ವೀಕೆಂಡ್ ಕರ್ಫ್ಯೂ ನೆಪದಲ್ಲಿ ಪೊಲೀಸರಿಂದ ಮಾರಾಟಕ್ಕೆ ಅಡ್ಡಿ ಆರೋಪ; ಮೆಂತ್ಯ, ಕೊತ್ತಂಬರಿ ಸೊಪ್ಪು ರಸ್ತೆಗೆ ಎಸೆದು ರೈತನ ಆಕ್ರೋಶ
ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದ ಭೀಮನಗೌಡ ಬಿರಾದಾರ್ ಎಂಬ ರೈತ ನಗರದ ಅಥಣಿ ರಸ್ತೆಯ ಬಳಿಯ ತರಕಾರಿ ಮಾರುಕಟ್ಟೆ ಬಳಿ ರಸ್ತೆಯಲ್ಲಿ ಸೊಪ್ಪು ಎಸೆದು ಪ್ರತಿಭಟನೆ ಮಾಡುತ್ತಿದ್ದಾನೆ. ಅಗತ್ಯ ವಸ್ತುಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದರೂ ನಮಗೆ ಪೊಲೀಸರು ಕಿರಿಕಿರಿ ನೀಡುತ್ತಾರೆಂದು ರೈತ ಆರೋಪಿಸಿದ್ದಾರೆ.
ವಿಜಯಪುರ: ವೀಕೆಂಡ್ ಕರ್ಫ್ಯೂ ನೆಪದಲ್ಲಿ ಮಾರಾಟಕ್ಕೆ ಅಡ್ಡಿ ಆರೋಪ ಮಾಡಿ ಮೆಂತ್ಯ, ಕೊತ್ತಂಬರಿ ಸೊಪ್ಪು ರಸ್ತೆಗೆ ಎಸೆದು ರೈತ ಆಕ್ರೋಶ ಹೊರ ಹಾಕಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಆದರೂ ಪೊಲೀಸರು ನಮಗೆ ಅಡ್ಡಪಡಿಸುತ್ತಿದ್ದಾರೆ. ಅನಗತ್ಯವಾಗಿ ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಪೊಲೀಸರ ವಿರುದ್ಧ ರೈತ ಆಕ್ರೋಶ ಹೊರಹಾಕಿದ್ದಾರೆ.
ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದ ಭೀಮನಗೌಡ ಬಿರಾದಾರ್ ಎಂಬ ರೈತ ನಗರದ ಅಥಣಿ ರಸ್ತೆಯ ಬಳಿಯ ತರಕಾರಿ ಮಾರುಕಟ್ಟೆ ಬಳಿ ರಸ್ತೆಯಲ್ಲಿ ಸೊಪ್ಪು ಎಸೆದು ಪ್ರತಿಭಟನೆ ಮಾಡುತ್ತಿದ್ದಾನೆ. ಅಗತ್ಯ ವಸ್ತುಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದರೂ ನಮಗೆ ಪೊಲೀಸರು ಕಿರಿಕಿರಿ ನೀಡುತ್ತಾರೆಂದು ರೈತ ಆರೋಪಿಸಿದ್ದಾರೆ. ಜಮೀನಿನಲ್ಲಿ ಸಾಲ ಸೋಲ ಮಾಡಿ ಬೆಳೆದ ತರಕಾರಿ ಹಾಗೂ ಸೊಪ್ಪನ್ನು ಮಾರಲು ಬಿಡುತ್ತಿಲ್ಲಾ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ತರಕಾರಿ, ಸೊಪ್ಪು ಮಾರಾಟ ಮಾಡದಿದ್ದರೆ ಹಾಳಾಗುತ್ತದೆ. ಹೀಗಾದರೆ ರೈತರು ಬದುಕುವುದು ಹೇಗೆ ಎಂದು ರೈತ ಭೀಮನಗೌಡ ಪ್ರಶ್ನೆ ಮಾಡಿದ್ದಾರೆ. ಇತರೆ ತರಕಾರಿ ಮಾರಾಟಗಾರರು ಮತ್ತು ಸ್ಥಳೀಯರು ರೈತನಿಗೆ ಬೆಂಬಲ ವ್ಯಕ್ತಪಡಿಸಿದ್ದು ಪೊಲೀಸರ ವಿರುದ್ಧ ಗರಂ ಆಗಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ವಿಜಯಪುರ ಎಸ್‌ಪಿ ಆನಂದ್ ಕುಮಾರ್, ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ರೈತರಿಗೆ ತೊಂದರೆ ನೀಡಿದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ತಕ್ಷಣವೇ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ರೈತರಿಗೆ ತೊಂದರೆ ನೀಡದಂತೆ ಪೊಲೀಸರಿಗೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ.
ಜನರು ಗುಂಪು ಸೇರಿದರೆ ಸಮಸ್ಯೆಯಾಗುತ್ತೆಂದು ಅಂತರ ಕಾಯ್ದುಕೊಂಡು ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದರೆ ರೈತನಿಗೆ ಸಮಸ್ಯೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಕ್ರಮ ತೆಗೆದುಕೊಳ್ಳುವೆ. ಕೊವಿಡ್ ನಿಯಮ ಪಾಲಿಸಿ ವ್ಯಾಪಾರ ವಹಿವಾಟು ಮಾಡಿಕೊಳ್ಳಲಿ ಎಂದು ವಿಜಯಪುರ ಎಸ್‌ಪಿ ಆನಂದ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಚಿರಂಜೀವಿ ಸರ್ಜಾ ಜತೆಗಿನ ಅಪರೂಪದ ಫೋಟೋ ಹಂಚಿಕೊಂಡ ಗೆಳೆಯ ಪನ್ನಗ ಭರಣ