ನಾಲಿಗೆ ಹರಿಬಿಟ್ಟ SDPI ನಾಯಕನಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಡಕ್ ಕೌಂಟರ್
ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ SDPI ನಾಯಕ ಮೌಲಾನಾ ನೂರುದ್ದೀನ್ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಟಿಪ್ಪು ಸುಲ್ತಾನ್ ಬಗ್ಗೆ ಪ್ರಸ್ತಾಪಿಸಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ಶಾಸಕ ಯತ್ನಾಳ್ರಿಂದಲೂ ಕೌಂಟರ್ ಹೇಳಿಕೆ ವ್ಯಕ್ತವಾಗಿದ್ದು, ಟಿಪ್ಪು ಪರ ಇರುವವರು ದೇಶದ್ರೋಹಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಮನಗರ/ ವಿಜಯಪುರ, ನವೆಂಬರ್ 28: ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ SDPI ನಾಯಕ ಮೌಲಾನಾ ನೂರುದ್ದೀನ್ ನಾಲಿಗೆ ಹರಿಬಿಟ್ಟಿರುವ ವಿಡಿಯೋವೊಂದು ವೈರಲ್ ಆಗಿದೆ. ರಾಮನಗರದ ರೈಲ್ವೇ ಸ್ಪೇಷನ್ ಸರ್ಕಲ್ ಬಳಿ ನಡೆದ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೌಲಾನಾ ನೂರುದ್ದೀನ್, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.
ಮೌಲಾನಾ ನೂರುದ್ದೀನ್ ಹೇಳಿದ್ದೇನು?
ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಭಯೋತ್ಪಾದಕ ಎಂದಿರುವ ಮೌಲಾನಾ ನೂರುದ್ದೀನ್, ಪ್ರತಾಪ್ ಸಿಂಹ ಬಗ್ಗೆಯೂ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಅಲ್ಲದೆ, ಟಿಪ್ಪು ಸುಲ್ತಾನ್ ಇಲ್ಲದಿದ್ದರೆ ಪ್ರತಾಪ್ ಸಿಂಹ ಬ್ರಿಟಿಷರ ನಾಯಿ ತೊಳೆಯಬೇಕಿತ್ತು ಎಂದಿದ್ದಾರೆ.
ಯತ್ನಾಳ್ ಖಡಕ್ ಕೌಂಟರ್
ಮೌಲಾನಾ ನೂರುದ್ದೀನ್ ಹೇಳಿಕೆಗೆ ಇತ್ತ ಶಾಸಕ ಯತ್ನಾಳ್ರಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ತೀಕ್ಷ್ಣವಾಗಿ ಹೇಳಿಕೆ ನೀಡಿರುವ ಶಾಸಕರು, ಟಿಪ್ಪು ಪರ ಇರುವವರು ದೇಶದ್ರೋಹಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ಲಕ್ಷಾಂತರ ಹಿಂದೂಗಳ ಕೊಲೆಯಾಗಿದೆ. ಅದೆಲ್ಲ ಇತಿಹಾಸದಲ್ಲಿ ದಾಖಲಾಗಿ, ಸಾಕ್ಷಿಯಾಗಿದೆ. ಕರ್ನಾಟಕ ಹಾಗೂ ಕೇರಳ ಸೇರಿ 3,500 ದೇವಸ್ಥಾನಗಳನ್ನ ಟಿಪ್ಪು ನಾಶ ಮಾಡಿದ್ದಾನೆ. ಲಕ್ಷಾಂತರ ಕೊಡವ ಸಮಾಜದವರ ನೆರಮೇಧ ನಡೆಸಿದ್ದಾನೆ. ಹೀಗಾಗಿ ನಮಗೆ ಟಿಪ್ಪು ಆದರ್ಶವಲ್ಲ, ಆತ ಹಿಂದೂ ಧರ್ಮದ ದ್ರೋಹಿಯಾಗಿದ್ದ. ಇಸ್ಲಾಮೀಕರಣ ಮಾಡಲು ಬಯಸಿದ್ದ, ಆದರೆ ಅದು ಆಗಲಿಲ್ಲ. ಅಂತವನಿಂದ ನಾವು ಆದರ್ಶ ಕಲಿಯಬೇಕಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಅಧಿಕಾರ ಹಂಚಿಕೆ ಕಿತ್ತಾಟದಲ್ಲಿ ಬಿದ್ದೋಯ್ತು ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ
ಇದೇ ವೇಳೆ ದೆಹಲಿಯಲ್ಲಿ ನಡೆದ ಸ್ಫೋಟದ ವಿಚಾರವನ್ನೂ ಪ್ರಸ್ತಾಪಿಸಿರುವ ಯತ್ನಾಳ್, ಘಟನೆಯನ್ನು ಯಾವುದೇ ಮುಸ್ಲಿಂ ಧರ್ಮಗುರುಗಳು, ಮುಖಂಡರು ಖಂಡಿಸಿಲ್ಲ. ಇಲ್ಲಿ ಶಾಂತಿ ಸಭೆ ಮಾಡಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎನ್ನುತ್ತಾರೆ ಅಷ್ಟೇ. ಅವರಿಗೆ ಏನಾದರೂ ಆದರೆ ಸಿದ್ದರಾಮಯ್ಯ ಮೊದಲು ಮಾತನಾಡುತ್ತಾರೆ. ಮುಸ್ಲಿಮರ ನಿಷ್ಟೆ ದೇಶಕ್ಕಲ್ಲ, ಬದಲು ಅವರ ಧರ್ಮಕ್ಕೆ ಎಂದು ಅಂಬೇಡ್ಕರ್ ಅಂದೇ ಹೇಳಿದ್ದರು ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:32 am, Fri, 28 November 25




