
ವಿಜಯಪುರ, ಆ.23: ನಗರದ ಪದ್ಮಾವತಿ ಕಾಲೋನಿ 2 ರಲ್ಲಿ ನಿರ್ಮಾಣ ಹಂತದ ಕಟ್ಟಡದ ಕಾಂಪೌಂಡ್ನಲ್ಲಿಂದು ಸುಮಾರು 7 ರಿಂದ 8 ತಿಂಗಳ ವಯಸ್ಸಿನ ಹೆಣ್ಣು ಮಗು ಪತ್ತೆಯಾಗಿದೆ. ಬಟ್ಟೆಯಲ್ಲಿ ಮಗುವನ್ನು ಇಟ್ಟು ತಾಯಿ ಅಲ್ಲಿಂದ ಪರಾರಿಯಾಗಿದ್ದಾರೆ. ಹೆಣ್ಣು ಮಗುವನ್ನು ಯಾರು ಇಟ್ಟು ಹೋಗಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಇಂದು ನಸುಕಿನ ಜಾವ ಇದೇ ಕಾಲೋನಿಯ ನಿವಾಸಿ ಸಂತೋಷ್ ನಾಗೂರ ಎಂಬ ಯುವಕ, ನಿರ್ಮಾಣ ಹಂತದ ಕಟ್ಟಡ ಕಾಂಪೌಂಡ್ನಲ್ಲಿ ಹೆಣ್ಣು ಮಗು ಇರುವುದನ್ನು ಕಂಡಿದ್ದಾರೆ. ಸುತ್ತಮುತ್ತಲಿನ ಜನರನ್ನು ವಿಚಾರಿಸಿದ ಬಳಿಕ ಸಂತೋಷ್, ಕಟ್ಟಡದ ಮಾಲೀಕ ಕೃಷ್ಣಪ್ಪ ಬಡಿಗೇರಗೆ ಮಾಹಿತಿ ನೀಡಿದ್ದಾರೆ.
ನಿರ್ಮಾಣ ಹಂತದ ಕಟ್ಟಡ ಕಾಂಪೌಂಡ್ನಲ್ಲಿ ಹೆಣ್ಣು ಮಗು ಸಿಕ್ಕ ವಿಚಾರ ತಿಳಿಯುತ್ತಿದಂತೆ ಸ್ಥಳೀಯರೆಲ್ಲರೂ ನೆರೆದಿದ್ದರು. ಅಳುತ್ತಿದ್ದ ಮಗುವನ್ನು ಸಂತೈಸಿ ಹಾಲುಣಿಸಿದ್ದಾರೆ. ಬಳಿಕ ಕೃಷ್ಣಪ್ಪ, ಆದರ್ಶ ನಗರ ಪೊಲೀಸರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆದರ್ಶನಗರ ಪೊಲೀಸರು, ಪರಿಶೀಲನೆ ಮಾಡಿ ಅಂಬ್ಯುಲೆನ್ಸ್ ಮೂಲಕ ಮಗುವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಅಮ್ಮನೊಂದಿಗೆ ಬೆಚ್ಚಗೆ ಮಲಗಿದ್ದ 3 ವರ್ಷದ ಮಗುವನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ!
ಇನ್ನು ಮಗುವಿನ ಬಳಿ ಇತರೆ ಯಾವುದೇ ವಸ್ತುಗಳಾಗಲಿ, ಗುರುತು ಪತ್ತೆ ಹಚ್ಚುವಂತ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಬಟ್ಟೆಯಲ್ಲಿ ಸುತ್ತಿಟ್ಟು ಹೋಗಿದ್ದು ಮಾತ್ರ ಕಂಡು ಬಂದಿದೆ. ನೆರೆದಿದ್ದವರೆಲ್ಲ ಹೆಣ್ಣು ಮಗುವನ್ನು ಕಂಡು ಮಮ್ಮಲ ಮರುಗಿದರು. ಯಾಕಾಗಿ ಮಗುವಿನ ತಾಯಿ ಬಿಟ್ಟು ಹೋಗಿದ್ದಾಳೆಂದು ಹಿಡಿಶಾಪ ಹಾಕಿದರು. ಶ್ರಾವಣ ಶುಕ್ರವಾರ ಲಕ್ಷ್ಮೀ ಪೂಜೆ ಮಾಡುತ್ತೇವೆ. ಶ್ರದ್ಧಾ ಭಕ್ತಿಯಿಂದ ಲಕ್ಷ್ಮೀ ಪೂಜೆ ಮಾಡುವ ನಾವು ಅದೇ ಮಾತೆಯ ಸ್ವರೂಪಿ ಹೆಣ್ಣನ್ನು ಬಿಟ್ಟು ಹೋಗಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಜೊತೆಗೆ ಮಗುವನ್ನು ಬಿಟ್ಟು ಹೋದವರನ್ನು ಪತ್ತೆ ಮಾಡಿ, ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕಂದು ಒತ್ತಾಯ ಮಾಡಿದ್ದಾರೆ.
ಈ ಕುರಿತು ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವನ್ನು ಬಿಟ್ಟು ಹೋದವರ ಪತ್ತೆಗಾಗಿ ಪೊಲೀಸರು ಮುಂದಾಗಿದ್ಧಾರೆ. ಪದ್ಮಾವತಿ ನಗರದಲ್ಲಿರುವ ಹಾಗೂ ಇಲ್ಲಿ ಸಂಪರ್ಕಿಸುವ ರಸ್ತೆಗಳ ಬಳಿಯ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವೀಕ್ಷಣೆ ಮಾಡಲಾಗುತ್ತಿದೆ. ಅದರ ಆಧಾರದ ಮೇಲೆ ಹೆಣ್ಣು ಮಗುವನ್ನು ಬಿಟ್ಟು ಹೋದವರ ಪತ್ತೆ ಮಾಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಿದ ಬಳಿಕ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಸುಪರ್ಧಿಗೆ ನೀಡಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:37 pm, Fri, 23 August 24