ಮುಂಗಾರು ವಿಳಂಬ ದಿನದಿಂದ ದಿನಕ್ಕೆ ಖಾಲಿಯಾಗುತ್ತಿದೆ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ
ಮುಂಗಾರು ಮಳೆಯಾಗದ ಕಾರಣ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾನದಿಗೆ ನಿರ್ಮಾಣ ಮಾಡಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರದಲ್ಲಿ ನೀರನ ಮಟ್ಟ ಸಂಪೂರ್ಣ ಕುಸಿದು ಹೋಗಿದೆ. ಅದೇ ರೀತಿಯಾಗಿ ಮೈಸೂರು ಜಿಲ್ಲೆಯ ಹೆಚ್ಡಿ ಕೋಟೆ ತಾಲ್ಲೂಕು ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದಲ್ಲಿ ನೀರು ಖಾಲಿ ಆಗುವ ಆತಂಕ ಎದುರಾಗಿದೆ.
ವಿಜಯಪುರ: ಮುಂಗಾರು ಮಳೆಯಾಗದ ಕಾರಣ ಕೃಷ್ಣೆಯ ಒಡಲು ಖಾಲಿ ಖಾಲಿಯಾಗಿದೆ. ಅದರಲ್ಲೂ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾನದಿಗೆ ನಿರ್ಮಾಣ ಮಾಡಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ (Lal Bahadur Shastri Sagar) ದಲ್ಲಿ ನೀರನ ಮಟ್ಟ ಸಂಪೂರ್ಣ ಕುಸಿದು ಹೋಗಿದೆ. ಕೆಲವೇ ದಿನಗಳಲ್ಲಿ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಸಂಪೂರ್ಣವಾಗಿ ಬತ್ತಿ ಹೋಗುವ ಆತಂಕ ಎದುರಾಗಿದೆ. ಇದರ ಮಧ್ಯೆ ನೆರೆಯ ಮಹಾರಾಷ್ಟ್ರದಲ್ಲೂ ಮಳೆಯಾಗಿಲ್ಲ. ಜೊತೆಗೆ ಕೃಷ್ಣೆಯ ಉಗಮ ಸ್ಥಾನ ಮಹಾಬಲೇಶ್ವರದಲ್ಲಿಯೂ ಮಳೆಯಾಗದ ಕಾರಣ ನದಿಗೆ ಒಳ ಹರಿವು ಉಂಟಾಗಿಲ್ಲ.
ಆಲಮಟ್ಟಿಯ ಡ್ಯಾಂ 519.60 ಮೀಟರ್ ಎತ್ತರವಿದ್ದು ಸದ್ಯ ಡ್ಯಾಂನಲ್ಲಿ 507.47 ಮೀಟರ್ ನೀರು ಮಾತ್ರ ಸಂಗ್ರಹವಾಗಿದೆ. ಒಟ್ಟು 123 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ಡ್ಯಾಂನಲ್ಲೀಗ ಕೇವಲ 19.544 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ.
ಇದನ್ನೂ ಓದಿ: Indi Kagzi Lemons: ವಿಜಯಪುರದ ಇಂಡಿ ನಿಂಬೆಗೆ ಸಿಕ್ತು GI ಟ್ಯಾಗ್ ಮಾನ್ಯತೆ, ಸಂಪೂರ್ಣ ವರದಿ ಇಲ್ಲಿದೆ ನೋಡಿ
ಈ ಪೈಕಿ 1.924 ಟಿಎಂಸಿ ನೀರು ಬಳಕೆಗೆ ಮಾತ್ರ ಲಭ್ಯವಾಗುತ್ತಿದೆ. ಕಡಿಮೆ ನೀರಿನ ಸಂಗ್ರಹದ ಮಧ್ಯೆ ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಡ್ಯಾಂನಿಂದ 572 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ತ್ವರಿತವಾಗಿ ಮಳೆಯಾಗದೇ ಹೋದರೆ ಸಂಪೂರ್ಣವಾಗಿ ಕೃಷ್ಣಾನದಿ ಹಾಗೂ ಡ್ಯಾಂನಲ್ಲಿ ನೀರು ಬತ್ತಿ ಹೋಗಲಿದೆ. ಡ್ಯಾಂನಲ್ಲಿ ನೀರು ಖಾಲಿಯಾದರೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುವ ಸಾಧ್ಯತೆಯನ್ನು ಯಾರೂ ತಳ್ಳಿ ಹಾಕುವಂತಿಲ್ಲಾ. ವಿಜಯಪುರ ನಗರ ಕೆಲ ಪಟ್ಟಣಗಳು ಹಾಗೂ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ನೀರು ಒದಗಿಸುವ ಕೃಷ್ಣೆಯ ನೀರು ಖಾಲಿಯಾದರೆ ಸಮಸ್ಯೆಗಳ ಸರಮಾಲೇಯೇ ಎದುರಾಗಲಿದೆ. ಕಾರಣ ಶೀಘ್ರ ಮಳೆಯಾಗಬೇಕೆಂದು ಜಿಲ್ಲೆಯ ಜನರು ಪ್ರಾರ್ಥನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಾಕಿ ಹಣಕ್ಕಾಗಿ ವ್ಯಕ್ತಿಯನ್ನು ಅರೆಬೆತ್ತಲೆಯಾಗಿ ಕೂಡಿಸಿದ ಪೆಟ್ರೋಲ್ ಬಂಕ್ ಮಾಲೀಕರು
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ ಹೀಗಿದೆ
ಮೈಸೂರು: ಜಿಲ್ಲೆಯ ಹೆಚ್ಡಿ ಕೋಟೆ ತಾಲ್ಲೂಕು ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯವಿದ್ದು, 84 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 50.98 ಅಡಿಯಿದ್ದು, ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 63.27 ಅಡಿಗಳಷ್ಟಿತ್ತು. ಜಲಾಶಯದ ಇಂದಿನ ಒಳಹರಿವು 1,461 ಕ್ಯೂಸೆಕ್ ಇದ್ದರೆ, ಕಳೆದ ವರ್ಷ 3,091 ಕ್ಯೂಸೆಕ್ ಇತ್ತು.
ಜಲಾಶಯದ ಹೊರಹರಿವು 300 ಕ್ಯೂಸೆಕ್, ಕಳೆದ ವರ್ಷ 1000 ಸಾವಿರ ಕ್ಯೂಸೆಕ್ ಇತ್ತು. ಗರಿಷ್ಠ 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 4.35 ಟಿಎಂಸಿ ನೀರು ಸಂಗ್ರಹ ಮಾಡಲಾಗಿದೆ. ಕಳೆದ ವರ್ಷ ಇದೇ ವೇಳೆಗೆ 8.62 ಟಿಎಂಸಿ ನೀರು ಸಂಗ್ರಹವಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.