ವಿಜಯನಗರ: ಅಭಿಮಾನಿಗಳ ಯುವರಾಜ ಅಪ್ಪು ನಮ್ಮನ್ನಗಲಿ ಒಂದೂವರೆ ವರ್ಷವಾಗುತ್ತ ಬಂದಿದೆ. ಆದರೂ ಅಭಿಮಾನಿಗಳ ದೇವರಾಗಿರುವ ಪುನೀತ ರಾಜಕುಮಾರ್ ಇಂದಿಗೂ ಅಜರಾಮರ. ಅದ್ರಲ್ಲೂ ದೊಡ್ಮನೆ ಹುಡ್ಗನಿಗೂ, ಹೊಸಪೇಟೆಗೂ ಅವಿನಾಭಾವ ಸಂಬಂಧ. ಯಾರು ಕೈ ಬಿಟ್ಟರೂ ಹೊಸಪೇಟೆ ಜನ ನಮ್ಮನ್ನ ಕೈ ಬಿಡಲ್ಲ ಅಂತ ಖುದ್ದು ಪುನೀತ್ ರಾಜ್ ಕುಮಾರ್ ಅವರು ಹೇಳಿದ್ದರು. ಅದರಂತೆಯೇ ಅಪ್ಪು ಇದ್ದಾಗಲೂ, ಇದೀಗ ನಮ್ಮ ನಡುವೆ ಇಲ್ಲದ ವೇಳೆಯಲ್ಲೂ ಅಪ್ಪು ಅವರನ್ನ ಅಜರಾಮರವಾಗಿಸುವ ಕೆಲಸಕ್ಕೆ ಅಪ್ಪು ಅಭಿಮಾನಿಗಳು ಮುಂದಾಗಿದ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ ಅಭಿಮಾನಿಗಳು ಜಿಲ್ಲೆಯಲ್ಲಿ ಅಪ್ಪು ದೇವರ ಮಾಲೆ ಧರಿಸುವ ವ್ರತಾಚರಣೆಗೆ ಸಜ್ಜಾಗುತ್ತಿದ್ದಾರೆ.
ಹೊಸಪೇಟೆಯ ಹೃದಯ ಭಾಗದಲ್ಲಿರುವ ಪುನೀತ್ ರಾಜಕುಮಾರ ವೃತ್ತದಲ್ಲಿ ಪವರ್ ಸ್ಟಾರ್ ಅಭಿಮಾನಿಗಳು ಅಪ್ಪು ದೇವರ ಮಾಲೆಯನ್ನು ಮಾರ್ಚ್ 1 ರಿಂದ 17ರವರೆಗೆ ಮಾಲೆ ಧರಿಸಿ, ಮಾ.18ಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಅವರ ಸಮಾಧಿ ದರ್ಶನ (ಪುಣ್ಯಭೂಮಿ) ಮಾಡಲಿದ್ದಾರೆ. ಹೌದು, ಅಪ್ಪು ಅವರ ಜನ್ಮದಿನವನ್ನು ಸರ್ಕಾರ ಸ್ಫೂರ್ತಿ ದಿನ ಎಂದು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಅಪ್ಪು ಅಭಿಮಾನಿಗಳು ಅಪ್ಪು ದೇವರ ಮಾಲಾಧಾರಣೆ ಮಾಡಲಿದ್ದಾರೆ.
