ವಿಜಯಪುರ, ಮೇ 09: ಜಿಲ್ಲೆಯಲ್ಲಿ ಉರಿ ಬಿಸಿಲು (heat wave) ಸುಡು ಬಿಸಿಲು ಎಂಬಂತಾಗಿದೆ. ಬೆಳಿಗ್ಗೆಯಿಂದಲೇ ಬಿಸಿಲಿನ ಬೇಗೆ ತಾಗುತ್ತಿದೆ. ಉರಿ ಬಿಸಿಲು ಜನರನ್ನು ಹೈರಾಣು ಮಾಡುತ್ತಿದೆ. ನೆತ್ತಿ ಸುಡೋ ಬಿಸಿಲಿನಲ್ಲಿ ಜನರ ಓಡಾಟ ಅಪರೂಪವೇ ಆಗಿದೆ. ಇಂಥ ಸುಡು ಬಿಸಿಲು ಸಾರಿಗೆ ಇಲಾಖೆ ಮೇಲೆಯೂ ಪರಿಣಾಮ ಬೀರಿದೆ. ಶಕ್ತಿ ಯೋಜನೆಯಿಂದ ತುಂಬಿ ತುಳುಕುತ್ತಿದ್ದ ಸರ್ಕಾರಿ ಬಸ್ಗಳು (Government bus)
ಇದೀಗ ಖಾಲಿ ಖಾಲಿ ಹೊಡೆಯುತ್ತಿದೆ. ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಗರಿಷ್ಟ ಪ್ರಮಾಣದ ಉರಿ ಬಸಿಲು ಪ್ರಯಾಣಿಕರ ಸಂಖ್ಕೆಯ ಇಳಿಮುಖವಾಗಲು ಕಾರಣವಾಗಿದೆ.
ಜಿಲ್ಲೆಯಲ್ಲಿನ ಉರಿ ಬಿಸಿಲು ಜನರ ಪಾಲಿಗೆ ಕಂಟಕವಾಗಿದೆ. ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ 39.5 ಡಿಗ್ರಿ ಸೆಲ್ಸಿಯಸ್ನಿಂದ ಹಿಡಿದು 45 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಗರಿಷ್ಟ ಮಟ್ಟದಲ್ಲಿ ದಾಖಲಾಗಿದೆ. ಗರಿಷ್ಟ ಪ್ರಮಾಣದ ಉರಿ ಬಿಸಿಲು ಸಾರಿಗೆ ಇಲಾಖೆ ಮೇಲೆ ಪರಿಣಾಮ ಬೀರಿದೆ. ಜನರು ಬಿಸಿಲಿಗೆ ಹೆದರಿ ಪ್ರಯಾಣ ಮಾಡುತ್ತಿಲ್ಲ. ಕಾರಣ ಬಿಸಿ ಗಾಳಿ ಬೀಸುತ್ತಿದ್ದು ಬಿಸಿಲಿನ ತಾಪವೂ ಆಧಿಕವಾಗಿದೆ. ಬಸ್ನಲ್ಲಿ ಪ್ರಯಾಣ ಮಾಡುವುದೇ ಕಷ್ಟಕರವಾಗಿದೆ. ಬಿಸಿಲಿನ ತಾಪಕ್ಕೆ ಬಸ್ನ ಮೇಲ್ಚಾವಣಿ ಬಿಸಿಯಾಗುತ್ತದೆ. ಬಸ್ ಹೊರಟಾಗ ಬಿಸಿಗಾಳಿ ಬರುತ್ತದೆ. ಹೀಗಾಗಿ ಬಸ್ನಲ್ಲಿ ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಓಡಾಡಲು ಆಗುತ್ತಿಲ್ಲಾ ಎಂದು ಬಿಸಿಲಿನ ಸಮಸ್ಯೆ ಕುರಿತು ಜನರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಜೀವಜಲವಿಲ್ಲದೇ ಇಂಗಿ ಹೋದ 125ಕ್ಕೂ ಹೆಚ್ಚು ಕೆರೆಗಳು, ಇದಕ್ಕೆ ಯಾರು ಹೊಣೆ?
ಇನ್ನು ಉರಿ ಬಿಸಿಲಿನಲ್ಲಿ ಪ್ರಯಾಣ ಮಾಡುವವರು ಯಾಕಾದರೂ ಪ್ರಯಾಣ ಮಾಡುತ್ತಿದ್ದೇವೆ ಎಂದು ಪರಿತಪಿಸುತ್ತಿದ್ದಾರೆ. ಶಾಲೆಗಳಿಗೆ ರಜೆ ಇದೆ, ಮಕ್ಕಳನ್ನು ಕರೆದುಕೊಂಡು ಸತ್ತಾಡಲು ಬಿಸಿಲು ತಡೆನೀಡಿದೆ. ಅಷ್ಟರ ಮಧ್ಯೆ ಕೆಲ ಸ್ಥಳಗಳಲ್ಲಿ ಪ್ರಯಾಣ ಮಾಡುತ್ತಿದ್ದು ತೀವ್ರ ಸಮಸ್ಯೆಯಾಗುತ್ತಿದೆ. ಬಸ್ನಲ್ಲಿ ಹಾಗೂ ಇತರೆ ವಾಹನಗಳಲ್ಲಿ ಕುಳಿತು ಪ್ರಯಾಣ ಮಾಡಿದರೆ ಬಿಸಿ ಕುಕ್ಕರ್ನಲ್ಲಿ ಕುಳಿತು ಪ್ರಯಾಣ ಮಾಡಿದಂತಾಗುತ್ತದೆ ಎಂದು ಕೆಲ ಪ್ರಯಾಣಿಕರು ಉರಿ ಬಿಸಿಲಿನಲ್ಲಿನ ಪ್ರಯಾಣದ ಅನುಭವ ಹಂಚಿಕೊಂಡಿದ್ದಾರೆ.
