ವಿಜಯಪುರ, ಜು.25: ಅದು ವಿಜಯಪುರ ಜಿಲ್ಲೆ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿದ್ದ ಕ್ರೆಡಿಟ್ ಸೌಹಾರ್ಧ ಸಹಕಾರಿ ನಿಯಮಿತ ಬ್ಯಾಂಕ್ ಆಗಿತ್ತು. ಪ್ರತಿಷ್ಟಿತ ಬ್ಯಾಂಕ್ ಎಂದು ಖ್ಯಾತಿಗೆ ಪಾತ್ರವಾದ ಕ್ರೆಡಿಟ್ ಸೌಹಾರ್ಧ ಸಹಕಾರಿ ನಿಯಮಿತದಲ್ಲಿ ಸಾವಿರಾರು ಜನರು ತಮ್ಮ ಹಣವನ್ನು ಇಟ್ಟಿದ್ದರು. ಹೆಚ್ಚಿನ ಬಡ್ಡಿಯ ಆಸೆಯಿಂದ ಕೈಲಿದ್ದ ಹಣವೆಲ್ಲಾ ಬ್ಯಾಂಕ್ನಲ್ಲಿಟ್ಟಿದ್ದರು. ಆದರೆ, ಠೇವಣಿಯಿಟ್ಟ ಹಣದ ಮೆಚ್ಯೂರಿಟಿಯಾದರೂ ಹಣವಿಟ್ಟರ ಕೈಗೆ ಠೇವಣಿ ಹಣ ಬಾರದಂತಾಗಿತ್ತು.
ಎಸ್ಎಂಎನ್ ಕ್ರೆಡಿಟ್ ಸೌಹಾರ್ಧ ಸಹಕಾರಿ ನಿಯಮಿತ 2009 ರಿಂದ ಕಾರ್ಯ ನಿರ್ವಹಿಸುತ್ತಿತ್ತು. ಒಟ್ಟು 21 ಶಾಖೆಗಳನ್ನು ಜಿಲ್ಲೆಯಲ್ಲಿ ಹೊಂದಿತ್ತು. ಆರಂಭದಲ್ಲಿ ಎಲ್ಲಾ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದ ಬ್ಯಾಂಕ್, ನಂತರದ ವರ್ಷಗಳಲ್ಲಿ ಮಾಡಿದ್ದೇ ಬೇರೆ. ಎಸ್ ಎಂ ಎನ್ ಅಂದರೆ ಶ್ರೀ ಮುರುಗೇಶ ನಿರಾಣಿ ಎಂದು ಮಾಜಿ ಸಚಿವರ ಸಹಕಾರಿ ಬ್ಯಾಂಕ್ ಎಂದು ನಂಬಿ ಹಣವಿಟ್ಟಿದ್ದರು. ಆದರೆ, ಇದಕ್ಕೂ ನನಗೂ ಯಾವುದೇ ಸಂಬಂಧವೇ ಇಲ್ಲ ಎಂದು ಮಾಜಿ ಸಚಿವ ನಿರಾಣಿ ಅವರು ಕಾನೂನು ಪ್ರಕಾರ ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ:ಹಗರಣಗಳ ಸುಳಿಯಲ್ಲಿ ಕೋಲಾರ ಡಿಸಿಸಿ ಬ್ಯಾಂಕ್: ತನಿಖೆಯ ನಂತರವೇ ಚುನಾವಣೆ? ಕಾಂಗ್ರೇಸ್ನಲ್ಲೇ ಪರ-ವಿರೋಧ ಬ್ಯಾಟಿಂಗ್!
