ವಿಜಯಪುರ: ಬಿಜೆಪಿ (BJP) ಪಕ್ಷಕ್ಕೆ ಡ್ಯಾಮೇಜ್ ಆಗಿದ್ದರೆ ಅದು ಬಿ ವೈ ವಿಜಯೇಂದ್ರನಿಂದ (BY Vijayendra) ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ (Basangouda Patil Yatnal) ಆರೋಪ ಮಾಡಿದ್ದಾರೆ. ವಿಜಯೇಂದ್ರನಿಂದ ಬಿಜೆಪಿಯ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಇಲ್ಲದಿದ್ದರೆ ಯಡಿಯೂರಪ್ಪ (B S Yadiyurappa) ಸಿಎಂ ಸ್ಥಾನದಲ್ಲೇ ಮುಂದುವರಿಯುತ್ತಿದ್ದರು. ವಿಜಯೇಂದ್ರ ಹಗರಣ ಮಾಡಿದಾಗಲೆಲ್ಲ ಬಿಎಸ್ವೈ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.
ವಿಜಯೇಂದ್ರ ಭ್ರಷ್ಟಾಚಾರದಿಂದ ಬಿಜೆಪಿ ಪಕ್ಷದ ಹೆಸರು ಕೆಟ್ಟಿದೆ. ಯಡಿಯೂರಪ್ಪ ಜೈಲಿಗೆ ಹೋಗಿ ಬರಲು ವಿಜಯೇಂದ್ರ ಕಾರಣ. ಮಗನ ಮಾತು ಕೇಳಿ ಅಧಿಕಾರ ನಡೆಸಬಾರದು. ಬಿ ಎಸ್ ಯಡಿಯೂರಪ್ಪ ಒಳ್ಳೆಯವರು ಇದ್ದಾರೆ ಎಂದು ಹೇಳಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣದ ತನಿಖೆ ಸಿಬಿಐಗೆ ವಹಿಸಿ
ಪಿಎಸ್ಐ ನೇಮಕಾತಿ ಹಗರಣದ ತನಿಖೆ ಸಿಬಿಐಗೆ ವಹಿಸಿ. ಇಡೀ ಪ್ರಕರಣದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ. ಇದನ್ನೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಸಿಎಂ ಪುತ್ರನ ಕೈವಾಡದ ಬಗ್ಗೆ ನನಗೆ 10 ಬಾರಿ ನನಗೆ ಪ್ರಶ್ನೆ ಕೇಳಿದ್ದಾರೆ. ಸಿಬಿಐ ತನಿಖೆಗೆ ವಹಿಸಿದರೆ ಯಾರು ಕಳ್ಳ ಎಂದು ಗೊತ್ತಾಗಲಿದೆ ಎಂದು ಒತ್ತಾಯಿಸಿದರು.
ADGP ಒಬ್ಬರನ್ನೇ ಅರೆಸ್ಟ್ ಮಾಡಿ ಎಫ್ಐಆರ್ ದಾಖಲಿಸಿದ್ದಾರೆ. ADGP ಒಬ್ಬರೇ ಶಾಮೀಲಾಗಿಲ್ಲ, ಇದರ ಹಿಂದೆ ದೊಡ್ಡ ಕಳ್ಳರಿದ್ದಾರೆ. ಈ ನಿಟ್ಟಿನಲ್ಲಿ ಸಿಬಿಐ ತನಿಖೆಗೆ ವಹಿಸಬೇಕೆಂದು ಮನವಿ ಮಾಡಿದ್ದೇನೆ. ಅಕ್ರಮ ಪಿಎಸ್ಐ ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್ ನವರು, ನಮ್ಮವರು ಹಾಗೂ ಜೆಡಿಎಸ್ ನವರಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಪಿಎಸ್ಐ ಹುದ್ದೆಗಾಗಿ 70-80 ಲಕ್ಷ ಹಣ ಕೊಟ್ಟಿದ್ದಾರೆ, ಅವರ ಕುಟುಂಬವೇ ಹಾಳಾಗಿ ಹೋಗುತ್ತವೆ. ಈ ನಿಟ್ಟಿನಲ್ಲಿ ಪ್ರಮಾಣಿಕ ತನಿಖೆಗಾಗಿ ಗೃಹ ಸಚಿವರಲ್ಲಿ ಮನವಿ ಮಾಡಿದ್ದೇನೆ. 70-80 ಲಕ್ಷ ಹಣ ಕೊಟ್ಟವರ ಹಣವನ್ನು ವಾಪಸ್ ಕೊಡಿಸಬೇಕು. ಇಡೀ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕೊಡಬೇಕು. ಇಂಥ ಘಟನೆಗಳಿಂದಲೇ ಭ್ರಷ್ಟಾಚಾರ ಬೆಳೆದಿದೆ. ಪೊಲೀಸ್ ಆಧಿಕಾರಿಗಳ ವರ್ಗಾವಣೆಗೂ ಹಣ ತಿಂದರೆ ಪ್ರಾಮಾಣಿಕತೆ ಬೆಳೆಸಲು ಸಾದ್ಯವಿಲ್ಲಾ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Mon, 3 October 22