ವಿಜಯಪುರ: ಗುಮ್ಮಟನಗರಿಯಲ್ಲಿ ಭಾವೈಕ್ಯತೆಯ ಉರುಸ್, ಕೋಮು ಸೌಹಾರ್ದ ಮೆರೆವ ವಿಶಿಷ್ಟ ಜಾತ್ರೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 20, 2022 | 3:24 PM

ಇದೊಂದು ಪವಿತ್ರ ಹಾಗೂ ಪವಾಡದ ಸ್ಥಳವೆಂದು ಹಿಂದು ಸಮುದಾಯದ ಜನರು ಹೇಳುತ್ತಾರೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಸಹೋದರರು ಎಂಬ ಭಾವದಿಂದ ಎಲ್ಲರೂ ಸೇರುತ್ತಾರೆ.

ವಿಜಯಪುರ: ಗುಮ್ಮಟನಗರಿಯಲ್ಲಿ ಭಾವೈಕ್ಯತೆಯ ಉರುಸ್, ಕೋಮು ಸೌಹಾರ್ದ ಮೆರೆವ ವಿಶಿಷ್ಟ ಜಾತ್ರೆ
ವಿಜಯಪುರ ಉರುಸ್​
Follow us on

ವಿಜಯಪುರ: ನಗರದ ಹೃದಯ ಭಾಗದಲ್ಲಿರುವ ಜೋಡಗುಮ್ಮಟ ಎಂದೇ ಖ್ಯಾತಿ ಪಡೆದಿರುವ ಅಲ್ ರಜಾಕ್ (ul-razzaq) ದರ್ಗಾದಲ್ಲಿ ಈಗ ಉರುಸ್ ಸಂಭ್ರಮ. ಆರು ದಿನಗಳ ಕಾಲ ನಡೆಯುವ ಈ ಉರುಸ್​ ಅನ್ನು ಜಾತ್ರೆ ಎಂದು ಕರೆಯುತ್ತಾರೆ. ಅಲ್ ರಜಾಕ್ ದರ್ಗಾ ಉರುಸ್ ಹಬ್ಬವನ್ನು ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕ ಎಂದೇ ಕರೆಯಲಾಗುತ್ತದೆ. ಈ ಬಾರಿ ಆಚರಣೆ ಆಗುತ್ತಿರುವುದು 393ನೇ ಉರುಸ್ ಹಾಗೂ ಸಂದಲ್. 400 ವರ್ಷಗಳಿಗೂ ಆಧಿಕ ವರ್ಷಗಳ ಹಿಂದೆ ಅಲ್ ರಜಾಕ್ ದರ್ಗಾದಲ್ಲಿ ಹಜರತ್ ಸಯ್ಯದ್ ಶಾ ಅಬ್ದುಲ್ ರಜಾಕ್ ಖಾದ್ರಿ ರೆಹೆಮತುಲ್ಲಾ ವಾಲೆ ಅವರು ನೆಲೆಸಿದ್ದರು. ಇವರು ದೈವಾಂಶ ಸಂಭೂತರು ಹಾಗೂ ಪವಾಡ ಪುರುಷರಾಗಿದ್ದರಂತೆ. ಅಂಥ ಮಹಾನ್ ಸಂತನ ಹೆಸರಿನಲ್ಲಿ ಉರುಸ್ ನಡೆಯುತ್ತಿದೆ. ಉರುಸ್ ಹಾಗೂ ಸಂದಲ್ ಮಾಲೆ ಕಾರ್ಯಕ್ರಮವನ್ನು ಜಾತಿಭೇದವಿಲ್ಲದೆ ಆಚರಿಸಲಾಗುತ್ತಿದೆ.

