4 ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಕೇವಲ 24 ಗಂಟೆಯಲ್ಲಿ ಹರಿದುಬಂತು 5 TMC ನೀರು

ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ನೀರುಣಿಸುವ ಹಾಗೂ ಆಂಧ್ರ, ತೆಲಂಗಾಣಕ್ಕೆ ನೀರು ಪೂರೈಸುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 5 TMC ನೀರು ಹರಿದುಬಂದಿದೆ.

4 ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಕೇವಲ 24 ಗಂಟೆಯಲ್ಲಿ ಹರಿದುಬಂತು 5 TMC ನೀರು
ತುಂಗಭದ್ರಾ ಜಲಾಶಯ
Follow us
|

Updated on:Jul 23, 2023 | 4:16 PM

ವಿಜಯನಗರ, (ಜುಲೈ 23): ಜೂನ್​ನಲ್ಲಿ ಮುನಿಸಿಕೊಂಡಿದ್ದ ಮಳೆರಾಯ (rain) ಜುಲೈನಲ್ಲಿ ಕರ್ನಾಟಕದ(Karnataka) ಪಶ್ಚಿಮ ಘಟ್ಟದಲ್ಲಿ ಅಬ್ಬರಿಸುತ್ತಿದ್ದಾನೆ. ಇದರಿಂದ ಕರ್ನಾಟಕದ ಪ್ರಮುಖ ಜೀವನದಿಗಳಿಗೆ ಜೀವ ಕಳೆ ಬಂದಿದ್ದು, ಉಕ್ಕಿ ಹರಿಯುತ್ತಿವೆ. ಅದರಲ್ಲೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಸೇರಿ ಕರ್ನಾಟಕದ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ(tungabhadra reservoir)  ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ತುಂಗಭದ್ರಾ ಜಲಾಶಯಕ್ಕೆ 59,500 ಕ್ಯೂಸೆಕ್ ಒಳಹರಿವು ಬರುತ್ತಿದ್ದು, ನಿನ್ನೆವರೆಗೂ (ಜುಲೈ 22) ಜಲಾಶಯದಲ್ಲಿ 16.649 ಟಿಎಂಸಿ ನೀರು ಸಂಗ್ರಹವಾಗಿದೆ. ಇದರೊಂದಿಗೆ ಕಳೆದ 24 ಗಂಟೆಯಲ್ಲಿ ಡ್ಯಾಂಗೆ ಬರೋಬ್ಬರಿ 5 TMC ನೀರು ಹರಿದುಬಂದಿದೆ. ಇದರಿಂದ ಭತ್ತ ಬೆಳೆಯುವ ಈ ಭಾಗದ ರೈತರ ಆತಂಕ ದೂರವಾಗಿದೆ.

ಇದನ್ನೂ ಓದಿ: ಜುಲೈ 1ರಿಂದ ಜು.22ರ ವರೆಗೆ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಜಲಾಶಯಗಳ ಒಳಹರಿವು ಹೆಚ್ಚಳ

