ವಿಜಯಪುರ: ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಹೋರಾಟಕ್ಕೆ ಮುಂದಾಗಿದ್ದಾರೆ. ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರು, ಇಂದು ಒಂದೇ ದಿನ ಎರಡು ಬಾರಿ ಕಚೇರಿಯ ಗೋಡೆ ಮೇಲೆ ಸಾವರ್ಕರ್ ಫೋಟೊ ಅಂಟಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಕಾಂಗ್ರೆಸ್ ಕಚೇರಿಗೆ ಅಂಟಿಸಿದ್ದ ಸಾವರ್ಕರ್ ಫೋಟೊವನ್ನು ಪೊಲೀಸರು ತೆರವುಗೊಳಿಸಿ, ಪ್ರತಿಭಟನಾನಿರತರನ್ನು ವಶಕ್ಕೆ ಪಡೆದುಕೊಂಡರು.
ಈ ವೇಳೆ ಬಿಜೆಪಿ ಕಾರ್ಯಕರ್ತರು ‘ಮೇ ಹೂಂ ಸಾವರ್ಕರ್’ ಎಂದು ಘೋಷಣೆಯ ಜೊತೆಗೆ ‘ಭಾರತ್ ಮಾತಾ ಕಿ ಜೈ’ ಎಂದು ಕೂಗಿದರು. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಜಲನಗರದ ನವರಸಪುರ ಕಾಲೊನಿಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಪೊಲೀಸರನ್ನು ಲೆಕ್ಕಿಸದೇ ಬಿಜೆಪಿ ಕಾರ್ಯಕರ್ತರು ನುಗ್ಗಿ, ಸಾವರ್ಕರ್ ಫೋಟೊ ಅಂಟಿಸಿದರು.
ಪೊಲೀಸರನ್ನು ತಳ್ಳುತ್ತಾ ಬಂದವರನ್ನು ಕಂಡು ಕಾಂಗ್ರೆಸ್ ನಾಯಕರು ಆಕ್ರೋಶಗೊಂಡರು. ನಂತರ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ದೂರಕ್ಕೆ ಕರೆದೊಯ್ದರು. ಈ ವೇಳೆ ಪೊಲೀಸ್ ಅಧಿಕಾರಗಳನ್ನು ಕಾಂಗ್ರೆಸ್ ಮುಖಂಡರು ತರಾಟೆಗೆ ತೆಗೆದುಕೊಂಡರು. ನೀವೇ ಬಿಜೆಪಿ ಕಾರ್ಯಕರ್ತರನ್ನು ಛೂ ಬಿಟ್ಟಿದ್ದೀರಿ, ನಿಮ್ಮ ಬೆಂಬಲದಿಂದಲೇ ಬಿಜೆಪಿ ಕಾರ್ಯಕರ್ತರು ಇಲ್ಲಿಗೆ ಬಂದಿದ್ದಾರೆ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಪೊಲೀಸ್ ವಶಕ್ಕೆ ಬಿಜೆಪಿ ಪದಾಧಿಕಾರಿ
ಕಾಂಗ್ರೆಸ್ ಕಚೇರಿಯ ಗೋಡೆಗೆ ಸಾವರ್ಕರ್ ಫೋಟೊ ಅಂಟಿಸಿದ್ದು ನಾನೇ ಎಂದು ಬಿಜೆಪಿ ಪದಾಧಿಕಾರಿ ಬಸವರಾಜ ಹೂಗಾರ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಆದರೂ ಕೆಲಸ ಹೊತ್ತಿನ ನಂತರ ಮತ್ತೆ ಬಂದ ಕಾರ್ಯಕರ್ತರು, ಪುನಃ ಕಚೇರಿ ಗೋಡೆ ಹಾಗೂ ಫ್ಲೆಕ್ಸ್ ಮೇಲೆ ಸಾವರ್ಕರ್ ಫೋಟೊ ಅಂಟಿಸಿದರು.
