ಬೀದರ್, ಮೇ.09: ಗಡಿ ಜಿಲ್ಲೆ ಬೀದರ್(Bidar) ಅಂದರೆ ಸಾಕು ಮೊದಲಿಗೆ ನೆನಪಿಗೆ ಬರೋದು ಬರ. ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಇಲ್ಲಿನ ರೈತರ ಗೋಳು ಹೇಳತೀರದು. ಜೊತೆಗೆ ಆಗಾಗ ಸಾಲದ ಬಾಧೆಗೆ ನೇಣಿಗೆ ಕೊರಳು ಕೊಡುವ ಇಲ್ಲಿನ ರೈತರ ಸಮಸ್ಯೆ ಮಾತ್ರ ಜನಪ್ರತಿಧಿನಿಧಿಗಳಿಗೆ ಕೇಳಿಸೋದೆ ಇಲ್ಲ. ಇನ್ನು ಈ ವರ್ಷ ಎದುರಾದ ಭೀಕರ ಬರದಿಂದಾಗಿ ನೀರಾವರಿ ನಂಬಿಕೊಂಡು ಹೊಲದಲ್ಲಿ ಬಿತ್ತಿದ ಬೆಳೆಗಳೆಲ್ಲ ನೀರಿನ ಸಮಸ್ಯೆಯಿಂದ ಬಾಡಿದ್ದು, ಹೊಲದಲ್ಲಿ ಬಿತ್ತಲಿಕ್ಕೆ ಮಾಡಿದ ಖರ್ಚು ಕೂಡ ರೈತರಿಗೆ ಬಾರದೆ ರೈತ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಇಂತಹ ಹತ್ತಾರು ಸಮಸ್ಯೆಯ ನಡುವೆಯೂ ಮಾವು(Mango Crop) ರೈತರನ್ನ ಕೈ ಹಿಡಿದಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಹೂವು ಬಿಟ್ಟು ನಳನಳಿಸುತ್ತಿದ್ದ ಮಾವಿನ ಮರದಲ್ಲೀಗ ಮಾವಿನ ಕಾಯಿಗಳು ಬಂದಿದ್ದು, ಒಂದು ಗಿಡದಲ್ಲಿ ಇನ್ನೂರು ಕಾಯಿವರೆಗೂ ಮಾವು ಬಂದಿದೆ. ಇದರಿಂದ ರೈತರು ಖುಷಿಯಾಗಿದ್ದಾರೆ. ಬರಕ್ಕೆ ಹೆಸರಾದ ಜಿಲ್ಲೆಯಲ್ಲಿ ಅಂದಾಜು 2 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಟಗಳಿದ್ದು, ಬಹುತೇಕರು ಲಾಭದ ನಿರೀಕ್ಷೆಯಲ್ಲಿದ್ದಾರೆಂದು ಮಾವುಬೆಳೆಗಾರರು ಹೇಳುತ್ತಿದ್ದಾರೆ.
ಇದನ್ನೂ ಓದಿ:ಮಾವು ತಿಂದ ಸೂರ್ಯ: ಕಮರಿದ ಬೆಳೆ, ಮಾರುಕಟ್ಟೆಯಲ್ಲಿ ಬೆಲೆ ಏರಿಕೆ
ಕೆಲವು ಹಳ್ಳಿಗಳಲ್ಲಿ ನೈಸರ್ಗಿಕವಾಗಿ ಮಾವಿನ ಮರಗಳು ಬೆಳೆದು ನಿಂತಿವೆ. ಗಿಡಗಳು ಜನವರಿ ಕೊನೆ ಹಾಗೂ ಫೆಬ್ರವರಿ ಆರಂಭದಲ್ಲಿ ಉತ್ತಮ ಹೂ ಬಿಟ್ಟಿದ್ದವೂ, ಆದರೀಗ ಆ ಮಾವಿನ ಗಿಡದಲ್ಲಿ ಕಾಯಿ ಅಷ್ಟೇ ಪ್ರಮಾಣದಲ್ಲಿ ಬಂದಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರಿದ್ದಾರೆ. ಜಿಲ್ಲೆಯ ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾನಾ ಜಾತಿಯ ಮಾವು ಬೆಳೆಯಲಾಗಿದೆ. ಜತೆಗೆ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಅನೇಕ ವರ್ಷಗಳ ಹಿಂದೆ ಹಿರಿಯರು ನೆಟ್ಟು ಬೆಳೆಸಿದ್ದ ಹಾಗೂ ನೀರು ನಿರ್ವಹಣೆ ಬಯಸದ ಮಾವಿನ ಮರಗಳು ಕೂಡ ಕಾಯಿ ಬಿಟ್ಟು ವಾರ್ಷಿಕ ಲಾಭ ಮಾಡಿಕೊಡಲು ಸಜ್ಜಾಗಿವೆ.
