ವಿಜಯಪುರ: ತಾಯಿ ಮತ್ತು ಮಕ್ಕಳ ಆಸ್ಪತ್ರೆ ಇದ್ದರೂ ಖಾಸಗಿ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ
ಎರಡು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಅವಾರ್ಡ್ ಪಡೆದಿರುವ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಇದೀಗ ಬಡವರು ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದಾರೆ. ಹೆರಿಗೆಗಾಗಿ ಬರುವ ಗರ್ಭಿಣಿಯರು ಖಾಸಗಿ ಆಸ್ಪತ್ರೆಗೆ ಅನಿವಾರ್ಯವಾಗಿ ಹೋಗುವಂತಾಗಿದೆ.
ವಿಜಯಪುರ: ಎರಡು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಅವಾರ್ಡ್ ಹಾಗೂ ಇತರೆ ಕೇಂದ್ರ ಸರ್ಕಾರದ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ವಿಜಯಪುರ ಜಿಲ್ಲಾ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿಯಾಗಿದೆ. ಉತ್ತಮ ಚಿಕಿತ್ಸೆಗೆ ಹೆಸರಾಗಿರುವ ಜಿಲ್ಲಾಸ್ಪತ್ರೆಯಲ್ಲಿ ಹಲವಾರು ಸಮಸ್ಯೆಗಳೂ ಇವೆ. ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇದೀಗಾ ಬಡ ಜನರು ಪರದಾಡುವಂತಾಗಿದೆ. ಹೆರಿಗೆಗಾಗಿ ಬರುವ ಗರ್ಭಿಣಿಯರು ಖಾಸಗಿ ಆಸ್ಪತ್ರೆಗೆ ಅನಿವಾರ್ಯವಾಗಿ ಹೋಗುವಂತಾಗಿದೆ. ಉಚಿತ ಹೆರಿಗೆ, ಚಿಕಿತ್ಸೆ ಆಗುತ್ತದೆ ಎಂದು ಇಲ್ಲಿಗೆ ಬರುವ ಬಡಜನರು ಖಾಸಗಿ ಆಸ್ಪತ್ರೆಗಳಲ್ಲಿ ಹಣ ಕೊಟ್ಟು ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಸಿಜೇರಿಯನ್ ಹೆರಿಗೆಗೆ ಒಳಗಾಗಿದ್ದ ಗರ್ಭಿಣಿಯರಿಗೆ ಹಾಕಿದ್ದ ಹೊಲಿಗೆಗಳು ಬಿಚ್ಚಿದ್ದ ಕಾರಣದಿಂದಾಗಿ ಸುದ್ದಿಯಾಗಿದ್ದ ವಿಜಯಪುರ ಜಿಲ್ಲಾಸ್ಪತ್ರೆಯ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಇದೀಗಾ ಮತ್ತೇ ಚರ್ಚೆಗೆ ಗ್ರಾಸವಾಗಿದೆ. ಬೆಡ್ಗಳ ಕೊರತೆಯಿಂದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಆಗಮಿಸುವ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲಾ. ಬೆಡ್ಗಳಿಗಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉತ್ತಮ ಹಾಗೂ ಉಚಿತ ಚಿಕಿತ್ಸೆ ಇರುವ ಕಾರಣ ಹೆಚ್ಚಿನ ಬಡ ಜನರು ಜಿಲ್ಲಾ ಆಸ್ಪತ್ರೆಗೆ ಆಗಮಿಸುತ್ತಾರೆ. ಖಾಸಗಿ ಆಸ್ಪತ್ರೆಗೆ ಹೋದರೆ ಸಾವಿರಾರು ರೂಪಾಯಿ ಖರ್ಚು ಮಾಡುವ ಶಕ್ತಿ ಬಡವರಿಗಿಲ್ಲ. ಆದರೆ ಇದೀಗಾ ಇಲ್ಲಿ ಬೆಡ್ ಸಿಗದ ಕಾರಣ ಬಡವರು ಖಾಸಗಿ ಆಸ್ಪತ್ರಗೆ ಹೋಗುವ ಅನಿವಾರ್ಯತೆ ಉಂಟಾಗಿದೆ.
