಭಿಸಿದೆ. ಬೇಡಿಕೆಯ ಆಧಾರದ ಮೇಲೆ ಸೇವೆಗೆ ಒತ್ತು ನೀಡಲು ಹೆಚ್ಚುವರಿ ಬಸ್‌ಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:47 am, Fri, 2 February 24