ಜುಲೈ 1ರಿಂದ ಜು.22ರ ವರೆಗೆ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಜಲಾಶಯಗಳ ಒಳಹರಿವು ಹೆಚ್ಚಳ
ಜುಲೈ 1ರಿಂದ ಜುಲೈ 22ರ ವರೆಗೆ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರಾಜ್ಯದ ಜಲಾಶಯಗಳ ಒಳಹರಿವು ಹೆಚ್ಚಳವಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು, (ಜುಲೈ, 23): ಜೂನ್ನಲ್ಲಿ ಕೈಕೊಟ್ಟಿದ್ದ ಮುಂಗಾರು(monsoon) ಮಳೆ (Rain) ಜುಲೈನಲ್ಲಿ ಚುರುಕು ಪಡೆದುಕೊಂಡಿದ್ದು, ಜುಲೈ ಒಂದರಿಂದ ಇಂದಿನ ವರೆಗೆ ಕರ್ನಾಟಕದಲ್ಲಿ (Karnataka) ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜುಲೈ 1ರಿಂದ ಜುಲೈ 22ರವೆರೆಗೆ ವಾಡಿಕೆಯಂತೆ ಸರಾಸರಿ 192ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದ್ರೆ, ಇದೀಗ ಜುಲೈ 1ರಿಂದ ಜುಲೈ 22ರವರೆಗೆ 215ಮಿಲಿ ಮೀಟರ್ ಮಳೆಯಾಗಿದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಅದರಲ್ಲೂ ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ(Western Ghats) ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಇದರಿಂದ ಜೀವನದಿಗಳಿಗೆ ಜೀವ ಕಳೆ ಬಂದಿದ್ದು, ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲವು ಸೇತುವೆಗಳ ಮುಳುಗಡೆಯಾಗಿದ್ದು, ಸಂಚಾರ ಬಂದ್ ಆಗಿವೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಿದೆ. ರಾಜ್ಯದಲ್ಲಿ ಈ ಬಾರಿ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚುವರಿ ಮಳೆ ಆಗಿದ್ದರಿಂದ ರಾಜ್ಯದ ಬಹುತೇಕ ಡ್ಯಾಂಗಳ ಒಳಹರಿವು ಹೆಚ್ಚಳವಾಗಿದೆ. ಜಲಾಶಯದ ಒಳಹರಿವಿನ ಪ್ರಮಾಣ ಶೇ.15ರಿಂದ ಶೇ.20ರಷ್ಟು ಹೆಚ್ಚಳವಾಗಿದೆ ಎಂದು ರಾಜ್ಯದ ಹವಾಮಾನ ಇಲಾಖೆ ತಿಳಿಸಿದೆ. ಹಾಗಿದ್ರೆ, ಯಾವ್ಯಾವ ಜಿಲ್ಲೆಯಲ್ಲಿ ಮಳೆ ಅವಾಂತರ ಹೇಗಿದೆ ಎನ್ನುವುದನ್ನು ನೋಡುವುದಾದರೆ,
ಮೈದುಂಬಿ ಹರಿಯುತ್ತಿವೆ ಬೆಳಗಾವಿಯ ಸಪ್ತನದಿಗಳು
ಮಹಾರಾಷ್ಟ್ರದ (Maharashtra) ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಸಪ್ತನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಬೆಳಗಾವಿ (Belagavi) ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತ
ದಕ್ಷಿಣ ಮಂದಾಕಿನಿ ಕಾವೇರಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗದ ಹಿನ್ನೆಲೆ ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಮುಳುಗಿದೆ. ಮಡಿಕೇರಿ ತಾಲೂಕಿನ ಹೊದವಾಡ ರಸ್ತೆಯೂ ಮುಳುಗಿದೆ. ಸುಂಟಿಕೊಪ್ಪ-ಮಾದಾಪುರ ರಸ್ತೆ ಮಧ್ಯೆ ಮರ ಧರೆಗುರುಳಿದೆ. ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಕುಕ್ಕೆ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ
