ಮರಾಠಿ ನೆಲದಲ್ಲಿ ಕರ್ನಾಟಕ ಸಂಭ್ರಮ

| Updated By: ವಿವೇಕ ಬಿರಾದಾರ

Updated on: Oct 01, 2024 | 9:32 AM

ನೆಲ, ಜಲ, ಭಾಷೆಯ ವಿಚಾರದಲ್ಲಿ ದಾಯಾದಿಯಂತೆ ಕರ್ನಾಟಕದ ಜೊತೆ ತಗಾದೆ ತೆಗೆಯುವ ನೆರೆಯ ಮರಾಠಿ ನೆಲದಲ್ಲೇ ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮ ನಡೆಯಿತು. ಕನ್ನಡ ಗಡಿನಾಡು ಚೇತನ ಪ್ರಶಸ್ತಿಯ ಪ್ರದಾನವೂ ನಡೆಯಿತು. ಗಡಿ ಭಾಗದಲ್ಲಿ ಸೋಮವಾರ ಕನ್ನಡ ಡಿಂಡಿಂಮದ ಸದ್ದು ಮಾತ್ರ ಜೋರಾಗಿತ್ತು. ಈ ಕುರಿತು ಸ್ಟೋರಿ ಇಲ್ಲಿದೆ.

ಮರಾಠಿ ನೆಲದಲ್ಲಿ ಕರ್ನಾಟಕ ಸಂಭ್ರಮ
ಕರ್ನಾಟಕ ಸಂಭ್ರಮ-50
Follow us on

ವಿಜಯಪುರ, ಅಕ್ಟೋಬರ್​ 01: ನೆಲ, ಜಲ, ಭಾಷೆಯ ವಿಚಾರದಲ್ಲಿ ದಾಯಾದಿಯಂತೆ ಕರ್ನಾಟಕದ (Karnataka) ಜೊತೆ ಗಲಾಟೆ ಮಾಡುವ ನೆರೆಯ ಮಹಾರಾಷ್ಟ್ರ (Maharashtra) ನೆಲದಲ್ಲೇ ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮ (Karnataka Sambrama-50) ನಡೆಯಿತು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಹಾಗೂ ಶ್ರೀ ದಾನಮ್ಮದೇವಿ ದೇವಸ್ಥಾನದ ಟ್ರಸ್ಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷಗಳ ಸಂಭ್ರಮ ಕಾರ್ಯಕ್ರಮ ನೆರವೇರಿತು.

ವಿಜಯಪುರ ಜಿಲ್ಲೆ ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲೆಗಳ ಜೊತೆ ಗಡಿ ಭಾಗ ಹಂಚಿಕೊಂಡಿದೆ. ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ನೇತೃತ್ವದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್ ತಾಲೂಕಿನ ಸುಕ್ಷೇತ್ರ ಗುಡ್ಡಾಪುರದಲ್ಲಿ ಕರ್ನಾಟಕ-50ರ ಸಂಭ್ರಮ ಕಾರ್ಯಕ್ರಮ ನಡೆಯಿತು. ವಿಜಯಪುರ ಜಿಲ್ಲಾಡಳಿತ ಹಾಗು ಸುಕ್ಷೇತ್ರ ದಾನಮ್ಮ ದೇವಿ ಟ್ರಸ್ಟ್ ಕಮಿಟಿ ಸಾಥ್ ನೀಡಿದವು.

ಕಾರ್ಯಕ್ರಮಕ್ಕೂ ಮುನ್ನ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 150 ಕ್ಕೂ ಹೆಚ್ಚು ಕಲಾ ತಂಡಗಳ ನಡೆದ ಮೆರವಣಿಗೆ ಎಲ್ಲರನ್ನು ಬರ ಸೆಳೆದವು. ಮೆರವಣಿಗೆ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಜತ್ ಶಾಸಕ ವಿಕ್ರಮಸಿಂಹ ಸಾವಂತ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಆಧ್ಯಕ್ಷ ಸೋಮಣ್ಣ ಬೇವಿನಮರದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಡಾ.ಚನ್ನಬಸವ ಪಟ್ಟದೇವರು ಹೆಸರಿನ ಗಡಿನಾಡು ಚೇತನ ಪ್ರಶಸ್ತಿಯನ್ನು ಕೇರಳದ ಕಾಸರಗೋಡುವಿನ ಹಿರಿಯ ಕವಿ ರಾಧಾಕೃಷ್ಣ ಕೆ ಉಳಿಯತ್ತಡ್ಕ್ ಅವರಿಗೆ ನೀಡಿ ಗೌರವಿಸಲಾಯಿತು. ಡಾ. ಜಯದೇವಿ ತಾಯಿ ಲಿಗಾಡೆ ಪ್ರಶಸ್ತಿಯನ್ನು ಬೀದರ್ ನ ಪಂಚಾಕ್ಷರಿ ಪುಣ್ಯಶೆಟ್ಟಿ ಅವರಿಗೆ ನೀಡಲಾಯಿತು. ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈ ಪ್ರಶಸ್ತಿಯನ್ನು ಬೆಳಗಾವಿಯ ಬಿ ಎಸ್ ಗವಿಮಠ ಅವರಿಗೆ ಪ್ರಧಾನ ಮಾಡಲಾಯಿತು.

