Indi Kagzi Lemons: ವಿಜಯಪುರದ ಇಂಡಿ ನಿಂಬೆಗೆ ಸಿಕ್ತು GI ಟ್ಯಾಗ್ ಮಾನ್ಯತೆ, ಸಂಪೂರ್ಣ ವರದಿ ಇಲ್ಲಿದೆ ನೋಡಿ
GI tag Lemons: ಬಾಗಲಕೋಟೆ ತೋಟಗಾರಿಕಾ ವಿವಿ ವಿಜ್ಞಾನಿಗಳು 25 ಬಗೆಯ ಮಾಹಿತಿಯನ್ನು ಜಿಯೋಗ್ರಾಫಿಕಲ್ ಇಂಡಿಕೇಶನ್ ರೆಜಿಸ್ಟ್ರೇಷನ್ ಕಚೇರಿಗೆ ಕಳುಹಿಸಿಕೊಟ್ಟಿದ್ದರು. ಎಲ್ಲಾ ಆಯಾಮಗಳಲ್ಲಿ ಪರೀಕ್ಷೆ ನಡೆಸಿದ ಆಧಿಕಾರಿಗಳು ಜಿಲ್ಲೆಯ ಇಂಡಿ ಲಿಂಬೆಗೆ ಜಿಐ ಟ್ಯಾಗ್ ಮಾನ್ಯತೆ ನೀಡಿದ್ದಾರೆ.
ಒಂದು ಉತ್ಪನ್ನದ ಭೌಗೋಳಿಕ ವಿಶೇಷತೆಯನ್ನು ಮಾನ್ಯ ಮಾಡಲು ಜಿಐ ಟ್ಯಾಗ್ ನೀಡಲಾಗುತ್ತದೆ. ಒಂದು ಉತ್ಪನ್ನದ ಮೂಲ ಯಾವ ಪ್ರದೇಶದ್ದು ಎಂಬುದನ್ನು ಹಾಗೂ ಉತ್ಪನ್ನದ ಮಹತ್ವವನ್ನು ಅದು ತಿಳಿಸುತ್ತದೆ. ಕಲಬುರಗಿಯ ತೊಗರಿಬೇಳೆ, ಶಿರಸಿಯ ಅಡಿಕೆ, ಧಾರವಾಡ ಪೇಡಾ, ಮೈಸೂರಿನ ಮೈಸೂರು ಪಾಕ್ ಗೆ ಈಗಾಗಲೇ ಜಿಯೋಗ್ರಾಫಿಕಲ್ ಇಂಡಿಕೇಶನ್ ಆಫ್ ಗೂಡ್ಸ್ ಮಾನ್ಯತೆ ಸಿಕ್ಕಿದೆ. ಇದರ ಬೆನ್ನಲ್ಲೇ ಇದೀಗ ವಿಜಯಪುರ ಜಿಲ್ಲೆಯ ರೈತ ಜನರು ಖುಷಿ ಪಡುವ ವಿಚಾರ ಬಂದಿದೆ. ವಿಜಯಪುರ ಜಿಲ್ಲೆಯ ಲಿಂಬೆಗೆ (Indi Lemon) ಜಿಐ ಟ್ಯಾಗ್ (Geographical Identification tag) ಮಾನ್ಯತೆ ಸಿಕ್ಕಿದೆ. ಲಿಂಬೆಗೆ ಜಿಐ ಟ್ಯಾಗ್ ಮಾನ್ಯತೆ ಕುರಿತ ವರದಿ ಇಲ್ಲಿದೆ ನೋಡಿ. ಜಾಗತಿಕ ಮಟ್ಟದಲ್ಲಿ ಮಿಂಚಿದ ವಿಜಯಪುರ ಜಿಲ್ಲೆಯ ಲಿಂಬೆ….. ಇಂಡಿ ಲಿಂಬೆಗೆ (Kagzi Lemons) ಸಿಕ್ಕ ಐಜಿ ಟ್ಯಾಗ್….. ಲಿಂಬೆಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಆಫ್ ಗೂಡ್ಸ್ ಮಾನ್ಯತೆಯಿಂದ ಲಿಂಬೆ ಬೆಳೆಗಾರರಲ್ಲಿ ಸಂತಸ… ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶ ಮಾಡಲು ಅನುಕೂಲ…
