ವಿಜಯಪುರ: ಕುಕ್ಕರ್ ಬಾಂಬ್ ಸ್ಫೋಟ (bomb blast) ದ ಹಿಂದೆ ಬಹಳ ದೊಡ್ಡ ಜಾಲವಿದೆ. ನಾನು ಮೊದಲೇ ಹೇಳಿದ್ದೆ ಇದು ಉಗ್ರ ಚಟುವಟಿಕೆಯ ಒಂದು ಭಾಗವೆಂದು. ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವಂತೆ ಆಗ್ರಹಿಸಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಇದು ಮಂಗಳೂರಿನ ಒಂದು ಸಣ್ಣ ಟಿಫಿನ್ ಬಾಕ್ಸ್ ಬಾಂಬ್ ಅಲ್ಲ. ಇದರ ಹಿಂದೆ ದೇವಸ್ಥಾನಗಳನ್ನು ನಾಶ ಮಾಡುವಂತಹ ಹುನ್ನಾರವಿದೆ. ಈ ಮಕ್ಳು ನಮ್ಮ ದೇವಸ್ಥಾನದ ಮುಂದೆ ಹೂವು, ತೆಂಗಿನಕಾಯಿ ಮಾರುತ್ತಾರೆ. ವ್ಯಾಪಾರದ ಹಣದಲ್ಲೇ ಇವರ ಜೀವನ ನಡೆಯುತ್ತದೆ. ಆದರೆ ಅದೇ ದೇವಸ್ಥಾನದ ಮೇಲೆಯೆ ಬಾಂಬ್ ಹಾಕಬೇಕು ಅಂತಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಸಿದ್ದರಾಮಯ್ಯ ಏಕೆ ಮಾತಾಡಲ್ಲ. ಡಿ.ಕೆ.ಶಿವಕುಮಾರ್ ತಮ್ಮ ಬ್ರದರ್ಸ್ ಬಗ್ಗೆ ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ. JDSಗೆ ಬಹುಮತ ಬಂದರೆ ಮುಸ್ಲಿಂ ಸಿಎಂ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳುತ್ತಾರೆ. ಇವರೆಲ್ಲ ಮುಸ್ಲಿಮರನ್ನು ತುಷ್ಟೀಕರಿಸಲು ಯತ್ನಿಸುತ್ತಿದ್ದಾರೆ. ಮುಸ್ಲಿಮರನ್ನು ಖುಷಿ ಪಡಿಸುವುದೇ ಇವರ ಜೀವನವಾಗಿದೆ. ವಂದೇ ಮಾತರಂ, ರಾಷ್ಟ್ರಗೀತೆ ಅಂದರೆ ಇವರಿಗೆ ಅಲರ್ಜಿಯಾಗಿದೆ. ಹೆಚ್ಚೂ ಕಡಿಮೆ ಕಾಂಗ್ರೆಸ್ ಪೂರ್ತಿ ಮುಸ್ಲಿಮರಿಗೆ ಮಾರಾಟವಾಗಿದೆ ಅಂದ್ರು ಆಶ್ಚರ್ಯವಿಲ್ಲ ಎಂದು ಕಿಡಿಕಾರಿದರು.
ಇದು ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ:
ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಭಾಷಾವಾರು ಪ್ರಾಂತದ ಆಧಾರದ ಮೇಲೆ, ಪ್ರಾಂತಗಳ ಪುನರ್ ವಿಂಗಡಣೆ ಆಗಿದೆ. ಮಹಾರಾಷ್ಟ್ರದವರ ಒತ್ತಾಯದ ಮೇರೆಗೆ ಕೇಂದ್ರ ಸರಕಾರ ಮಹಾಜನ್ ಆಯೋಗವನ್ನ ರಚನೆ ಮಾಡಿತ್ತು. ಮಹಾಜನ್ ಅವರು ಏನು ವರದಿ ಕೊಟ್ಟಿದಾರೆ, ಅದನ್ನ ಒಪ್ಪಿಕೊಳ್ಳುವ ಧರ್ಮ ಮಹಾರಾಷ್ಟ್ರ, ಕರ್ನಾಟಕ, ಗೋವಾ, ಕೇರಳದ್ದೂ ಇದೆ. ಇವತ್ತು ಅವರೇ ಒತ್ತಾಯ ಮಾಡಿ ಮಹಾಜನ್ ಆಯೋಗವನ್ನ ರಚನೆ ಮಾಡಿದವರು. ಈಗ ಅವರೇ ಉಲ್ಟಾ ಬಿದ್ದಿದಾರಂದರೆ, ಇದು ಮಹಾಜನ್ ಆಯೋಗಕ್ಕೆ ಮಾಡಿರುವಂತಹ ಅಪಮಾನ. ಮೇಲಿಂದ ಮೇಲೆ ಈ ಭಾಷಾ ಸಮಸ್ಯೆಯನ್ನ ಎಬ್ಬಿಸಿ ಮೂರು ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವಂತಹ ಕೆಲಸವನ್ನ ಕರ್ನಾಟಕ ಮಹಾರಾಷ್ಟ್ರದಲ್ಲಿ ಏನು ಮಾಡುತ್ತಿದ್ದರೋ, ಅದು ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಮಹಾಜನ್ ಆಯೋಗ ರಚನೆಗೆ ಹೇಳಿದ ಮಹಾರಾಷ್ಟ್ರದವರೇ, ಒಪ್ಪೋದಿಲ್ಲವೆಂದರೆ ಹೇಗೆ. ಮರಾಠಿ ಮತ್ತು ಕನ್ನಡದ ಘರ್ಷಣೆ ದೇಶದ ಏಕತೆ ಹಾಗೂ ಭದ್ರತೆಗೆ ಧಕ್ಕೆಯಾಗುತ್ತದೆ. ಅದಕ್ಕೆ ಮಹಾರಾಷ್ಟ್ರದಲ್ಲಿರುವಂತಹ ಜನರು ಈ ಸಮಸ್ಯೆ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿಲ್ಲ. ಮಹಾರಾಷ್ಟ್ರದಲ್ಲಿನ ಬಹಳಷ್ಟು ಗ್ರಾಮಗಳು ಕರ್ನಾಟಕಕ್ಕೆ ಬರಲು ನಿರ್ಣಯ ಮಾಡಿದ್ದಾರೆ. ಮಹಾಜನ್ ಆಯೋಗದ ವರದಿ ನಂತರ ಅಲ್ಲಿ ಅಭಿವೃದ್ದಿಯಾಗಿಲ್ಲಾ. ಅಲ್ಲಿನ ಕನ್ನಡಿಗರನ್ನು ಮೂರನೇ ದರ್ಜೆ ನಾಗರಿಕರಂತೆ ಮಹಾರಾಷ್ಟ್ರ ಮಾಡಿದೆ.
ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕನ್ನಡಿಗರಿಗೆ ಜೀವನ ಮಾಡಲಿಕ್ಕೆ ಬಿಡುತ್ತಿಲ್ಲ:
ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕನ್ನಡಿಗರಿಗೆ ಜೀವನ ಮಾಡಲಿಕ್ಕೆ ಅವಕಾಶ ಕೊಡಬೇಕೆಂದು ಆಗ್ರಹ ಮಾಡೋದಾಗಿ ಹೇಳಿಕೆ
ಉದ್ದೇಶಪೂರ್ವಕವಾಗಿ, ಪ್ರಚೋದನೆ ಮಾಡುವಂತಹ ಕೆಲವೊಂದು ಜನ ಇದ್ದಾರೆ. ಎಂಇಎಸ್ನವರು ಇಂತಹ ವಿಷಯಗಳನ್ನಿಟ್ಟುಕೊಂಡೇ ಸಾಕಷ್ಟು ಸಲ ಎಂಎಲ್ಎ ಆಗಿದ್ಧಾರೆ. ಈಗ ಅವರು ಸಂಪೂರ್ಣವಾಗಿ ವಿಫಲವಾಗಿದ್ಧಾರೆ
ಮೊನ್ನೆ ಬೆಳಗಾವಿ ಕಾರ್ಪೋರೇಷನ್ ಚುನಾವಣೆಯೊಳಗ ಎಂಇಎಸ್ ನಿರ್ನಾಮವಾಯ್ತು. ನಮ್ಮಲ್ಲಿ ಎಂಇಎಸ್ ಒಬ್ಬ ಶಾಸಕರೂ ಇಲ್ಲ. ನಾನು 1994ರಲ್ಲಿ ಎಂಎಲ್ಎ ಇದ್ದಾಗ 7 ಮಂದಿ ಎಂಇಎಸ್ ಶಾಸಕರಾಗಿ ಗೆದ್ದು ಬರುತ್ತಿದ್ದರು.
ನಾವು ಭಾರತದ ಅವಿಭಾಜ್ಯ ಅಂಗವೆಂದು ಬೆಳಗಾವಿಯಲ್ಲಿರುವಂತಹ ಮರಾಠಾ ಜನರಿಗೂ ಅನ್ನಿಸಿಬಿಟ್ಟಿದೆ. ನಾವು ಭಾರತದ ಜೊತೆ ಇರಬೇಕು, ಕರ್ನಾಟಕದ ಜೊತೆ ಇರಬೇಕು, ಅನ್ನುವಂತದ್ದಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಭಾರತೀಯ ಜನತಾ ಪಾರ್ಟಿ ವಿಧಾನಸಭೆ, ಲೋಕಸಭೆ ಹಾಗೂ ಕಾರ್ಪೋರೇಷನ್ ಗೆದ್ದಿದೆ. ಇದರ ಮೇಲಾದರೂ ಅವರು ತಿಳ್ಕೋಬೇಕೆಂದು ಸಲಹೆ ನೀಡಿದರು. ಇದರಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವಂಥಾದ್ದು ಅವಶ್ಯಕತೆ ಇಲ್ಲ. ಯಾಕಂದರೆ ಮಹಾಜನ್ ಆಯೋಗದ ವರದಿಯನ್ನು ಒಪ್ಕೋಬೇಕು. ಇಲ್ಲದಿದ್ದಲ್ಲಿ ಮಹಾರಾಷ್ಟ್ರದವರು ಸುಮ್ಮನೆ ಇರಬೇಕು ಎಂದು ಶಾಸಕ ಯತ್ನಾಳ ವಾಗ್ದಾಳಿ ಮಾಡಿದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:34 pm, Sun, 27 November 22