2024-25ನೇ ಸಾಲಿನ ಡಾ. ಚನ್ನಬಸವ ಪಟ್ಟದೇವರು ಹೆಸರಿನ ಪ್ರಶಸ್ತಿ ಗುಜರಾತ್​ನ ಅಹ್ಮದಾಬಾದ್ ನ ಕನ್ನಡ ಸಂಘಕ್ಕೆ ನೀಡಲಾಯಿತು. ಡಾ. ಜಯದೇವಿ ತಾಯಿ ಲಿಗಾಡೆ ಪ್ರಶಸ್ತಿಯನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ಪಟ್ಟಣದ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಮತ್ತು ಸರ್ವೋದಯ ಶಿಕ್ಷಣ ಸಂಸ್ಥೆಗೆ ಪ್ರಧಾನ ಮಾಡಲಾಯಿತು. ನಾಡೋಜ ಡಾ. ಕಯ್ಯಾರ ಕಿಂಞಣ್ಣ ರೈ ಪ್ರಶಸ್ತಿಯನ್ನು ಕೇರಳ ಕಾಸರಗೋಡುವಿನ ಪೇರಡಾಲದ ಮಹಾಜನ ವಿದ್ಯಾ ಸಂಸ್ಥೆಗೆ ಪ್ರಧಾನ ಮಾಡಿ ಸ್ಮರಣಿಕೆ, ಪ್ರಮಾಣ ಪತ್ರ ನೀಡಿ ಸನ್ಮಾನ ಮಾಡಲಾಯಿತು.

ಇದೇ ವೇಳೆ ಗಡಿ ಭಾಗದ ಕನ್ನಡಿಗರ ಸಮಸ್ಯೆ ಕುರಿತು ಕರ್ನಾಟಕ ಸರ್ಕಾರಕ್ಕೆ ಮಹಾರಾಷ್ಟ್ರದ ಜತ್ ಕ್ಷೇತ್ರದ ಶಾಸಕ ವಿಕ್ರಮಸಿಂಹ ಸಾವಂತ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಪಡೆದವರಿಗೆ ಕರ್ನಾಟಕ ಸರ್ಕಾರ ಶೇ5 ಉದ್ಯೋಗ ಮೀಸಲಾತಿ ನೀಡಬೇಕು ಹಾಗೂ ಇತರೆ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ನೆಲ, ಜಲ, ಭಾಷೆಯ ವಿಚಾರದಲ್ಲಿ ನಾವೆಲ್ಲ ಹೊಂದಿಕೊಂಡು ಹೋಗಬೇಕು. ನಮ್ಮ ರಾಜ್ಯದ ಆಲಮಟ್ಟಿ ಜಲಾಶಯವನ್ನು 524ಕ್ಕೆ ಏರಿಕೆ ಮಾಡಲು ಮಹಾರಾಷ್ಟ್ರ ಸರ್ಕಾರ ಸಹಕರಿಸಬೇಕು. ಈ ವಿಚಾರವನ್ನು ಶಾಸಕ ಸಾವಂತ್ ಅವರು ಸರ್ಕಾರಕ್ಕೆ ಪ್ರಯತ್ನಿಸಲಿ. ಮಲೆಗಾಳದಲ್ಲಿ ಅವರು ನಮ್ಮ ಡ್ಯಾಂಗೆ ನೀರು ಬಿಡಲು. ನಾವು ಬೇಸಿಗೆಯಲ್ಲಿ ಮಹಾರಾಷ್ಟ್ರ ಗಡಿ ಭಾಗಕ್ಕೆ ಎಷ್ಟು ಬೇಕು ಅಷ್ಟು ಕುಡಿಯುವ ನೀರು ಒದಗಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಈ ಕಾರ್ಯಕ್ರಮ ಕರ್ನಾಟಕ – ಮಹಾರಾಷ್ಟ್ರ ಸಾಮರಸ್ಯ ಸಾರುವ ಕಾರ್ಯಕ್ರಮ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಬರಬೇಕಾಗಿತ್ತು. ಆದರೆ ಅನ್ಯ ಕೆಲಸದ ನಿಮಿತ್ಯ ಬರಲು ಸಾಧ್ಯವಾಗಿಲ್ಲ. ಅವರ ಪರವಾಗಿ ನಾನು ಎಲ್ಲ ಕನ್ನಡಿಗರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆಂದರು.