ಹೌದು ವಿಜಯಪುರ ಜಿಲ್ಲೆಯ ತೋಟಗಾರಿಕೆ ಬೆಳೆಗಾರರು ಅದರಲ್ಲೂ ಲಿಂಬೆ ಬೆಳೆಗಾರರು ಖುಷಿ ಪಡೋ ಸಂಗತಿ ಹೊರ ಬಿದ್ದಿದೆ. ಕಾರಣ ಜಿಲ್ಲೆಯಲ್ಲಿ ಬೆಳೆಯೋ ಲಿಂಬೆ ಅದರಲ್ಲೂ ಇಂಡಿ ಭಾಗದಲ್ಲಿ ಬೆಳೆಯೋ ಲಿಂಬೆಗೆ ಇದೀಗ ಜಾಗತಿಕ ಮಾನ್ಯತೆ ಸಿಕ್ಕಂತಾಗಿದೆ. ಜಿಲ್ಲೆಯ ಲಿಂಬೆಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಆಫ್ ಗೂಡ್ಸ್ ನೀಡಬೇಕೆಂದು ಕಳೆದ 2022 ರಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.
ಈ ಸಂಬಂಧ ನಿಯಮಾವಳಿಗಳ ಪ್ರಕಾರ ತಮಿಳುನಾಡಿನ ಚೆನ್ನೈಲ್ಲಿರೋ ಜಿಯೋಗ್ರಾಫಿಕಲ್ ಇಂಡಿಕೇಶನ್ ರಿಜಿಸ್ಟ್ರೇಷನ್ ಕಚೇರಿಗೆ ವಿಜಯಪುರ ಜಿಲ್ಲೆಯ ಲಿಂಬೆಗೆ ಜಿಐ ಟ್ಯಾಗ್ ನೀಡಬೇಕೆಂದು ಸಕಲ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿತ್ತು. ಅರ್ಜಿ ಸಲ್ಲಿಕೆ ಬಳಿಕ ತಮಿಳುನಾಡಿನ ಚೆನ್ನೈನಲ್ಲಿರೋ ಜಿಯೋಗ್ರಾಫಿಕಲ್ ಇಂಡಿಕೇಶನ್ ರೆಜಿಸ್ಟ್ರೇಷನ್ ಕಚೇರಿ ಆಧಿಕಾರಿಗಳು ಲಿಂಬೆ ಬೆಳೆಯ ಕುರಿತಾದ 25 ವಿವಿಧ ಮಾಹಿತಿಯನ್ನು ಕೇಳಿದ್ದರು.
ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳು 25 ಬಗೆಯ ಮಾಹಿತಿಯನ್ನು ಜಿಯೋಗ್ರಾಫಿಕಲ್ ಇಂಡಿಕೇಶನ್ ರೆಜಿಸ್ಟ್ರೇಷನ್ ಕಚೇರಿಗೆ ಕಳುಹಿಸಿಕೊಟ್ಟಿದ್ದರು. ಎಲ್ಲಾ ಆಯಾಮಗಳಲ್ಲಿ ಪರೀಕ್ಷೆ ನಡೆಸಿದ ಜಿಯೋಗ್ರಾಫಿಕಲ್ ಇಂಡಿಕೇಶನ್ ರೆಜಿಸ್ಟ್ರೇಷನ್ ಕಚೇರಿ ಆಧಿಕಾರಿಗಳು ಜಿಲ್ಲೆಯ ಇಂಡಿ ಲಿಂಬೆಗೆ ಜಿಐ ಟ್ಯಾಗ್ ಮಾನ್ಯತೆ ನೀಡಿದ್ದಾರೆ. ಇದು ಜಿಲ್ಲೆಯ ರೈತರಿಗೆ ಜನರಿಗೆ ಲಿಂಬೆ ಬೆಳೆಗಾರರಿಗೆ ಹೆಮ್ಮೆಯ ವಿಚಾರವಾಗಿದೆ ಎನ್ನುತ್ತಾರೆ ಸಂತೋಷ ಸಪ್ಪಂಡಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಲಿಂಬೆ ಅಭಿವೃದ್ದಿ ಮಂಡಳಿ, ಇಂಡಿ.