ಹಿಂದೂ-ಮುಸ್ಲಿಂ ಎಂಬ ಧರ್ಮಗಳ ಬೇಧ ಇಲ್ಲದೆ ಎಲ್ಲರೂ ಸಮಾನತೆಯಿಂದ ಉರುಸ್​ನಲ್ಲಿ ಭಾಗಿಯಾಗುವುದು ಸಹೋದರತೆಗೆ ಸಾಕ್ಷಿಯಾಗಿದೆ. ದರ್ಗಾ ಸಮಿತಿಯು ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಮಾಡಿದೆ. ದರ್ಗಾದಲ್ಲಿರುವ ಹಜರತ್ ಸಯ್ಯದ್ ಶಾ ಅಬ್ದುಲ್ ರಜಾಕ್ ಖಾದ್ರಿ ರೆಹೆಮತುಲ್ಲಾ ವಾಲೆ ಅವರ ಸಮಾಧಿಯನ್ನು ಎಲ್ಲಾ ಕೋಮಿನವರು ದರ್ಶನ ಮಾಡಿ ಭಕ್ತಿಯ ಮೆರೆಯುತ್ತಾರೆ.

ಅಲ್ ರಜಾಕ್ ದರ್ಗಾ ಕಮಿಟಿ ಕಾರ್ಯದರ್ಶಿ ಹಾಜಿ ಮಲಂಗ್ ಮಾತನಾಡಿ, ಪ್ರತಿ ವರ್ಷ ನಡೆಯುವ ಅಲ್ ರಜಾಕ್ ದರ್ಗಾ ಉರುಸ್ ವೇಳೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇತರ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿಯೇ ವಾಸ್ತವ್ಯ ಹೂಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಮುಸ್ಲಿಂ ಧರ್ಮಗುರುಗಳ ಉರುಸ್ ಆದರೂ ಕೂಡ ಹೆಚ್ಚು ಹಿಂದೂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ನಾಲ್ಕು ಶತಮಾನಗಳಿಗೂ ಆಧಿಕ ವರ್ಷಗಳಿಂದ ಅಲ್ ರಜಾಕ್ ದರ್ಗಾದಲ್ಲಿ ಹಜರತ್ ಸಯ್ಯದ್ ಶಾ ಅಬ್ದುಲ್ ರಜಾಕ್ ಖಾದ್ರಿ ರೆಹೆಮತುಲ್ಲಾ ವಾಲೆ ಉರುಸ್ ಆಚರಣೆಯಾಗುತ್ತಿದೆ. ಹಿಂದೂ ಸಮುದಾಯದ ಜನರು ಮಾದಲಿ (ಒಂದು ಬಗೆಯ ಸಿಹಿ) ಯನ್ನು ನೇವೈದ್ಯವಾಗಿ ಅರ್ಪಿಸುತ್ತಾರೆ.

ಜೋಡಗುಮ್ಮಟದ ಅಲ್ ರಜಾಕ್ ದರ್ಗಾ ದರ್ಗಾಕ್ಕೆ ಭೇಟಿ ಕೊಟ್ಟು ಯಾವುದೇ ಹರಕೆ ಮಾಡಿಕೊಂಡರೆ ಈಡೇರುತ್ತದೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದೊಂದು ಪವಿತ್ರ ಹಾಗೂ ಪವಾಡದ ಸ್ಥಳವೆಂದು ಹಿಂದು ಸಮುದಾಯದ ಜನರು ಹೇಳುತ್ತಾರೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಸಹೋದರರು ಎಂಬ ಭಾವದಿಂದ ಎಲ್ಲರೂ ಸೇರುತ್ತಾರೆ. ಪ್ರತಿ ವರ್ಷ ಇದೇ ಭಾವನೆಯಿಂದ ಅಲ್ ರಜಾಕ್ ದರ್ಗಾದ ಉರುಸ್ ಆಚರಣೆ ಮಾಡುತ್ತಾರೆ. ಮುಸ್ಲಿಂ ಸಮುದಾಯದವರು ಉರುಸ್ ಎಂದು ಕರೆದರೆ ಹಿಂದೂ ಸಮುದಾಯದವರು ಜಾತ್ರೆಯೆಂದು ಕರೆದು ಭಕ್ತಿಯಿಂದ ಭಾಗಿಯಾಗುತ್ತಾರೆ.

ವರದಿ: ಅಶೋಕ ಯಡಳ್ಳಿ ಟಿವಿ9 ವಿಜಯಪುರ

ಇದನ್ನೂ ಓದಿ: ವಿಜಯಪುರ: ತಾಯಿ ಮತ್ತು ಮಕ್ಕಳ ಆಸ್ಪತ್ರೆ ಇದ್ದರೂ ಖಾಸಗಿ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