ಕೈಯ್ಯಲ್ಲಿ ಹಣವಿಲ್ಲದಿದ್ದರೂ ಸಾಲ ಸೋಲ ಮಾಡುವ ಸ್ಥೀತಿ ಬಂದೋದಗಿದೆ. ವಿಜಯಪುರ ಜಿಲ್ಲೆಯ ವಿವಿಧ ತಾಲೂಕಿನಿಂದ ಹಾಗೂ ನೆರೆಯ ಕಲಬುರಗಿ, ಯಾದಗಿರಿ, ಬಾಗಲಕೋಟೆ ಜಿಲ್ಲೆಗಳ ಹಾಗೂ ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರ ಜಿಲ್ಲೆಗಳ ಹತ್ತಾರು ಗ್ರಾಮಗಳ ಜನರೂ ಇಲ್ಲಿಗೆ ಬರುತ್ತಾರೆ. ಹೀಗಾಗಿ ಬೆಡ್ ಕೊರೆಯಿಂದ ಎಲ್ಲರಿಗೂ ಚಿಕಿತ್ಸೆ ಸಿಗದಂತಾಗಿದೆ. ಬಡವರಾಗಿರುವ ನಮಗೆ ಉಚಿತ ಚಿಕಿತ್ಸೆಗೆ ಇಲ್ಲಿ ಬಂದರೂ ಬೆಡ್ಗಳ ಕೊರತೆಯಿಂದ ಬೇರೆ ಆಸ್ಪತ್ರೆಗೆ ಹೋಗುವಂತಾಗುತ್ತಿದೆ. ಸರ್ಕಾರ ಹಾಗೂ ಆರೋಗ್ಯ ಸಚಿವರು ಇತ್ತ ಗಮನ ಹರಿಸಬೇಕು. ಹೆಚ್ಚಿನ ಬೆಡ್ಗಳನ್ನು ನಿಯೋಜಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಪ್ರಸಕ್ತ ವರ್ಷದ ಜನವರಿಯಿಂದ ಅಕ್ಟೋಬರ್ವರೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಟ್ಟು 9,851 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿಕೊಳ್ಳಲಾಗಿದೆ. ಇದರಲ್ಲಿ ವಿಜಯಪುರ ಜಿಲ್ಲೆಯ 7,349 ಗರ್ಭಿಣಿಯರು, 1,928 ಇತರೆ ಜಿಲ್ಲೆಗಳ ಗರ್ಭಿಣಿಯರು, 574 ಇತರೆ ರಾಜ್ಯಗಳ ಗರ್ಭಿಣಿಯರು ಸೇರಿದ್ದಾರೆ. ಇನ್ನು ಈ ಅಂಕಿ ಅಂಶಗಳನ್ನು ಗಮನಿಸಿದಾಗ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಹಾಗೂ ಸಿಜೇರಿಯನ್ ಹೆರಿಗೆ ಸೇರಿದಂತೆ ಸರಾಸರಿ ಪ್ರತಿ ತಿಂಗಳು 985ಕ್ಕೂ ಆಧಿಕ ಹೆರಿಗೆಗಳು ಆಗುತ್ತಿವೆ. ಅದರೆ ನಿತ್ಯ ಸರಾಸರಿ 32 ಹೆರಿಗೆಗಳು ಇಲ್ಲಿ ಆಗುತ್ತಿರುವುದು ಅಂಕಿ ಅಂಶಗಳೇ ಹೇಳುತ್ತವೆ. ಹಾಗಾಗಿ ಆಸ್ಪತ್ರೆಗಳಲ್ಲಿ ಇರುವ 100 ಬೆಡ್ಗಳಲ್ಲಿ 75 ಬೆಡ್ಗಳನ್ನು ಬಾಣಂತಿಯರಿಗೆ 25 ಬೆಡ್ಗಳನ್ನು ನವಜಾತಾ ಶಿಶುಗಳಿಗಾಗಿ ಮೀಸಲಾಗಿಡಲಾಗಿದೆ.
ಸಿಜೇರಿಯನ್ಗೆ ಒಳಗಾದವರಿಗೆ ವಾರವಾದರೂ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳಬೇಕಿದೆ. ಎಲ್ಲರಿಗೂ ಹೆರಿಗೆ ಮಾಡಿಸಿಕೊಳ್ಳಬೇಕೆಂದರೆ ಇಲ್ಲಿ ಬೆಡ್ಗಳ ಸಮಸ್ಯೆ ಎದುರಾಗಿದೆ. ಅನಿವಾರ್ಯವಾಗಿ ಬೆಡ್ಗಳು ಇಲ್ಲದ ಕಾರಣ ಇತರೆ ಆಸ್ಪತ್ರೆಗಳತ್ತ ಗರ್ಭಿಣಿಯರು ಹೋಗುವುದು ಅನಿವಾರ್ಯವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎಲ್ ಲಕ್ಕಣ್ಣವರ, ಬೆಡ್ ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಜಿಲ್ಲೆಯ ಸುತ್ತಮುತ್ತಲ ಜಿಲ್ಲೆಗಳ ಹಾಗೂ ಅನ್ಯ ರಾಜ್ಯಗಳ ಗರ್ಭಿಣಿಯರು ಇಲ್ಲಿ ಆಗಮಿಸುತ್ತಾರೆ. ಇದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿ ಬೆಡ್ಗಳು ಸಿಗದಂತಾಗುತ್ತಿದೆ. ಇತರೆ ರೂಂಗಳನ್ನು ಸಹ ನೀಡಲಾಗಿದೆ. ಆದರೂ ಬೆಡ್ಗಳ ಕೊರತೆಯಾಗುತ್ತಿದೆ ಎಂದಿದ್ದಾರೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ, ಶುಶ್ರೂಷಕರ, ಸಿಬ್ಬಂದಿಗಳ, ಚಿಕ್ಕ ಮಕ್ಕಳ ತಜ್ಞರ ಕೊರತೆ ಇಲ್ಲ. ಆದರೆ ಗರ್ಭಿಣಿಯರು ಸಂಖ್ಯೆ ಅಧಿಕವಾಗಿರುವ ಕಾರಣ ಒತ್ತಡ ಹೆಚ್ಚಾಗಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ಆಗುತ್ತಿಲ್ಲ. ವಿಜಯಪುರ, ಯಾದಗಿರಿ ಹಾಗೂ ಮಹಾರಾಷ್ಟ್ರದ ಭಾಗದಿಂದ ಇಲ್ಲಿಗೆ ಗರ್ಭಿಣಿಯರು ಆಗಮಿಸುತ್ತಾರೆ. ಹೀಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹೆಚ್ಚಿನ ಬೆಡ್ಗಳ ವ್ಯವಸ್ಥೆ ಮಾಡಲು ಸರ್ಕಾರ, ಆರೋಗ್ಯ ಇಲಾಖೆ, ಆರೋಗ್ಯ ಸಚಿವರು ಮುಂದಾಗಬೇಕಿದೆ.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:18 am, Sat, 12 November 22