ಕರ್ನಾಟಕ 50 ಸಂಭ್ರಮ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಇಲ್ಲಿಯವರೆಗೆ ಗಡಿ ಭಾಗದಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ಆಗಿರಲಿಲ್ಲ. ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷವಾಯ್ತು. ಗಡಿಭಾಗದಲ್ಲಿ ಕನ್ನಡಿಗರು ಏನು ಸಮಸ್ಯೆ ಅನುಭವಿಸುತ್ತಿದ್ದಾರಲ್ಲ, ಅವುಗಳನ್ನು ಬಗೆ ಹರಿಸಲೆಂದೇ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಮಹಾರಾಷ್ಟ್ರದ ಜತ್ ಕ್ಷೇತ್ರದ ಶಾಸಕ ವಿಕ್ರಮ್ ಸಾವಂತ ಅವರು ನೀರಿನ ಸಮಸ್ಯೆ ಮನವಿ ಮಾಡಿದ್ದಾರೆ ನೀರಿನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಗಡಿನಾಡಿನ ಸಮಸ್ಯೆಗಳನ್ನು ಬಗೆಹರೆಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಮಹಾರಾಷ್ಟ್ರದ 742 ಗ್ರಾಮದಲ್ಲಿ ಕನ್ನಡಿಗರು ಇದ್ದಾರೆ. ಅವರೆಲ್ಲರ ಏಳಿಗೆಗಾಗಿ ಮೂಲಭೂತ ಸೌಲಭ್ಯ ಕೊಡಿಸುವ ಕೆಲಸ ಮಾಡುತ್ತೇವೆ. ನಮ್ಮ ಮುಖ್ಯಮಂತ್ರಿಗಳಿಗೆ ದಾನಮ್ಮ ದೇವಿ ಆಶೀರ್ವಾದ ಮಾಡಿ ಎಲ್ಲ ಸಮಸ್ಯೆಗಳಿಂದ ಹೊರ ಬಂದು ಉತ್ತಮ ಸೇವೆ ಮಾಡಲು ಅನುಕೂಲ ಮಾಡಿಕೊಡಲಿ. ನಾವು ಗುಡ್ಡಾಪುರ ದಾನಮ್ಮ ದೇವಿ ದೇವಸ್ಥಾನದ ಜಿರ್ಣೋದ್ಧಾರಕ್ಕೆ ಸಾಧ್ಯವಾದಷ್ಟು ಅನುದಾನ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಮಹಾರಾಷ್ಟ್ರದ ಜತ್​ನಲ್ಲಿ ನಡೆದ ಕರ್ನಾಟಕ 50 ಸಂಭ್ರಮ ಕಾರ್ಯಕ್ರಮ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಾಂಗ್ಲಿ ಹಾಗೂ ಸೊಲ್ಲಾಪುರ ಜಿಲ್ಲೆಗಳಲ್ಲಿ ಕನ್ನಡಿಗರ ಸಂಖ್ಯೆಯೇ ಹೆಚ್ಚಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರೇ ಇದ್ದಾರೆ. ಅವರಿಗೆ ಮೂಲಭೂತ ಸೌಕರ್ಯಗಳಿಲ್ಲ. ಶಿಕ್ಷಣ ಸಮಸ್ಯೆ ಸೇರಿದಂತೆ ಹತ್ತಾರು ಸಮಸ್ಯೆಗಳು ಭಾದಿಸುತ್ತಿವೆ. ಮಹಾರಾಷ್ಟ್ರ ಸರ್ಕಾರ ಮಲತಾಯಿ ಧೋರಣೆ ತೋರಿದರೇ, ಇತ್ತ ಕರ್ನಾಟಕ ಸರ್ಕಾರ ಕೂಡ ಗಮನಹರಿಸಿಲ್ಲ. ಈ ಸಮಸ್ಯೆಗೆ ಪರಿಹಾರವಾಗುವ ಕಾರ್ಯಕ್ರಮಗಳು ಆಯೋಜನೆಯಾಗಬೇಕು. ಕರ್ನಾಟಕ ಸರ್ಕಾರವೂ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