ದಕ್ಷಿಣ ಕನ್ನಡ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಧಾರಾಕಾರ ಮಳೆ ಹಿನ್ನೆಲೆ ಘಟ್ಟ ಪ್ರದೇಶದಿಂದ ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಹೀಗಾಗಿ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ, ಈ ಹಿನ್ನೆಲೆ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ನದಿ ದಡಕ್ಕೆ ಹೋಗದಂತೆ ಭಕ್ತರಿಗೆ ಸೂಚನೆ ನೀಡಲಾಗಿದೆ. ಸ್ನಾನಘಟ್ಟದ ಬಳಿ ಗೃಹರಕ್ಷಕ ಹಾಗೂ ಎಸ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗಿದೆ. ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಚಿಕ್ಕಮಗಳೂರಲ್ಲಿ ಮಳೆರಾಯ ಅರ್ಭಟಿಸುತ್ತಿದ್ದಾನೆ.. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರೋ ಮಹಾಮಳೆಗೆ ಭದ್ರಾನದಿ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದೆ. ನಿನ್ನೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಕಳಸ-ಹೊರನಾಡು ನಡುವಿನ ಸಂಪರ್ಕ ಬಂದ್ ಆಗಿದೆ. ವಾಹನ ಸಂಚಾರ ನಿರ್ಬಂಧಿಸಿದ್ದು, ಸೇತುವೆ ಬಳಿ ಪೊಲೀಸರ ನಿಯೋಜನೆ ಮಾಡಿದ್ದು, ಬದಲಿ ಮಾರ್ಗವಾಗಿ ಹೋಗುವಂತೆ ಸೂಚಿಸಲಾಗಿದೆ.
ಮಹಾಮಾಯ ದೇಗುಲದ ಆವರಣ ಜಲಾವೃತ
ಉತ್ತರ ಕನ್ನಡ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಕಾಳಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಕದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಕದ್ರಾ ಜಲಾಶಯದಿಂದ 30,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಕದ್ರಾ ಡ್ಯಾಂನಿಂದ ನೀರು ಬಿಡುಗಡೆ ಹಿನ್ನೆಲೆ ಮಹಾಮಾಯ ದೇಗುಲದ ಆವರಣ ಜಲಾವೃತಗೊಂಡಿದೆ. ದ್ರಾ ಡ್ಯಾಂ ಸುತ್ತಮುತ್ತಲಿನ 100ಕ್ಕೂ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಗ್ರಾಮಸ್ಥರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಉಕ್ಕಿದ ತುಂಗಾ, ಮುಳುಗಿದ ಶೃಂಗೇರಿ ಶಾರದಾಂಬೆ ಆವರಣ
ಒಳಹರಿವು ಹೆಚ್ಚಾದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಾಲಯ ಬಳಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ದೇವಾಲಯದ ವಾಹನ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಪ್ರವಾಸಿಗರ ವಾಹನಗಳು ಮುಳುಗಡೆಯಾಗಿವೆ. ಹಾಗೆ ಗಾಂಧಿ ಮೈದಾನ, ಪ್ಯಾರ್ಲಲ್ ರಸ್ತೆಗೂ ನದಿ ನೀರು ನುಗ್ಗಿದೆ.
ಅಪಾಯಮಟ್ಟ ಮೀರಿ ಹರಿಯುತ್ತಿರು ಭದ್ರಾ
ಇನ್ನು ಕುದುರೆಮುಖದಲ್ಲಿ ಭಾರಿ ಮಳೆ ಹಿನ್ನೆಲೆ ಭದ್ರಾ ನದಿಯ ಹರಿವಿನಲ್ಲಿ ಏರಿಕೆಯಾಗಿದೆ. ಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಜಾಂಬಳೆ ಸಮೀಪದ ಕಳಸ-ಕುದುರೆಮುಖ-ಮಂಗಳೂರು ರಸ್ತೆ ಮೇಲೆ ನೀರು ಹರಿಯುತ್ತಿದೆ. ನೀರಿನ ಮಧ್ಯೆಯೂ ವಾಹನಗಳು ಸಂಚರಿಸುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