ಈ ಭ್ರಷ್ಟಾಚಾರ ವಿರೋಧಿಸಿ ಗ್ರಾಹಕರು ತಮ್ಮ ಹಣಕ್ಕಾಗಿ ಸುದೀರ್ಘ ಹೋರಾಟವನ್ನೇ ಮಾಡಿದ್ದರು. ಕೊನೆಗೆ ಸಿಐಡಿ ತನಿಖೆಯೂ ಆಗಿತ್ತು. ಸಿಐಡಿ ಅಧಿಕಾರಿ ಪ್ರಕಾಶ ರಾಠೋಡ್ ನೇತೃತ್ವದಲ್ಲಿ ಒಂದು ತಿಂಗಳ ಕಾಲ ತನಿಖೆ ನಡೆದಿತ್ತು. ಬಳಿಕ 2021 ರ ನವೆಂಬರ್ ನಲ್ಲಿ ಸಿಐಡಿ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು.
ಇದೀಗ ಬೆಂಗಳೂರಿನ ಪ್ರಾದೇಶಿಕ ಆಯುಕ್ತ ಆದಿತ್ಯ ಬಿಸ್ವಾಸ್ ಉಸ್ತುವಾರಿಯಲ್ಲಿ ಸಕ್ಷಮ ಪ್ರಾಧಿಕಾರ ರಚನೆ ಮಾಡಲಾಗಿದೆ. ಸಕ್ಷಮ ಪ್ರಾಧಿಕಾರದ ಆಧಿಕಾರಿಗಳು ವಿಜಯಪುರ ನಗರದಲ್ಲೇ ಬೀಡು ಬಿಟ್ಟಿದ್ದಾರೆ. ಎಸ್ಎಂಎನ್ ಕ್ರೆಡಿಟ್ ಸಹಕಾರಿ ಬ್ಯಾಂಕ್ ನಲ್ಲಿ ಹಣವಿಟ್ಟವರ ಮಾಹಿತಿಯನ್ನು ಪಡೆಯುತ್ತಿದ್ದಾರೆ. ನಗರದ ಮಹಾನಗರ ಪಾಲಿಕೆಯ ವ್ಯಾಪ್ತಿಯ ಸಭಾಭವನದಲ್ಲಿ ಕೌಂಟರ್ಗಳನ್ನು ತೆರೆದು ಗ್ರಾಹಕರ ಮಾಹಿತಿ ಪಡೆಯುತ್ತಿದ್ದಾರೆ. ಎಸ್ಎಂಎನ್ ಕ್ರೆಡಿಟ್ ಸಹಕಾರಿ ಬ್ಯಾಂಕ್ನಲ್ಲಿ ಡೆಪಾಸಿಟ್ ಇಟ್ಟವರು ಸಮಗ್ರ ದಾಖಲಾತಿಗಳನ್ನು ನೀಡುವ ಮೂಲಕ ಹಣ ಬರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿದ್ದಾರೆ.
ಸದ್ಯ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ಮುಂದೆ ಮಾಹಿತಿ ನೀಡುತ್ತಿರುವ ಗ್ರಾಹಕರು, ಬ್ಯಾಂಕ್ ಇನ್ನೂ ಮಾಜಿ ಸಚಿವ ಮುರುಗೇಶ ನಿರಾಣಿಯವರೆದ್ದೇ ಎಂದು ಅಂದುಕೊಂಡಿದ್ದಾರೆ. ಆದರೆ, ಮಾಜಿ ಸಚಿವ ಮುರಗೇಶ ನಿರಾಣಿಗೂ, ಈ ಬ್ಯಾಂಕ್ ಗೂ ಯಾವುದೇ ಸಂಬಂಧವೇ ಇಲ್ಲ ಎಂಬ ಕನಿಷ್ಟ ಮಾಹಿತಿಯೂ ಇರದೇ ಇರೋ ಮುಗ್ಧ ಗ್ರಾಹಕರು ಇವರಾಗಿದ್ದಾರೆ. ಇಷ್ಟರ ಮದ್ಯೆ ಇದೀಗ ಯಾವ ಯಾವ ಗ್ರಾಹಕರು ಎಷ್ಷೆಷ್ಟು ಹಣವಿಟ್ಟಿದ್ದಾರೆ ಎಂಬ ಕುರಿತು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಲೆ ಹಾಕುತ್ತಿದ್ಧಾರೆ.