ಬಿರು ಬಿಸಿಲಿಗೆ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿಸಿಲಿನ ತಾಪ ಹೆಚ್ಚಳದಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿಲ್ಲ. ಕಳೆದ ಏಪ್ರಿಲ್ನಲ್ಲಿ ಬಿಸಿಲಿನ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ದಾಟಿರಲಿಲ್ಲ ಆದರೆ ಮೇ 1 ರಿಂದ ಜಿಲ್ಲೆಯಲ್ಲಿ 40 ರಿದ 44 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. ಜಿಲ್ಲೆಯ ಎಂಟು ಡಿಪೋಗಳಲ್ಲಿನ ಅಂಕಿ ಅಂಶಗಳನ್ನು ನೋಡಿದಾಗ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ.
ಇದನ್ನೂ ಓದಿ: ಬಿಸಿಲಿನ ತಾಪಕ್ಕೆ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಿದ್ದ ಮಹಿಳೆ ಬಲಿ: ಇನ್ನಷ್ಟು ಶಾಖಾಘಾತ ಮುನ್ಸೂಚನೆ
ಮೇ 1 ರಂದು 2,85,921 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಮೇ 2 ರಂದು 3,20,210, ಮೇ 3 ರಂದು 3,10,521 , ಮೇ 4 ರಂದು 2,92,011 , ಮೇ 5 ರಂದು 2,83,044, ಮೇ 6 ರಂದು 2,50,423 , ಮೇ 7 ರಂದು 1,81,761 , ಮೇ 8 ರಂದು 2,44,985 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಆದರೆ ಬಿಸಿಲಿನ ತಾಪ ಇಲ್ಲದ ದಿನಗಳಲ್ಲಿ ನಿತ್ಯ ಕನಿಷ್ಟವೆಂದರೂ 3.50 ಲಕ್ಷಕ್ಕೂ ಆಧಿಕ ಪ್ರಯಾಣಿಕರು ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಉರಿ ಬಿಸಿಲು ಪ್ರಯಾಣಿಕರಿಗೆ ಶಾಪವಾಗಿದೆ. ಗರಿಷ್ಟ ಪ್ರಮಾಣದ ಬಿಸಿಲಿನ ಕಾರಣ ಪ್ರಯಾಣಿಕರ ಸಂಖ್ಯೆಯಲ್ಲಿ ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರ ಜೊತೆಗೆ ಸಾರಿಗೆ ಇಲಾಖೆ ಆದಾಯದಲ್ಲೂ ಇಳಿಕೆಯಾಗಿದೆ.
ಬಿಸಿಲಿನ ಕಾರಣ ಬಸ್ಗಳ ಚಾಲಕ ನಿರ್ವಾಹಕರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನಿತ್ಯ ಬಸ್ ನಲ್ಲಿ ಓಡಾಡುವ ಕಾರಣ ಚಾಲಕ ಹಾಗೂ ನಿರ್ವಾಹಕರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಅದರಲ್ಲೂ ಬಸ್ ಚಾಲಕರಿಗೆ ಇನ್ನೂ ತೊಂದರೆಯಾಗುತ್ತಿದೆ. ಬಸ್ ಇಂಜೀನ್ ಕಾವು ಹಾಗೂ ಬಿಸಿಲಿನ ಕಾವು ಸಮಸ್ಯೆಗೆ ಈಡು ಮಾಡುತ್ತಿದೆ. ಆದರೂ ಸಹ ಜನರಿಗೆ ತೊಂದರೆಯಾಗಬಾರದೆಂದು ಸಾರಿಗೆ ಇಲಾಖೆ ಗರಿಷ್ಟ ಸೇವೆಯನ್ನು ನೀಡುವತ್ತ ಗಮನ ಹರಿಸುತ್ತಿದೆ. ಒಟ್ಟಾರೆಯಾಗಿ ಸುಡುವ ಬಿಸಿಲು ಸಾರಿಗೆ ಇಲಾಖೆಗೆ ಬರೆ ಹಾಕಿದ್ದು, ಪ್ರಯಾಣಿಕರಿಗೂ ಸಮಸ್ಯೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.