ಬೆಂಗಳೂರು: ಜೀವಜಲವಿಲ್ಲದೇ ಇಂಗಿ ಹೋದ 125ಕ್ಕೂ ಹೆಚ್ಚು ಕೆರೆಗಳು, ಇದಕ್ಕೆ ಯಾರು ಹೊಣೆ?

ಬೆಂಗಳೂರಿನ ಜೀವಸೆಲೆಯ ಮೂಲವಾಗಿದ್ದ ಕೆರೆಗಳು ಬಿಸಿಲಿನ ತಾಪಕ್ಕೆ ಬತ್ತಿಹೋಗ್ತಿವೆ. ಸುಡುಬಿಸಿಲಿನ ಶಾಖ ಒಂದೆಡೆಯಾದ್ರೆ, ಕಣ್ಣಾಮುಚ್ಚಾಲೆ ಆಡ್ತಿರೋ ವರುಣನ ಆಟಕ್ಕೆ ಕೆಂಪೇಗೌಡರ ಬೆಂದಕಾಳೂರಿನ ಕೆರೆಗಳು ಬೆಂದುಹೋಗ್ತಿವೆ. ಅಭಿವೃದ್ಧಿ ಹೆಸರಲ್ಲಿ ಹಲವು ಕೆರೆಗಳು ಕಣ್ಮರೆಯಾಗಿರೋ ಹೊತ್ತಲ್ಲೇ ಅಳಿದುಳಿದ ಕೆರೆಗಳಿಗೂ ಸಂಕಷ್ಟ ಎದುರಾಗಿದೆ.

ಬೆಂಗಳೂರು: ಜೀವಜಲವಿಲ್ಲದೇ ಇಂಗಿ ಹೋದ 125ಕ್ಕೂ ಹೆಚ್ಚು ಕೆರೆಗಳು, ಇದಕ್ಕೆ ಯಾರು ಹೊಣೆ?
ಯಡಿಯೂರು ಕೆರೆ
Follow us
| Updated By: ಆಯೇಷಾ ಬಾನು

Updated on: May 09, 2024 | 7:47 AM

ಬೆಂಗಳೂರು, ಮೇ.09: ದಶಕಗಳ ಹಿಂದೆ ರಾಜ್ಯ ರಾಜಧಾನಿಯ ಜನರ ಜಲದಾಹ ತೀರಿಸಿದ್ದ ಕೆರೆಗಳು (Lakes) ಅಳಿವಿನ ಅಂಚಿಗೆ ತಲುಪಿಬಿಟ್ಟಿವೆ. ಬೇಸಿಗೆ ಬೇಗೆ ಜೊತೆಗೆ ಸರಿಯಾದ ಪ್ರಮಾಣದಲ್ಲಿ ಬಾರದೆ ಕೈಕೊಟ್ಟ ಮಳೆಯಿಂದ ನಗರದ ಕೆರೆಗಳು ಇಂಗಿಹೋಗಿವೆ. ಬಿಸಿಲ ಬೇಗೆಗೆ ಕೆರೆಗಳು ಬೆಂಗಾಡಾಗಿ ಪರಿವರ್ತನೆಯಾಗಿದ್ದು, ಜಲಚರಗಳ ಆಶ್ರಯತಾಣವಾಗಿದ್ದ ಕೆರೆಗಳು ಮೈದಾನಗಳಂತಾಗಿವೆ. ಕಳೆದ 2 ದಿನದಿಂದ ನಗರದಲ್ಲಿ ಮಳೆಯಾಗುತ್ತಿದ್ದು ಕೆರೆಗಳು ಮಾತ್ರ ಇನ್ನೂ ತುಂಬಿಲ್ಲ. ಕೆರೆಗಳಿಗೆ ಈ ಗತಿ ಬರಲು ಕಾರಣ ಏನು ಎಂಬ ಬಗ್ಗೆ ಈ ಸುದ್ದಿಯಲ್ಲಿ ಓದಿ.

ಕೆರೆಗಳಿಗೆ ಕಂಟಕ ತಂದವರು ಯಾರು?