ಕಲ್ಯಾಣ- ಕರ್ನಾಟಕದ ನಾಲ್ಕು ಜಿಲ್ಲೆಗಳ ಜೀವನಾಡಿ ತುಂಗಭದ್ರಾಕ್ಕೆ ನಿನ್ನೆವರೆಗೂ ಡ್ಯಾಂನಲ್ಲಿ 16.649 ಟಿಎಂಸಿ ನೀರು ಸಂಗ್ರಹವಿತ್ತು. ಇಂದು (ಜುಲೈ 23) 21.356 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣವೂ ಹೆಚ್ಚಾಗಿದ್ದು, ಕಳೆದ 24 ತಾಸುಗಳಲ್ಲಿ 54, 657 ಕ್ಯೂಸೆಕ್ ನೀರು ನದಿಗೆ ಹರಿದು ಬಂದಿದೆ. ಸದ್ಯ ಜಲಾಶಯಕ್ಕೆ 41,572 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಈ ಬಾರಿ ಜೂನ್​ನಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ತುಂಗಭದ್ರಾ ಜಲಾಶಯ ತುಂಬಲ್ಲ. ನಮ್ಮ ಹೊಲ-ಗದ್ದೆಗಳಿಗೆ ನೀರಿಲ್ಲ ಬೆಳೆಗಳಿಲ್ಲ. ಈ ವರ್ಷ ಬರ ಗ್ಯಾರಂಟಿ ಎಂದು ಈ ಭಾಗದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ, ಜುಲೈನಲ್ಲಿ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಾ ಮತ್ತು ಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದುಬರುತ್ತಿದ್ದು, ರೈತರಲ್ಲಿ ಮೊಗದಲ್ಲಿ ಸಂತಸ ಮನೆ ಮಾಡಿದೆ.  ನಾಲ್ಕು ಜಿಲ್ಲೆಗಳಲ್ಲಿ ತುಂಗಭದ್ರಾ ಜಲಾಶಯವನ್ನು ನೆಚ್ಚಿಕೊಂಡು ಸುಮಾರು 12 ಲಕ್ಷ ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಹೆಚ್ಚಾಗಿ ಭತ್ತ ಬೆಳೆಯುವ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿಗೆ ಜಲಾಶಯದ ನೀರೆ ಆಧಾರವಾಗಿದೆ.

ತುಂಗಭದ್ರಾ ಜಲಾಶಯ ಕಳೆದ ವರ್ಷ ಅವಧಿಗೆ ಮುನ್ನವೇ ಸಂಪೂರ್ಣ ಭರ್ತಿಯಾಗಿತ್ತು. ಇದರಿಂದ ಈ ವೇಳೆ ಅಂದರೆ ಕಳೆದ ವರ್ಷ ಜು.12ಕ್ಕೆ ಕ್ರಸ್ಟ್ ಗೇಟ್​ಗಳನ್ನು ಓಪನ್​ ಮಾಡಿ ನದಿಗೆ ನೀರು ಬಿಡಲಾಗಿತ್ತು. ಅಲ್ಲದೆ, ಕಳೆದ ವರ್ಷ ದಾಖಲೆಯ ಪ್ರಮಾಣದಲ್ಲಿಒಳಹರಿವು ದಾಖಲಾಗಿತ್ತು. ಸುಮಾರು 125.90 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಹಾಗಾಗಿ ಈ ವೇಳೆಗಾಗಲೇ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ಮೇಲಕ್ಕೆತ್ತಿ ಕಾಲುವೆ ಹೊರತುಪಡಿಸಿ ಒಂದೇ ವಾರದಲ್ಲಿ ಸುಮಾರು 61 ಟಿಎಂಸಿ ನೀರನ್ನು ನದಿಗೆ ಹರಿಸಲಾಗಿತ್ತು. ಆದ್ರೆ, ಇದೀಗ ಜುಲೈ ತಿಂಗಳು ಕಳೆಯುತ್ತಾ ಬಂದರೂ ತುಂಗಭದ್ರಾ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಇದೀಗ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದಿರಂದ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ನೀರುಣಿಸುವ ಹಾಗೂ ಆಂಧ್ರ, ತೆಲಂಗಾಣಕ್ಕೆ ನೀರು ಪೂರೈಸುವ ತುಂಗಭದ್ರಾ ಜಲಾಶಯಕ್ಕೆ 105.78 ಟಿಎಂಸಿ ಅಡಿ ನೀಡು ಸಂಗ್ರಹ ಸಾಮರ್ಥ್ಯವಿದ್ದು, ಮುಂದಿನ ತಿಂಗಳಲ್ಲಿ  ಸಂಪೂರ್ಣವಾಗಿ ತುಂಬುವ ನಿರೀಕ್ಷೆಗಳಿವೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:10 pm, Sun, 23 July 23