ವಿಜಯಪುರ, ಅಕ್ಟೋಬರ್ 30: ವಕ್ಫ್ (Waqf) ಆಸ್ತಿ ವಿಚಾರ ಸದ್ಯ ಕರ್ನಾಟಕದಲ್ಲಿ (Karnataka) ಸಾಕಷ್ಟು ಚರ್ಚೆಯಾಗುತ್ತಿದೆ. ವಿಜಯಪುರ, ಯಾದಗಿರಿ, ಧಾರವಾಡ ಸೇರಿದಂತೆ ಇನ್ನೂ ಹಲವು ಜಿಲ್ಲೆಗಳ ರೈತರನ್ನು ಕಂಗಾಲಾಗಿಸಿದೆ. ತಮ್ಮ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ನಮೂದು ಆಗಿದ್ದು ಮತ್ತು ನೋಟಿಸ್ ನೀಡಿದ್ದನ್ನು ವಿರೋಧಿ ವಿಜಯಪುರ (Vijayapura) ಜಿಲ್ಲೆಯ ರೈತರು ಮಂಗಳವಾರ (ಅ.29) ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಪ್ರತಿಭಟನಾ ನಿರತರ ರೈತರ ಮನವೊಲಿಸುವಲ್ಲಿ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್, ಹೆಚ್ಚುವರಿ ಡಿಸಿ ಸೋಮಲಿಂಗ ಗೆಣ್ಣೂರು ಯಶಸ್ವಿಯಾಗಿದ್ದಾರೆ.
ಇಂದು (ಅ.30) ಪ್ರತಿಭಟನಾ ನಿರತ ರೈತರ ಬಳಿ ಬಂದ ಜಿಲ್ಲಾಧಿಕಾರಿಗಳು, “ಪಹಣಿಯಲ್ಲಿನ ವಕ್ಫ್ ಬೋರ್ಡ್ ಎಂಬ ಪದ ತೆಗೆಯಲಾಗಿದೆ. ಭವಿಷ್ಯದಲ್ಲೂ ಯಾವುದೇ ಸಮಸ್ಯೆ ಆಗುವುದಿಲ್ಲ. ಮತ್ತು ವಕ್ಫ್ ವಿಚಾರದಲ್ಲಿ ಶಾಶ್ವತ ಪರಿಹಾರ ನೀಡಲಾಗುವುದೆಂದು” ಭರವಸೆ ನೀಡಿದರು. ಅಲ್ಲದೇ ಇಂಡಿ ತಾಲೂಕಿನ 41 ರೈತರ ಜಮೀನು ಇಂದೀಕರಣವನ್ನು ಈಗಾಗಲೇ ರದ್ದು ಮಾಡಿದ್ದೇವೆ. ಕೂಡಲೇ ಹೋರಾಟ ಕೈಬಿಡುವಂತೆ ಮನವೊಲಿಸಿದರು. ಜಿಲ್ಲಾಧಿಕಾರಿಗಳು ನೀಡಿದ ಭರವಸೆಯಿಂದ ರೈತರು ಅಹೋರಾತ್ರಿ ಹೋರಾಟ ಕೈಬಿಟ್ಟು ನಿರ್ಗಮಿಸಿದರು.
ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರ ಭೂಮಿ ಕಬಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ. ಶಿಗ್ಗಾಂವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿ ವಿಚಾರವನ್ನು ಬಿಜೆಪಿ ಉಪಚುನಾವಣೆಗೆ ಬಳಸಿಕೊಳ್ಳುತ್ತಿದೆ. ನಿಮ್ಮ ಆಸ್ತಿ ತೆಗೆದುಕೊಳ್ಳಲು ಸಾಧ್ಯನಾ? ಇದು ರಾಜಕೀಯ ಗಿಮಿಕ್ ಎಂದಿದ್ದಾರೆ.
ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆಂದು ತುಸು ಜಾಗ ನೀಡಿದ್ದರೆ ಇಡೀ ಆಸ್ತಿಯನ್ನೇ ಕಬಳಿಸಿದ ವಕ್ಫ್!
ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಚುನಾವಣೆ ನಡೆಯುತ್ತಿದೆ. ಪ್ರಚಾರಕ್ಕೆ ಬೇರೆ ವಿಷಯ ಇಲ್ಲದಿದ್ದಕ್ಕೆ ಬಿಜೆಪಿಯವರು ವಕ್ಫ್ ವಿಚಾರ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಭೂಮಿಯನ್ನು ಯಾರೂ ತೆಗೆದುಕೊಳ್ಳಲು ಆಗಲ್ಲ ಎಂದರು.
ರೈತರ ಭೂಮಿ ವಕ್ಫ್ಗೆ ಸೇರಿಸಿದ್ದಾರೆಂಬುದು ಸುಳ್ಳು, ಅರೆಬರೆ ಸುದ್ದಿ. ಹಿಂದಿನ ಬಿಜೆಪಿ ಅವಧಿಯಲ್ಲಿ ವಕ್ಫ್ ವಿಚಾರದಲ್ಲಿ ನೋಟಿಸ್ ನೀಡಲಾಗಿದೆ. ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಕಿತ್ತುಕೊಳ್ಳಲು ಸಾಧ್ಯವಿಲ್ಲ. ವಕ್ಫ್ ಆಸ್ತಿ ಬಗ್ಗೆ ಇರುವ ಗೊಂದಲವನ್ನು ನಿವಾರಣೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ದಾನ ಮಾಡಿರುವ ಭೂಮಿ ವಕ್ಫ್ ಬೋರ್ಡ್ಗೆ ಸೇರಿರುತ್ತೆ. ಕೆಲವು ಧಾರ್ಮಿಕ ಕೇಂದ್ರಗಳು ಸಹ ವಕ್ಫ್ ಆಸ್ತಿಗೆ ಸೇರಿಕೊಳ್ಳುತ್ತವೆ. ಈ ಸಂಬಂಧ ಈಗಾಗಲೇ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯವರು ಮುಸ್ಲಿಮರ ಹೆಸರನ್ನು ತಂದಿದ್ದಾರೆ. ಹಿಂದೂ, ಮುಸ್ಲಿಮರ ನಡುವೆ ದ್ವೇಷ ಮೂಡಿಸುವುದೇ ಬಿಜೆಪಿ ಉದ್ದೇಶ. ಕಾಂಗ್ರೆಸ್ ದೇಶ ಮತ್ತು ರಾಜ್ಯದಲ್ಲಿ ಭೂಸುಧಾರಣೆ ಕಾಯ್ದೆ ಜಾರಿ ಮಾಡಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ರೈತರಿಗೆ ಜಮೀನ್ದಾರರಿಂದ ಭೂಮಿ ಕೊಡಿಸಿದೆ. ಯಾರು ಕೂಡ ರಾಜ್ಯದ ರೈತರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದರು.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 pm, Wed, 30 October 24