ದಶಕಗಳ ಹಿಂದೆ 1 ಸಾವಿರದಷ್ಟಿದ್ದ ಕೆರೆಗಳು, 1960ರ ಹೊತ್ತಿಗೆ 280ಕ್ಕೆ ಇಳಿಕೆ ಕಂಡಿತ್ತು. ಆದರೆ ಜನಸಂಖ್ಯೆ ಹೆಚ್ಚಿದ್ದಂತೆಲ್ಲ ಕೆರೆಗಳನ್ನ ಮುಚ್ಚಿ ಹೊಸ ಹೊಸ ಲೇಔಟ್, ಅಪಾರ್ಟ್ ಮೆಂಟ್​ಗಳು ತಲೆ ಎತ್ತಿದ್ದರಿಂದ ಅಂತರ್ಜಲದ ಶಕ್ತಿಯಂತಿದ್ದ ನೂರಾರು ಕೆರೆಗಳು ಕಣ್ಮರೆಯಾಗಿಬಿಟ್ಟಿವೆ. ಇತ್ತ ಕೆರೆಗಳ ಸುತ್ತಮುತ್ತಲಿನ ಜಾಗ, ಕೆರೆಗೆ ನೀರು ಸಾಗ್ತಿದ್ದ ಜಾಗಗಳು ಕೂಡ ಒತ್ತುವರಿಯಾಗಿದ್ದು, ಸರ್ಕಾರ ಈಗಲಾದ್ರೂ ಕೆರೆಗಳ ಸುತ್ತಮುತ್ತಲಿನ ಒತ್ತುವರಿ ತೆರವು ಮಾಡಿ ಅಳಿದುಳಿದ ಕೆರೆಗಳನ್ನ ರಕ್ಷಿಸಬೇಕಿದೆ ಅಂತಾ ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಆಗ್ರಹಿಸಿದ್ದಾರೆ.

ಸದ್ಯ ಬೆಂಗಳೂರಿನ ಕೆರೆಗಳ ಸ್ಥಿತಿ ಹೇಗಿದೆ ಅನ್ನೋದರ ಬಗ್ಗೆ ಟಿವಿ9 ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ರಾಜಧಾನಿಯ ಕೆರೆಗಳ ದುಸ್ಥಿತಿ ಸೆರೆಯಾಗಿದೆ. ಐತಿಹಾಸಿಕ ಕೆರೆಗಳು, ವಿಶಾಲವಾಗಿದ್ದ ಕೆರೆಗಳು ನೀರಿಲ್ಲದೇ ಸೊರಗುತ್ತಿದ್ದು, ಒಂದೊಂದು ಕೆರೆಯು ಒಂದೊಂದು ಕತೆ ಹೇಳ್ತಿದೆ.

ಹಲಗೆವಡೇರಹಳ್ಳಿ ಕೆರೆ: ಹಲವು ವರ್ಷಗಳ ಕಾಲ ರಾಜರಾಜೇಶ್ವರಿನಗರದ ಸುತ್ತಮುತ್ತಲಿನ ಜಲದಾಹ ತೀರಿಸಿದ್ದ 17 ಎಕರೆ ವಿಸ್ತೀರ್ಣದ ಈ ಕೆರೆ ಇದೀಗ ನೀರಿಲ್ಲದೇ ಒಣಗಿ ನಿಂತಿದೆ. ಸದಾ ನೀರು ತುಂಬಿರುತ್ತಿದ್ದ ಈ ಕೆರೆ 35 ಪ್ರಭೇದದ ಪಕ್ಷಿಗಳನ್ನ ಆಕರ್ಷಿಸುತ್ತಿತ್ತು, ಇದೀಗ ನೀರಿಲ್ಲದೇ ಬಾಯ್ತೆರೆದು ನಿಂತಿದೆ.

ಮಲ್ಲತಹಳ್ಳಿ ಕೆರೆ: ಸುಮಾರು 71 ಎಕರೆ ವಿಸ್ತೀರ್ಣ ಇರೋ ಮಲ್ಲತಹಳ್ಳಿ ಕೆರೆ ನೀರಿಲ್ಲದೇ ಬಾಯ್ತೆರೆದಿದೆ. ಕೊಕ್ಕರೆ, ಮೀನು, ಏಡಿಯಂತ ಜೀವರಾಶಿಗಳ ಆಶ್ರಯತಾಣವಾಗಿದ್ದ ಈ ಕೆರೆ ಇದೀಗ ಸಂಪೂರ್ಣ ಬತ್ತಿಹೋಗಿದೆ. ಕೆರೆಯಂಗಳದಲ್ಲಿ ನಿಂತಿರೋ ಅಲ್ಪಸ್ವಲ್ಪ ನೀರಲ್ಲೇ ಇಂದಿಗೂ ಪ್ರಾಣಿ-ಪಕ್ಷಿಗಳ ದಾಹ ತೀರಿಸ್ತಿರೋ ಈ ಕೆರೆ ನೀರಿಲ್ಲದೇ ಸೊರಗಿ ಹೋಗಿದೆ. ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಈ ಕೆರೆ ಅಭಿವೃದ್ಧಿಗೆ 81 ಕೋಟಿ ಅನುದಾನ ನೀಡಿದ್ರು, ಆದ್ರೆ ಇದೀಗ ಈ ಕೆರೆ ಸಂಪೂರ್ಣ ಖಾಲಿಯಾಗಿ ನೀರಿಲ್ಲದೇ ಬಣಗುಡುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ಮತ್ತೆ ದುಬಾರಿ: 3 ತಿಂಗಳಲ್ಲಿ ಶೇ 8ರಷ್ಟು ಹೆಚ್ಚಳ