ಮಾವಿನ ತೋಟಗಳಲ್ಲಿ ನೀರಿನ ಕೊರತೆ ಇದ್ದಾಗ ನೈಸರ್ಗಿಕ ಮರಗಳು ಕೈ ಹಿಡಿಯುತ್ತಿರುವುದು ವಿಶೇಷವಾಗಿದೆ. ಜಿಲ್ಲೆಯಲ್ಲಿ ಮಾವು ಬೆಳೆ ಬೆಳೆಯಲು ಉತ್ತಮವಾದ ಕೆಂಪು ಮಿಶ್ರಿತ ಮಣ್ಣು ಹಾಗೂ ಹವಾಮಾನ ಇರುವುದರಿಂದ ಇಲ್ಲಿ ಮಾವು ಬೆಳೆಗೆ ಚೆನ್ನಾಗಿ ಬರುತ್ತದೆ. ಪ್ರತಿವರ್ಷ ಕಾಡುತ್ತಿದ್ದ ಮ್ಯಾಂಗೋ ಹ್ಯಾಪರ್ ರೋಗ ಈ ಬಾರಿ ಕಾಣಿಸಿಕೊಂಡಿಲ್ಲ. ಆದ್ದರಿಂದ ರೈತರು ಮಾವು ಬೆಳೆದು ಬದುಕು ಹಸನಾಗಿಸಿಕೊಳ್ಳಬಹುದೆಂದು ತೋಟಗಾರಿಗೆ ಇಲಾಖೆಯ ಅಧಿಕಾರಿಗಳು ರೈತರಿಗೆ ಸಲಹೆ ನೀಡುತ್ತಿದ್ದಾರೆ.
ಎಕರೆಗೆ 30 ರಿಂದ 40 ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಇದೆ. ಸಧ್ಯ ಭರಪೂರ ಲಾಭ ತಂದುಕೊಂಡುವ ಇಳುವರಿ ಬಂದರು ಸೂಕ್ತ ಮಾರುಕಟ್ಟೆ ಕೊರತೆಯೂ ಕೂಡ ರೈತರನ್ನ ಕಾಡುತ್ತಿದ್ದು, ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾವಿನ ಮಾರಾಟ ವ್ಯವಸ್ಥೆ ಇಲ್ಲದೆ ಇರುವುದರಿಂದಾಗಿ ದುಬಾರಿ ಸಾಗಣೆಕೆ ವೆಚ್ಚ ಭರಿಸಬೇಕಾದ ಪ್ರಮೇಯ ರೈತರಿಗೆ ಎದುರಾಗಬಹುದು. ಸರ್ಕಾರ ಪ್ರತಿ ವರ್ಷ ತೋಟಗಾರಿಕೆ ಬೆಳೆಗಾರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಜಾರಿಗೆ ತಂದಿದೆ. ಅದರ ಜೊತೆಗೆ ಸ್ವಯಂ ಪ್ರೇರಣೆಯಿಂದ ಬರಡು ನೆಲದಲ್ಲಿಯೂ ಬಂಪರ್ ಬೆಳೆ ಬೆಳೆಯುತ್ತಿರುವ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ಈ ಭಾಗದ ರೈತರ ಕೋರಿಕೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Thu, 9 May 24