30 ಕಿಮೀ ಸಮುದ್ರ ಈಜಿ ದಾಖಲೆ ಬರೆದ ಚಿನ್ನದ ನಾಡಿನ ಬಾಲಕಿ
14 ವರ್ಷದ ಬಾಲಕಿ 30 ಕಿ.ಮೀ ಸಮುದ್ರ ಈಜುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಈ ಯುವ ಪ್ರತಿಭೆ, ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸ ಇವರ ಯಶಸ್ಸಿನ ಹಿಂದಿನ ರಹಸ್ಯವೆಂದು ಹೇಳಿದ್ದಾರೆ.
Updated on: Mar 30, 2025 | 3:00 PM

30 ಕಿ.ಮೀ ಸಮುದ್ರ ಈಜುವ ಮೂಲಕ ದಾಖಲೆ ಬರೆದ ಚಿನ್ನದ ನಾಡಿನ ಬಾಲಕಿಯ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕುಪ್ಪಳ್ಳಿ ಗ್ರಾಮದ ಶಿಕ್ಷಕರಾದ ಮಂಜುನಾಥ್ ಮತ್ತು ರೂಪ ದಂಪತಿಗಳ ಪುತ್ರಿ 14 ವರ್ಷದ ಡಿಂಪಲ್ ಸೋನಾಕ್ಷಿ ಎಂ.ಗೌಡ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಯಲು ಸೀಮೆ ಕೋಲಾರದಲ್ಲಿ ಹುಟ್ಟಿ ಸಮುದ್ರದಲ್ಲಿ ಈಜುವ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನದಲ್ಲಿ ಗೆದ್ದು ಬೀಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಗಡಿಭಾಗದ ಗ್ರಾಮೀಣ ಪ್ರತಿಭೆ ಸೋನಾಕ್ಷಿ ಸತತ ಪರಿಶ್ರಮದಿಂದ ಇಂಥದೊಂದು ಸಾಧನೆ ಮಾಡಿದ್ದಾರೆ. ಗುಜರಾತ್ನ ಅದ್ರಿ ಬೀಚಿನಿಂದ ವೀರವಾಲ್ ಜೆಟ್ಟಿರವರೆಗೆ 30 ಕಿ.ಮೀ ಸಮುದ್ರ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವಿನ ದಾಖಲೆ ಬರೆದಿದ್ದಾರೆ.

ಕಳೆದ ವರ್ಷ ನವೆಂಬರ್ನಲ್ಲಿ ನಡೆದ ರಾಷ್ಟ್ರಮಟ್ಟದ 10 ಕಿಲೋ ಮೀಟರ್ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಡಿಂಪಲ್ ಸೋನಾಕ್ಷಿ, ಹಾಂಕಾಂಗ್ನಲ್ಲಿ ನಡೆದಿದ್ದ ಏಷ್ಯನ್ ಈಜು ಚಾಂಪಿಯನ್ ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವಿಜಯದುರ್ಗದಲ್ಲಿ ನಡೆದ 15ಕಿ.ಮೀ ಈಜು ಸ್ಪರ್ಧೆಯಲ್ಲಿ ಮಾಲ್ವನ್ ಬೀಚಿನಲ್ಲಿ ನಡೆದ 5 ಕಿ.ಮೀ ಮತ್ತು 10 ಕಿ.ಮೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು.

ಜೊತೆಗೆ ಗುಜರಾತ್ನ ಪೋರಬಂದರ್ನಲ್ಲಿ ನಡೆದ ಐದು ಕಿ.ಮೀ ಮತ್ತು 10 ಕಿ.ಮೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಸೋನಾಕ್ಷಿ, ವಿಶ್ವ ಚಾಂಪಿಯನ್ ಶಿಪ್ ಮತ್ತು ಒಲಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ಗುರಿಯನ್ನು ಹೊಂದಿದ್ದಾರೆ. ಇವರ ಸಾಧನೆಗೆ ಈಗಾಗಲೇ ದ್ರೋಣಾಚಾರ್ಯ ಪ್ರಶಸ್ತಿ ಸಿಕ್ಕಿದೆ.

ಬೆಂಗಳೂರಿನ ನಿಹಾರ್ ಅಮೀನ್ ರವರ ಡಾಲ್ಫಿನ್ ಅಕಾಡೆಮಿಯಲ್ಲಿ ದಿನನಿತ್ಯ ಆರು ಗಂಟೆ ಈಜು ಅಭ್ಯಾಸ ಮಾಡುವ ಸೋನಾಕ್ಷಿ ಅವರ ಕಠಿಣ ಪರಿಶ್ರಮದಿಂದಲೇ ಇಂಥದೊಂದು ಸಾಧನೆ ಮಾಡಲು ಸಾಧ್ಯ ಅನ್ನೋದು ಅವರ ಪೊಷಕರ ಮಾತು. ಆದಷ್ಟು ಬೇಗ ಡಿಂಪಲ್ ಸೋನಾಕ್ಷಿ ಅವರ ಸಾಧನೆಯ ಕನಸು ನನಸಾಗಲಿ ಅನ್ನೋದು ಚಿನ್ನದ ನಾಡಿನ ಜನರ ಆಶಯವಾಗಿದೆ.



















