ಯತ್ನಾಳ್ ಹಿಂದುತ್ವ ಬಿಟ್ಟು ಬಸವ ತತ್ವಕ್ಕೆ ಯಾವಾಗ ಬರ್ತಾರೋ ಅಂದು ಮುಖ್ಯಮಂತ್ರಿ ಆಗ್ತಾರೆ: ಇಬ್ರಾಹಿಂ ಭವಿಷ್ಯ
ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಿಂದುತ್ವ ಬಿಟ್ಟು ಬಸವತತ್ವಕ್ಕೆ ಯಾವಾಗ ಬರುತ್ತಾರೋ ಅಂದು ಅವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.
ವಿಜಯಪುರ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹಿಂದುತ್ವ ಬಿಟ್ಟು ಬಸವತತ್ವಕ್ಕೆ ಯಾವಾಗ ಬರುತ್ತಾರೋ ಅಂದು ಅವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಭವಿಷ್ಯ ನುಡಿದಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಅವರು ಇವತ್ತು ಡಿಕ್ಲೇರ್ ಮಾಡುತ್ತೇನೆ, ಬಸವತತ್ವದಲ್ಲಿ ಅಷ್ಟು ಶಕ್ತಿ ಇದೆ. ಯತ್ನಾಳರವರೇ ಬಸವಣ್ಣನವರ ಹುಟ್ಟಿದ ಭೂಮಿಯಲ್ಲಿ ಹುಟ್ಟಿದೀರಿ ಬಸವತತ್ವಕ್ಕೆ ಬನ್ನಿ. ನನಗೆ ಯತ್ನಾಳ ಮೇಲೆ ಭಾರೀ ಪ್ರೀತಿ, ಹತ್ತು ವರ್ಷದ ಹಿಂದೆ ನಾನು ಯತ್ನಾಳ್ಗೆ ಹೇಳಿದ್ದೆ ಮುಂದಿನ ಮುಖ್ಯಮಂತ್ರಿ ಆಗುವ ಸರಕು ನೀವು, ಚಿಲ್ರೆ ಆಗೋಕೆ ಹೋಗಬೇಡಿ ಅಂತ ಎಂದು ತಿಳಿಸಿದರು.
ಯತ್ನಾಳ ಮೇಲೆ ನನಗ ಅವತ್ತು ಪ್ರೀತಿ ಇದೆ, ಇವತ್ತೂ ಪ್ರೀತಿ ಇದೆ. ಅಡ್ವಾಣಿ ಅವರ ಮನೆಗೆ ಇವತ್ತೂ ಹೋಗುತ್ತೇನೆ, ಅವರು ನನ್ನ ಜೈಲ್ ಮೇಟ್. ನರಗುಂದಕ್ಕೆ ಹೋದಾಗಲೆಲ್ಲಾ ಜಗನ್ನಾಥರಾವ್ ಜೋಷಿಯವರ ಮನೆಗೆ ಹೋಗುತ್ತೇನೆ. ನಾವೆಲ್ಲಾ ಕಲ್ಚರಿನಲ್ಲಿ ಬೆಳೆದಂಥವರು, ನಮ್ಮ ಸಂಸ್ಕೃತಿ ಅದು ಎಂದರು.
ಹೆತ್ತ ಸೂತಕ ಹತ್ತು ದಿನಕ್ಕೆ ತೀರುವುದು, ಸತ್ತ ಸೂತಕ ಹನ್ನೊಂದು ದಿನಕ್ಕೆ ತೀರುವುದು ಋಣ ಎಂಬುವ ಸೂತಕ ಜನ್ಮ ಜನ್ಮಾಂತರದ ಬಂಧನವಯ್ಯ ಅಂತ ಹೇಳಿದ್ದಾರೆ. ನಮಗೂ, ಈ ಜನರ ಮಧ್ಯೆ ಇರುವುದು ಋಣದ ಸೂತಕ. ಅದು ಜನ್ಮ ಜನ್ಮಾಂತರದ ಬಂಧನವಾಗಿರುತ್ತದೆ. ಅದು ಅಷ್ಟು ಸುಲಭವಾಗಿ ಹೋಗುವಂಥದ್ದಲ್ಲ ಎಂದು ಹೇಳಿದ್ದಾರೆ.
ರಾಜಕಾರಣ ಇವತ್ತು ಇರಬಹುದು, ನಾಳೆ ಹೋಗಬಹುದು. ಅಧಿಕಾರ ಇವತ್ತು ಇರಬಹುದು, ನಾಳೆ ಹೋಗಬಹುದು. ಆದರೆ ಮನುಷ್ಯನ ಹೆಸರು, ಅವನು ಮಾಡಿದಂತಹ ಕೆಲಸಗಳು, ಅದು ಶಾಶ್ವತವಾಗಿ ಉಳಿಬೇಕು. ಅದೇ ನಮ್ಮ ನಾಡಿನ ಸಂಸ್ಕೃತಿ, ನಮ್ಮ ದೇಶದ ಸಂಸ್ಖೃತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
70ರಿಂದ 80 ಅಭ್ಯರ್ಥಿಗಳ ಪಟ್ಟಿ ರೆಡಿ ಇದೆ
2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಸಿದ್ಧವಿದೆ. ಚುನಾವಣೆಗೆ ಕಣಕ್ಕಿಳಿಯುವ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧವಿದೆ. 70 ರಿಂದ 80 ಅಭ್ಯರ್ಥಿಗಳ ಪಟ್ಟಿ ರೆಡಿ ಇದೆ ಆದರೆ ಪಟ್ಟಿ ಬಿಡುಗಡೆ ಕುರಿತು ನಮ್ಮ ಗುರುಗಳು ಹೆ.ಡಿ. ರೇವಣ್ಣ ಹೇಳಬೇಕು ಎಂದು ಸಿ.ಎಂ.ಇಬ್ರಾಹಿಂ ತಿಳಸಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Sun, 27 November 22