ಕಾಂಗ್ರೆಸ್ನವರು ಸಾವರ್ಕರ್ ಪೋಟೋ ಸುಟ್ಟಿದ್ದಕ್ಕಿಂತ ನಾವು ಸಾವರ್ಕರ್ ಪೋಟೋ ಅಂಟಿಸಿದ್ದು ದೊಡ್ಡ ಅಪರಾಧವಲ್ಲ. ಸಾವರ್ಕರ್ ಅವರನ್ನು ಕಾಂಗ್ರೆಸ್ನವರು ಪ್ರಚಾರದ ವಸ್ತುವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಾಡಲು ಕೆಲಸವಿಲ್ಲದ ಕೈ ಪಕ್ಷದವರು ಸಾವರ್ಕರ್ ಬಗ್ಗೆ ಮಾತನಾಡಿ ಪ್ರಚಾರ ಪಡೆಯಲು ಮಾಡುತ್ತಿದ್ದಾರೆ. ಸಾರ್ವಕರ್ ಅವರನ್ನು ಗೌರವಿಸೋ ಕೆಲಸ ಮಾಡಿ, ಅವರ ಬಗ್ಗೆ ತಿಳಿದುಕೊಳ್ಳಿ ಎಂದು ಕಾಂಗ್ರೆಸ್ ಮುಖಂಡರಿಗೆ ಬಸವರಾಜ ಸಲಹೆ ಮಾಡಿದರು.
ಸಾವರ್ಕರ್ ಅವರ ಕೇವಲ ಆರು ಪತ್ರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಮಾತನಾಡುವುದು ಸರಿಯಲ್ಲ. ಸಾವರ್ಕರ್ ಬಗ್ಗೆ ಕಾಂಗ್ರೆಸ್ ನವರು ಮಾತನಾಡುವುದನ್ನು ಇಲ್ಲಿಗೆ ನಿಲ್ಲಿಸಿದರೆ ಸರಿ. ಇಲ್ಲವಾದರೆ ಇಂದು ಅವರ ಕಚೇರಿಗೆ ಸಾವರ್ಕರ್ ಪೋಟೋ ಹೋಗಿದೆ, ನಾಡಿದ್ದು ಅವರ ಮನೆಗೆ ಹೋಗುತ್ತದೆ ಎಂದರು.
ಬಿಜೆಪಿ ಕಚೇರಿಗೆ ಟಿಪ್ಪು ಸುಲ್ತಾನ್ ಫೋಟೊ ಅಂಟಿಸುತ್ತೇವೆ: ರಾಜು ಅಲಗೂರು
ಬಿಜೆಪಿ ಕಾರ್ಯಕರ್ತರು ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಅಲಗೂರು, ಬಿಜೆಪಿ ಕಾರ್ಯಕರ್ತ ಬಸವರಾಜ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇವೆ. ಪೊಲೀಸರು ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಬಿಜೆಪಿ ಕಚೇರಿಗೆ ಟಿಪ್ಪು ಸುಲ್ತಾನ್ ಫೋಟೋ ಅಂಟಿಸಬೇಕಾಗುತ್ತೆ. ನಾವೇನು ಕೈಗೆ ಬಳೆ ಹಾಕಿಕೊಂಡಿಲ್ಲ ಎಂದರು.
ಸುಮಾರು 120 ವರ್ಷಗಳ ಇತಿಹಾಸ ಇರುವ ಪಕ್ಷ ನಮ್ಮದು. ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ್ದು ನೋವು ತಂದಿದೆ. ಸಾವರ್ಕರ್ ಪ್ರತಿಪಾದಿಸುವ ವಿಚಾರಗಳಿಗೂ, ನಮ್ಮ ಪಕ್ಷಕ್ಕೂ ವಿಚಾರಧಾರೆ ಭಿನ್ನವಾಗಿದೆ. ಅಂತಹ ಸಾವರ್ಕರ್ ಫೋಟೋ ನಮ್ಮ ಕಚೇರಿಗೆ ಅಂಟಿಸಿರೋದು ನಮಗೆ ನೋವು ತರಿಸಿದೆ ಎಂದರು.