ಅನ್ನಪೂರ್ಣೇಶ್ವರಿನಗರ ಕೆರೆ: ಸುಮಾರು 70 ಎಕರೆ ಇದ್ದ ಅನ್ನಪೂರ್ಣೇಶ್ವರಿನಗರ ಕೆರೆ ಇದೀಗ ಅರೆಬರೆ ಜಾಗಕ್ಕೆ ಮಾತ್ರ ಸೀಮಿತವಾಗಿಬಿಟ್ಟಿದೆ. ಕೆರೆಗೆ ಸೇರಿದ್ದ ಜಾಗದಲ್ಲಿ ಬಿಡಿಎ ನಿವೇಶನಗಳು ತಲೆಎತ್ತಿದ್ರೆ, ಮತ್ತರ್ಧ ಜಾಗ ಪಾರ್ಕ್, ರಸ್ತೆಗೆ ಬಳಕೆಯಾಗಿದೆ. ಇತ್ತ ಅಳಿದುಳಿದ ಕೆರೆ ಕೂಡ ಅಲ್ಪಸ್ವಲ್ಪ ನೀರಿದ್ದು, ಜಲಮಂಡಳಿ ಈ ಕೆರೆಗೆ ಸಂಸ್ಕರಿತ ನೀರು ತುಂಬಿಸೋಕೆ ತಯಾರಿ ನಡೆಸ್ತಿದೆ.

ರಾಚೇನಹಳ್ಳಿ ಕೆರೆ: ಬ್ಯಾಟರಾಯನಪುರ ವ್ಯಾಪ್ತಿಯಲ್ಲಿರೋ ಈ ಕೆರೆಯ ನೀರು ಇದೀಗ ವಿಷವಾಗಿ ಪರಿವರ್ತನೆಯಾಗಿಬಿಟ್ಟಿದೆ. ಅಪಾರ್ಟ್ ಮೆಂಟ್​ಗಳ ಕಲುಷಿತ ನೀರು ಕೆರೆಯ ಒಡಲು ಸೇರಿದ್ದು, ಸಾವಿರಾರು ಮೀನುಗಳನ್ನ ಬಲಿ ಪಡೆದಿದೆ. 148 ಎಕರೆ ಇರೋ ಈ ಕೆರೆ ಒಡಲಿಗೆ ಆಧುನಿಕತೆಯ ಅಂಧದರ್ಬಾರ್ ನಿಂದ ಕಂಟಕ ಎದುರಾಗಿಬಿಟ್ಟಿದೆ.

ಯಡಿಯೂರು ಕೆರೆ: 1400 ವರ್ಷಗಳ ಗತಕಾಲದ ಇತಿಹಾಸ ಹೊಂದಿರೋ ಯಡಿಯೂರು ಕೆರೆಗೂ ಬರದ ಬರೆ ಬಿದ್ದಿದೆ. ವೀಕೆಂಡ್ ನಲ್ಲಿ ಬೋಟಿಂಗ್, ವಾಕಿಂಗ್ ಅಂತಾ ಸಾವಿರಾರು ಜನರನ್ನ ಆಕರ್ಷಿಸುತ್ತಿದ್ದ ಕೆರೆ ಇದೀಗ ತನ್ನೊಡಲ ಜಲರಾಶಿಯನ್ನ ಸ್ವಲ್ಪ ಸ್ವಲ್ಪವೇ ಕಳೆದುಕೊಳ್ತಿದೆ. ಅಲ್ಲಲ್ಲಿ ಕೆರೆ ಬತ್ತಿದ್ದು, ಹೊಯ್ಸಳರ ಅರಸ ವಿಷ್ಣುವರ್ಧನ, ನಾಟ್ಯರಾಣಿ ಶಾಕುಂತಲೆ ಮನಸೋತಿದ್ದ ಕೆರೆಯ ಸೌಂದರ್ಯ ಕಳೆಗುಂದುತ್ತಿದೆ.