ಇದನ್ನೂ ಓದಿ:‘ಕಲಾವಿದರನ್ನು ಕಲಾವಿದರಾಗಿರೋಕೆ ಬಿಡಿ’; ‘ಅಪ್ಪು ದೇವರ ಮಾಲೆ’ ಬಗ್ಗೆ ನಟ ಪ್ರಥಮ್ ಅಸಮಾಧಾನ
ಅಪ್ಪು ದೇವರ ಮಾಲೆ ಧರಿಸುವ ಮೂಲಕ ವ್ರತಾಚರಣೆಗೆ ಸಜ್ಜಾದ ಅಭಿಮಾನಿಗಳು
ಇನ್ನು ಅಪ್ಪು ದೇವರ ಮಾಲೆ ಧರಿಸಲು ಮುಂದಾಗಿರುವ ಅಭಿಮಾನಿಗಳು, ಅಪ್ಪು ದೇವರ ಡಾಲರ್ ಇರುವ ಮಾಲೆ ಧರಿಸುವುದು, ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಶರ್ಟ್ ಧರಿಸಿ, ಅಪ್ಪು ದೇವರ ಫೋಟೊ ಇಟ್ಟು ಪೂಜೆ ಮಾಡುವುದು. ಬೆಳಗ್ಗೆ ಸೂರ್ಯ ಉದಯಿಸುವ ಮುನ್ನ ಹಾಗೂ ಸಂಜೆ ಸೂರ್ಯ ಮುಳುಗಿದ ಬಳಿಕ ಸ್ನಾನ ಮಾಡುವುದು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ರಾತ್ರಿ ಉಪಾಹಾರ ಸೇವಿಸುವುದು ಅಂತ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.
ಅಪ್ಪು ದೇವರ ಮಾಲೆ ಧರಿಸುವವರು ದುಶ್ಚಟಗಳಿಂದ ದೂರವೇ ಇರಬೇಕು. ಮಾಲೆ ಹಾಕುವ ಅಭಿಮಾನಿಗಳು ಐದು ದಿವಸ, 11 ದಿವಸ ಮತ್ತು ಒಂದು ದಿವಸ ಮಾಲೆ ಹಾಕಬಹುದು. ಮಾಲೆ ಹಾಕುವ ಎಲ್ಲಾ ಅಪ್ಪುಸ್ವಾಮಿಗಳು ಇಲ್ಲಿಂದ ಪುಣ್ಯಭೂಮಿಗೆ ತೆರಳುವಾಗ ಕೈಲಾದ ದಿನಸಿಗಳನ್ನು ಇರುಮುಡಿಯಾಗಿ ತೆಗೆದುಕೊಂಡು ಹೋಗತಕ್ಕದ್ದು, ಅಕ್ಕಿ, ಬೆಳೆ, ಎಣ್ಣೆ ದಿನಸಿಗಳನ್ನು ತೆಗೆದುಕೊಂಡು ಹೋಗಬಹುದು. ಎಲ್ಲಾ ಮಾಲೆಧರಿಸುವ ಮಾಲಾಧಾರಿಗಳು ಅಪ್ಪು ದೇವರ ಪುಣ್ಯಭೂಮಿ ದರ್ಶನ ಪಡೆದು, ವಾಪಾಸ್ ಬಂದ ನಂತರ ಹಂಪಿಯ ಪುಣ್ಯ ನದಿಯಲ್ಲಿ ಸ್ನಾನ ಮಾಡಿ ಶ್ರೀವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಮಾಲೆಯನ್ನು ವಿಸರ್ಜನೆ ಮಾಡಲಿದ್ದಾರೆ.
ಇದನ್ನೂ ಓದಿ:ಪುನೀತ್ ರಾಜಕುಮಾರ್ ನೆನಪುಗಳು: ತಂದೆಯ ಹಾಗೆ ಅಪ್ಪು ಸಹ ಮಹಾ ದೈವಭಕ್ತರಾಗಿದ್ದರು
ಅಭಿಮಾನಿಗಳೇ ನಮ್ಮ ಮನೆ ದೇವರು ಎಂದು ಅಪ್ಪು ಅವರು ಅಭಿಮಾನಿಗಳನ್ನ ಗೌರವಿಸಿದ್ರೆ. ಅದೇ ಅಪ್ಪು ಅಭಿಮಾನಿಗಳು ಅಪ್ಪು ಹೆಸರಿನಲ್ಲೀಗ ಅಪ್ಪು ಮಾಲೆ ಧರಿಸಿ ವ್ರತಾಚರಣೆ ಮಾಡುವ ಮೂಲಕ ಅಪ್ಪುವನ್ನ ಅಜರಾಮರವಾಗಿಸುವ ಕೆಲಸಕ್ಕೆ ಮುಂದಾಗಿರುವುದು ವಿಶೇಷವಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:11 am, Fri, 24 February 23