ಶಕ್ತಿ ಯೋಜನೆ ಎಫೆಕ್ಟ್: ಬಸ್ ಬೇಕೆ ಬೇಕೆಂದ ವಿದ್ಯಾರ್ಥಿಗಳು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ
ಶಕ್ತಿ ಯೋಜನೆ ಜಾರಿ ಬಳಿಕ ಉಚಿತ ಬಸ್ ಪ್ರಯಾಣದ ಬಿಸಿ ವಿದ್ಯಾರ್ಥಿಗಳಿಗೆ ತಟ್ಟಿದೆ. ಬಸ್ ಸಮಸ್ಯೆಯಿಂದ ರೋಸಿಹೋದ ವಿದ್ಯಾರ್ಥಿಗಳು ಇಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ಮಾಡಿದ್ದಾರೆ.
ವಿಜಯಪುರ: ಶಕ್ತಿ ಯೋಜನೆ ಜಾರಿ ಬಳಿಕ ಉಚಿತ ಬಸ್ ಪ್ರಯಾಣದ ಬಿಸಿ ವಿದ್ಯಾರ್ಥಿಗಳಿಗೆ (students) ತಟ್ಟಿದೆ. ಬಸ್ ಸಮಸ್ಯೆಯಿಂದ ರೋಸಿಹೋದ ವಿದ್ಯಾರ್ಥಿಗಳು ಇಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ (Protest) ಮಾಡಿದ್ದಾರೆ. ನಮಗೆ ಸಮರ್ಪಕ ಬಸ್ ಸೇವೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬೇಕೆ ಬೇಕು ಬಸ್ ಬೇಕು
‘ಬೇಕೆ ಬೇಕು ಬಸ್ ಬೇಕೆಂದು’ ಹೆದ್ದಾರಿ ಮೇಲೆ ಕುಳಿತಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಸಾಥ್ ನೀಡಿದ್ದಾರೆ. ಬಸ್ ಬಾರದೇ ತೊಂದರೆ ಅನುಭವಿಸುತ್ತಿದ್ದೇವೆ. ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲಾ ಎಂದು ವಿದ್ಯಾರ್ಥಿಗಳು ಅಸಮಾಧಾನ ಹೊರ ಹಾಕಿದ್ದಾರೆ.
ವಿದ್ಯಾರ್ಥಿಗಳ ಮನವೊಲಿಕೆಗೆ ಯತ್ನ
ಸ್ಥಳಕ್ಕೆ ಆಗಮಿಸಿದ ಪೊಲೀಸರು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಬಾರದೆಂದು ಎಚ್ಚರಿಕೆ ನೀಡಿದ್ದಾರೆ. ಆದರೂ ಪೊಲೀಸರ ಎಚ್ಚರಿಕೆಗೆ ಜಗ್ಗದ ವಿದ್ಯಾರ್ಥಿಗಳು, ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ವಾಹನ ಸಂಚಾರ ಬಂದ್ ಮಾಡಿ ಪ್ರತಿಭಟನೆ ಮುಂದುವರೆಸಿದರು. ಬಳಿಕ ವಿಜಯಪುರ ಗ್ರಾಮೀಣ ಪೊಲೀಸರು ವಿದ್ಯಾರ್ಥಿಗಳ ಮನವೊಲಿಕೆಗೆ ಯತ್ನಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಬಸ್ ನೀಡಿದ ಸಾರಿಗೆ ಆಧಿಕಾರಿ
ಒಂದು ಕಡೆ ಬಸ್ಗಾಗಿ ವಿದ್ಯಾರ್ಥಿಗಳು ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತಿದ್ದರೆ, ಇನ್ನೊಂದೆಡೆ ಕಳೆದ 9 ವರ್ಷಳಿಂದ ಬಸ್ ಸಮಸ್ಯೆ ಎದುರಿಸುತ್ತಿದ್ದ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಣಸ್ಯಾಳ ಗ್ರಾಮದ ಆದರ್ಶ ವಿದ್ಯಾಲಯ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಒದಗಿಸಲಾಗಿದೆ. ಬಸ್ ಸೌಲಭ್ಯ ಕಲ್ಪಿಸಿದ ಬಸ್ ಘಟಕದ ವ್ಯವಸ್ಥಾಪಕ ಪಿ ಕೆ ಜಾಧವ ಅವರಿಗೆ ವಿದ್ಯಾರ್ಥಿಗಳಿಂದ ಸನ್ಮಾನ ಮಾಡಲಾಗಿದೆ.
ಕಳೆದ 9 ವರ್ಷಳಿಂದ ವಿದ್ಯಾರ್ಥಿಗಳು ಬಸ್ ಸಮಸ್ಯೆ ಎದುರಿಸುತ್ತಿದ್ದರು. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಮತ್ತಷ್ಟು ತೊಂದರೆ ಆಗಿತ್ತು. ಈ ಹಿನ್ನಲೆ ಸೂಕ್ತ ಬಸ್ ಸೌಲಭ್ಯಕ್ಕಾಗಿ ಪಿ ಕೆ ಜಾಧವ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಡಿಪೋ ಮ್ಯಾನೇಜರ್ ಬಸ್ ಸೌಲಭ್ಯ ನೀಡಿದ್ದಾರೆ. ಶಾಲೆಗೆ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.