ಸ್ಯಾಂಕಿ ಟ್ಯಾಂಕ್: ಬೆಂಗಳೂರಿನ ಫೇಮಸ್ ಸ್ಪಾಟ್​ಗಳಲ್ಲಿ ಒಂದಾದ ಸ್ಯಾಂಕಿ ಕೆರೆಗೂ ಬಿಸಿಲಬೇಗೆಯ ಎಫೆಕ್ಟ್ ತಟ್ಟಿದೆ. ಬರಗಾಲದ ನೀರಿನ ದಾಹ ತಪ್ಪಿಸಲು 1874 ರಲ್ಲಿ ಕರ್ನಲ್ ರಿಚರ್ಡ್ ಹಿರಾಮ್ ಸ್ಯಾಂಕಿ ನಿರ್ಮಿಸಿದ್ದ ಈ ಕೆರೆ ಇದೀಗ ಬತ್ತುವ ಸೂಚನೆ ನೀಡ್ತಿದೆ. ಹಲವು ವರ್ಷಗಳ ಕಾಲ ಬೆಂಗಳೂರು ಉತ್ತರದ ಜನರ ಜಲದಾಹ ತಣಿಸಿದ್ದ ಸ್ಯಾಂಕಿ ಕೆರೆ ಸದ್ದಿಲ್ಲದೇ ಬತ್ತಿಹೋಗ್ತಿದೆ.

ಭೈರಸಂದ್ರ ಕೆರೆ: ಹಲವು ಹೋರಾಟಗಳ ಫಲವಾಗಿ ಅಳಿವಿನಂಚಿಗೆ ಸೇರಿದ್ದ ಭೈರಸಂದ್ರ ಕೆರೆ ಅರಣ್ಯ ಇಲಾಖೆ ಶ್ರಮದಿಂದ ಹಸಿರತಾಣವಾಗಿತ್ತು. ಸುಮಾರು 15 ಎಕರೆ 11 ಗುಂಟೆ ವಿಸ್ತೀರ್ಣದಲ್ಲಿರೋ ಭೈರಸಂದ್ರ ಕೆರೆ ಇದೀಗ ನೀರಿನ ಅಭಾವ ಎದುರಿಸ್ತಿದೆ. ವಾಕರ್ಸ್ ಗಳ ಸ್ಪಾಟ್ ಆಗಿದ್ದ ಭೈರಸಂದ್ರ ಕೆರೆ ಸ್ವಲ್ಪ ಸ್ವಲ್ಪವೇ ಬತ್ತಿಹೋಗ್ತಿದೆ.

ದೊಡ್ಡ ಕಲ್ಲಸಂದ್ರ ಕೆರೆ: 21ಎಕರೆ ವಿಸ್ತೀರ್ಣದಲ್ಲಿರೋ ದೊಡ್ಡ ಕಲ್ಲಸಂದ್ರ ಕೆರೆ ಇದೀಗ ಅಳಿವಿನಂಚಿಗೆ ಸಾಗ್ತಿದೆ. 2019 ರಲ್ಲಿ ಅಕ್ಕಪಕ್ಕದ ಮನೆಗಳು,ಅಪಾರ್ಟ್ ಮೆಂಟ್ ಗಳ ತ್ಯಾಜ್ಯ ನೀರಿನಿಂದ ಮಲಿನಗೊಂಡಿದ್ದ ಈ ಕೆರೆ ಕೊಂಚ ಕೊಂಚವೇ ಸುಧಾರಣೆಯಾಗ್ತಿತ್ತು. ಇದೀಗ ಬೇಸಿಗೆ ಬೇಗೆಗೆ ಕೆರೆ ಸತ್ವ ಕಳೆದುಕೊಂಡಿದೆ. 354 ಪ್ರಭೇದದ ಸಸ್ಯವರ್ಗ, 59 ಬಗೆಯ ಪಕ್ಷಿಗಳಿಂದ ಆಕರ್ಷಿತವಾಗಿದ್ದ ಈ ಕೆರೆ ಈಗ ಬೇಸಿಗೆ ಬೇಗೆಗೆ ನಲುಗಿದೆ.