ತೋಟಗಾರಿಕೆ ಬೆಳೆಗಳಿಗೆ ಪ್ರಸಿದ್ದಿಯಾದ ವಿಜಯಪುರ ಜಿಲ್ಲೆಯಲ್ಲಿ 10,789 ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆಯನ್ನು ಬೆಳೆಯಲಾಗುತ್ತಿದೆ. ಜೊತೆಗೆ 21453 ಹೆಕ್ಟೇರ್ ದ್ರಾಕ್ಷಿ, 5126 ಹೆಕ್ಟೇರ್ ದಾಳಿಂಬೆ ಬೆಳೆಯಲಾಗುತ್ತದೆ. ಇಷ್ಟರ ಮಧ್ಯೆ ಜಿಲ್ಲೆಯಲ್ಲಿ ವಿವಿಧ ಜಾತಿಯ ಲಿಂಬೆಗಳನ್ನು ಬೆಳೆಯಲಾಗುತ್ತಿದೆಯಾದರೂ ಇಂಡಿ ಲಿಂಬೆಗೆ ಅದರಲ್ಲೂ ಕಗ್ಝಿ ಜಾತಿಯ ಲಿಂಬೆಗೆ ಜಿಐ ಟ್ಯಾಗ್ ಸಿಕ್ಕಿದೆ.
ಕಗ್ಝಿ ತಳಿಗೆ ಇಂಡಿ ತಳಿ ಎಂದು ಕರೆಯಲಾಗಿದೆ. ಕಗ್ಝಿ ನಿಂಬೆ ಎಂದೇ ಜನಪ್ರಿಯತೆ ಗಳಿಸಿರುವ ಈ ತಳಿಯ ನಿಂಬೆ, ಮಣಿಪುರದ ಕಟ್ಟೆ ನಿಂಬೆಯ ನಂತರ ಜಿಐ ಟ್ಯಾಗ್ ಬಿರುದು ಪಡೆಯಲಿರುವ ಎರಡನೆಯ ತಳಿಯಾಗಿದೆ. ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುವಂತಹ ಈ ತಳಿಯ ನಿಂಬೆ ವಿಶೇಷ ಮೇಲ್ಮೈ ರಚನೆ ಹಾಗೂ ಅತಿ ಹೆಚ್ಚಿನ ಆಮೀಯ ಮೌಲ್ಯ ಹೊಂದಿದೆ. ಇವೆಲ್ಲಾ ಕಾರಣಗಳಿಂದ ಜಿಐ ಟ್ಯಾಗ್ ಸಿಕ್ಕಿದೆ. ರಾಷ್ಟ್ರದಲ್ಲಿಯೇ ಅತೀ ಹೆಚ್ಚು ಲಿಂಬೆ ಉತ್ಪಾದಿಸುವ ಪಟ್ಟಿಯಲ್ಲಿ ನಮ್ಮ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಒಟ್ಟು ಲಿಂಬೆ ಬೆಳೆಯುವ ಪ್ರಮಾಣಲ್ಲಿ ಶೇಕಡಾ 60 ರಷ್ಟು ಲಿಂಬೆ ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಅದರಲ್ಲಿ ಇಂಡಿ ತಾಲೂಕಿನಲ್ಲಿ ಶೇಕಡಾ 40 ರಷ್ಟು ಲಿಂಬೆ ಬೆಳೆ ಬೆಳೆಯಲಾಗುತ್ತಿದೆ. 15 ಸಾವಿರಕ್ಕೂ ಆಧಿಕ ರೈತರು ಲಿಂಬೆ ಬೆಳೆಗಾರರಾಗಿದ್ದಾರೆ. ಜಿಐ ಟ್ಯಾಗ್ ಸಿಕ್ಕಿರೋ ಕಾರಣ ಜಾಗತಿಕ ಮಟ್ಟದಲ್ಲಿ ಸ್ಥಾನಮಾನ ಹಾಗೂ ವಿದೇಶಗಳಿಗೆ ರಫ್ತು ಮಾಡಲು ಜಿಐ ಟ್ಯಾಗ್ ರಹದಾರಿಯಾಗಿದೆ. 