ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಬಿಜೆಪಿಯಿಂದ ಉಚ್ಚಾಟನೆಯಾದ ನಂತರ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಆಲೋಚಿಸುತ್ತಿದ್ದಾರೆ. ಜನರ ಅಭಿಪ್ರಾಯವನ್ನು ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. ಬಿಎಸ್‍ವೈ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡಿದ ಅವರು, ಹಿಂದೂ ಪರ ಪಕ್ಷದ ಬೇಡಿಕೆ ಹೆಚ್ಚುತ್ತಿದೆ ಎಂದಿದ್ದಾರೆ. ವಿದೇಶಗಳಿಂದಲೂ ಹಣಕಾಸಿನ ನೆರವು ನೀಡುವುದಾಗಿ ಕರೆ ಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಉಚ್ಛಾಟನೆಯಾದ ಬಳಿಕ ಮೊದಲ ಬಾರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಸ್ವ ಕ್ಷೇತ್ರ ವಿಜಯಪುರಕ್ಕೆ ಭೇಟಿ ನೀಡಿದ್ದಾರೆ. ವಿಜಯಪುರದಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ “ಜನರ ಅಭಿಪ್ರಾಯ ಸಂಗ್ರಹಿಸಿ ಹೊಸ ಪಕ್ಷ ಬಗ್ಗೆ ನಿರ್ಧಾರ ಮಾಡ್ತೇವೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿಸಿದ್ರೆ ಬೇರೆ ನಿರ್ಧಾರ ಮಾಡುತ್ತೇನೆ. ಹಿಂದೂ ಪಕ್ಷ ಕಟ್ಟುವಂತೆ ಜನರಿಂದ ಕರೆ ಬರುತ್ತಿವೆ. ಭಾರತೀಯ ಜನತಾ ಪಕ್ಷದಲ್ಲಿ ಭವಿಷ್ಯ ಕಾಣುತ್ತಿಲ್ಲ. ಬಿಎಸ್‍ವೈ ಕುಟುಂಬ ಮೂಲೆಗುಂಪು ಮಾಡುವ ಕೆಲಸ ಮಾಡುತ್ತಿದೆ. ಇದೆ ಮುಂದುವರಿದರೆ ವಿಜಯದಶಮಿಗೆ ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
“ಬಿಎಸ್ ಯಡಿಯೂರಪ್ಪ ಕುಟುಂಬ ವಿರೋಧ ಪಕ್ಷಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಹಿಂದೂಗಳ ರಕ್ಷಣೆ ಮಾಡೋದು ಯಾರು? ಬಿಜೆಪಿ ನೈತಿಕ ಅಧಃಪತನಕ್ಕೆ ಬಿ.ವೈ.ವಿಜಯೇಂದ್ರ ಅವರೇ ಕಾರಣ. ಇದನ್ನ ಹೈಕಮಾಂಡ್ ತಿಳಿದುಕೊಳ್ಳಬೇಕು. ಜನರ ಅಭಿಪ್ರಾಯವನ್ನು ಸರ್ವೆ ಮಾಡಿ ನಿರ್ಧಾರ ಮಾಡುತ್ತೇವೆ. ಹಿಂದೂ ಪರ ಪಕ್ಷ ಬೇಕಾ ಎಂದು ಅಭಿಪ್ರಾಯ ಸಂಗ್ರಹಿಸುತ್ತೇನೆ. ಪಕ್ಷ ಕಟ್ಟಲು ಹಣ ಕೊಡುವುದಾಗಿ ವಿದೇಶಗಳಿಂದ ಕರೆ ಬರುತ್ತಿವೆ. ಪಕ್ಷ ಕಟ್ಟಲು $11 ಲಕ್ಷ ದೇಣಿಗೆ ಕೊಡುತ್ತೇವೆಂದು ಓರ್ವ ಹೇಳಿದ್ದಾರೆ. ಜನರು ದೇಣಿಗೆ ನೀಡಲು ತಯಾರಾಗಿದ್ದಾರೆ. ಜನರು ಹೇಳಿದಂತೆ ನಾನು ಕೇಳುತ್ತೇನೆ ಎಂದರು.