ಚುಂಚಗಟ್ಟಕೆರೆ: 20 ಎಕರೆ ಪ್ರದೇಶದಲ್ಲಿರೋ ಈ ಕೆರೆ ಕಲುಷಿತ ನೀರಿನಿಂದ ಮಲಿನವಾಗಿತ್ತು. ಸ್ಥಳೀಯರ ಮುಂಜಾಗ್ರತೆ, ಕಾಳಜಿಯಿಂದ ಮರಜೀವ ಪಡೆದಿದ್ದ ಕೆರೆ, ಈಗ ತನ್ನ ಒಡಲ ಜಲರಾಶಿಯನ್ನ ಕಳೆದುಕೊಂಡಿದೆ. ತ್ಯಾಜ್ಯ ಸುರಿಯೋ ಸ್ಥಳವಾಗಿ ಪರಿವರ್ತನೆಯಾಗಿದ್ದ ಈ ಕೆರೆ ಇದೀಗ ಜಲಸಂಕಷ್ಟ ಎದುರಿಸ್ತಿದೆ.

ಇತ್ತ ಕೆರೆಗಳ ಅವನತಿಗೆ ಸಿಟಿ ಮಂದಿ ಕೂಡ ಬೇಸರ ವ್ಯಕ್ತಪಡಿಸ್ತಿದ್ದಾರೆ. ಮಳೆ ಬಾರದೇ ಕಂಗೆಟ್ಟಿರೋ ಕೆರೆಗಳಿಗೆ ನೀರು ಸಿಗೋದಿರಲು, ಅಭಿವೃದ್ಧಿಯ ಹೆಸರಲ್ಲಿ ಕೆರೆ ಮಾಯವಾಗದಿದ್ರೆ ಸಾಕು ಅಂತಿದ್ದಾರೆ. ಅಲ್ಲದೇ ಹಲವು ವರ್ಷಗಳಿಂದ ನೀರಿನ ಆಧಾರವಾಗಿದ್ದ ಕೆರೆಗಳು ಈಗ ಬೆಂಗಾಡಾಗಿ ಪರಿವರ್ತನೆಯಾಗಿರೋದಕ್ಕೆ ಸಿಟಿಮಂದಿ ಬೇಸರ ಹೊರಹಾಕ್ತಿದ್ದಾರೆ.

ರಾಜಧಾನಿಯ ಇದೆಷ್ಟೆ ಕೆರೆಗಳಲ್ಲದೇ ಹಲವು ಕೆರೆಗಳು ಸದ್ದಿಲ್ಲದೇ ಭೂಗಳ್ಳರ ವಶವಾಗ್ತಿದೆ. ಕಲುಷಿತ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಕೆರೆಗಳಿಗೆ ಮರುಜೀವ ನೀಡೋ ಅಗತ್ಯತೆಯಿದೆ. ಜೀವರಾಶಿಗಳ ಆಗರವಾಗಿದ್ದ, ಅಂತರ್ಜಲದ ಶಕ್ತಿ ಕೇಂದ್ರದಂತಿದ್ದ ಕೆರೆಗಳು ಮತ್ತೆ ಮೊದಲಿನಂತಾಗಲಿ, ಜೀವರಾಶಿಗಳ ಬದುಕಿಗೆ ಆಸರೆಯಾಗಲಿ ಅಂತಾ ಪರಿಸರ ಪ್ರೇಮಿ ಅರುಣ್ ಪ್ರಸಾದ್ ಆಶಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರಿನ ಜಲಮೂಲಗಳಂತೆ ಕೆಲಸಮಾಡ್ತಿದ್ದ ಕೆರೆಗಳು ಅಭಿವೃದ್ಧಿ ಹೆಸರಲ್ಲಿ ಅವನತಿಯತ್ತ ಸಾಗ್ತಿವೆ. ಕಾಂಕ್ರೀಟ್ ಕಾಡಿನಂತಿರೋ ಸಿಲಿಕಾನ್ ಸಿಟಿಗೆ ಎದುರಾಗಿರೋ ಜಲಸಮಸ್ಯೆಗೆ ಮುಕ್ತಿ ಸಿಗಬೇಕಿದ್ರೆ ಸರ್ಕಾರ, ಸ್ಥಳೀಯ ಆಡಳಿತ ಈಗಲಾದ್ರೂ ಎಚ್ಚೆತ್ತುಕೊಂಡು ಉಳಿದ ಕೆರೆಗಳತ್ತ ಗಮನಹರಿಸಬೇಕಿದೆ. ಸದ್ಯ ಇರೋ ಕೆರೆಗಳ ಸಂರಕ್ಷಣೆಗೆ ಜನರು ಕೂಡ ಸಹಕಾರ ನೀಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