ಇದನ್ನೂ ಓದಿ:ಬದಲಾಗುತ್ತಿದೆ ಆರ್ಬಿಐ ನಿಯಮ… ಬ್ಯಾಂಕ್ಗೆ ಹೋಗಿ ಕ್ಯಾಷ್ ವಿತ್ಡ್ರಾ ಮಾಡುವ ಮುನ್ನ ಇದು ತಿಳಿದಿರಿ…
ಎಸ್ ಎಂ ಎನ್ ಕ್ರೆಡಿಟ್ ಸಹಕಾರಿ ಬ್ಯಾಂಕ್ನಲ್ಲಿರುವ ಡೆಪಾಸಿಟ್ ಹಣದ ರಸೀದಿ, ಬ್ಯಾಂಕ್ ಖಾತೆಯ ಪಾಸ್ ಬುಕ್, ಆಧಾರ ಹಾಗೂ ಪ್ಯಾನ್ ಕಾರ್ಡ್ಗಳ ನಕಲು ಪ್ರತಿ ಪಡೆದು ಸ್ವೀಕೃತಿ ಪತ್ರಗಳನ್ನು ಸಕ್ಷಮ ಪ್ರಾಧಿಕಾರದದಿಂದ ಗ್ರಾಹಕರಿಗೆ ನೀಡಲಾಗುತ್ತಿದೆ. ಎಸ್ ಎಂ ಎನ್ ಬ್ಯಾಂಕ್ನಿಂದ ಸಾಲ ಪಡೆದವರಿಂದ ಸಾಲ ವಸೂಲಿ ಮಾಡಿಕೊಂಡಿರುವ ಹಣ ಹಾಗೂ ಬ್ಯಾಂಕಿನ ಸ್ಥಿರಾಸ್ಥಿ ಹರಾಜು ಮಾಡಿ ಬಂದ ಹಣದಲ್ಲಿ ಗ್ರಾಹಕರಿಗೆ ಹಣ ನೀಡೋ ಪ್ರಕ್ರಿಯೆ ಆರಂಭವಾಗಲಿದೆ.
ಇದೇ ಜುಲೈ 22 ರಿಂದ ಎಸ್ ಎಂ ಎನ್ ಕ್ರೆಡಿಟ್ ಸಹಕಾರಿ ಬ್ಯಾಂಕ್ನಲ್ಲಿ ಹಣವಿಟ್ಟು ಸಮಸ್ಯೆಗೆ ಈಡಾದವರಿಂದ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಅರ್ಜಿಗಳನ್ನು ಪಡೆಯುತ್ತಿದ್ದಾರೆ. ಮುಂಬರುವ ಅಗಷ್ಟ 21 ರವೆರೆಗೂ ಗ್ರಾಹಕರಿಂದ ಹಣ ವಾಪಸಾತಿಗೆ ಅರ್ಜಿಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ನಂತರ ಗ್ರಾಹಕರ ಹಣ ವಾಪಸ್ ಮಾಡುವ ಪ್ರಕ್ರಿಯೆಯನ್ನು ಸರ್ಕಾರದ ಮಟ್ಟದಲ್ಲಿ ಮಾಡಲಾಗುತ್ತಿದೆ. ಕಳೆದ ಏಳೆಂಟು ವರ್ಷಗಳಿಂದ ಹಣವಿಟ್ಟವರು ತಮ್ಮ ಹಣ ವಾಪಸ್ ಯಾವಾಗ ಬರುತ್ತದೆ ಎಂಬುದನ್ನು ಕಾಯುವಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗ್ರಾಹಕರು ಎಸ್ ಎಂ ಎನ್ ಕ್ರೆಡಿಟ್ ಸಹಕಾರಿ ಬ್ಯಾಂಕ್ನಲ್ಲಿ ಡೆಪಾಸಿಟ್ ಹಣವನ್ನು ಬಡ್ಡಿ ಸಮೇತ ತ್ವರಿತವಾಗಿ ನೀಡಲು ಸಕಲ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