2023 -15 ರ ಅಂದಿನ ಕಾಂಗ್ರೆಸ್ ಸರ್ಕಾರಿ ಇಂಡಿಯಲ್ಲಿ ಲಿಂಬೆ ಅಭಿವೃದ್ದಿ ಮಂಡಳಿ ಸ್ಥಾಪನೆ ಮಾಡಿತ್ತು.
ಬಳಿಕ ಬಿಜೆಪಿ ಸರ್ಕಾರ ಲಿಂಬೆ ಅಭಿವೃದ್ದಿ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಲಿಂಬೆ ಬೆಳೆಯ ಅಭಿವೃದ್ದಿ ಮಾಡಿತ್ತು. ಇಷ್ಟರ ಮಧ್ಯೆ ಜಿಐ ಟ್ಯಾಗ್ ಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇದೀಗಾ ಕೇಂದ್ರ ಸರ್ಕಾರ ಲಿಂಬೆ ಬೆಳೆಗೆ ಜಿಐ ಟ್ಯಾಗ್ ನೀಡಿದ್ದಕ್ಕೆ ಮಾಜಿ ಲಿಂಬೆ ಅಭಿವೃದ್ದಿ ಮಂಡಳಿ ಆಧ್ಯಕ್ಷರು ರೈತರು ಲಿಂಬೆ ಬೆಳಗಾರರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಜಿಲ್ಲೆಯ ಲಿಂಬೆಗೆ ಜಿಐ ಟ್ಯಾಗ್ ಸಿಕ್ಕಿದ್ದು ಬಹುಪಯೋಗಿಯಾಗಿದೆ. ಲಿಂಬೆ ಸಂಸ್ಕರಿಸಿ ಇಡಲು, ಉಪ್ಪಿನಕಾಯಿಯಂತ ಪದಾರ್ಥ, ಇತರೆ ಉತ್ಪನ್ನಗಳನ್ನು ಮಾಡಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸಲು ಅನಕೂಲವಾಗಲಿದೆ. ಇದಕ್ಕೆ ಪೂರಕೆವೆಂಬಂತೆ ಇನ್ನು ಕೆಲ ತಿಂಗಳಲ್ಲಿ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಮುಗಿದು ವಿಮಾನ ಸೇವೆ ಸಿಗಲಿದೆ. ಇದು ಲಿಂಬೆ ಬೆಳೆಗಾರರಿಗೆ ವಿದೇಶಗಳಿಗೆ ಲಿಂಬೆ ರಪ್ತು ಮಾಡಲು ಅನಕೂಲವೇ ಆಗಲಿದೆ. ಸದ್ಯ ಜಿಲ್ಲೆಯ ಲಿಂಬೆ ಇದೀಗಾ ಜಾಗತೀಕ ಸ್ಥಾನಮಾನ ಪಡೆದುಕೊಂಡಂತಾಗಿದೆ.
ವಿಜಯಪುರ ಜಿಲ್ಲಾ ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