‘ವಿಜಯೇಂದ್ರ ನಾಯಕತ್ವ ಬದಲಾವಣೆ ಬಳಿಕವೇ ಮುಂದಿನ ಮಾತು’: ಊಹಾಪೋಹಗಳಿಗೆ ತೆರೆ ಎಳೆದ ಯತ್ನಾಳ್
ಬಿ.ವೈ. ವಿಜಯೇಂದ್ರ ನಾಯಕತ್ವ ಬದಲಾವಣೆಯಾದ ಬಳಿಕವೇ ಬಿಜೆಪಿಗೆ ಮರಳುವ ಬಗ್ಗೆ ಮುಂದಿನ ನಿರ್ಧಾರ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದು, ಹೊಂದಾಣಿಕೆ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ವಿಜಯೇಂದ್ರ ನನಗೆ ವೈಯಕ್ತಿಕವಾಗಿ ಬಹಳ ಹಾನಿ ಮಾಡಿದ್ದಾರೆ. ನಮ್ಮ ನಡುವೆ ಏನೂ ಇಲ್ಲ ಎಂದು ಎಷ್ಟೇ ಪ್ರಚಾರ ಮಾಡಿದರೂ ನನಗೇನು ಸಮಸ್ಯೆಯಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ವಿಜಯಪುರ, ಅಕ್ಟೋಬರ್ 21: ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖಾಮುಖಿ ಭೇಟಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಎಂದೇ ಹೇಳಲಾಗಿತ್ತು. ಇಬ್ಬರ ನಡುವೆಯೂ ಸಂಧಾನ ನಡೆಯಲಿದೆ, ಶೀಘ್ರವೇ ಯತ್ನಾಳ್ ಮರಳಿ ಬಿಜೆಪಿಗೆ ಬರಲಿದ್ದಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಆದರೆ ಎಲ್ಲ ಊಹಾಪೋಹಗಳಿಗೂ ಈಗ ಸ್ವತಃ ವಿಜಯಪುರ ಶಾಸಕರಿಂದಲೇ ಸ್ಪಷ್ಟನೆ ಸಿಕ್ಕಿದೆ. ವಿಜಯೇಂದ್ರ ಜತೆ ಯಾವುದೇ ಹೊಂದಾಣಿಕೆ ಮಾತುಕತೆ ಮಾಡಿಲ್ಲ. ಅವರ ಬದಲಾವಣೆ ಬಳಿಕವೇ ಉಳಿದೆಲ್ಲವೂ ಎಂದು ಕಡ್ಡಿ ಮುರಿದಂತೆ ಯತ್ನಾಳ್ ಹೇಳಿದ್ದಾರೆ.
‘ವಿಜಯೇಂದ್ರ ನನಗೆ ವೈಯಕ್ತಿಕವಾಗಿ ಬಹಳ ಹಾನಿ ಮಾಡಿದ್ದಾರೆ’
ಖಾಸಗಿ ಕಾರ್ಯಕ್ರಮಕ್ಕೆ ಹೋದಾಗಿ ವ್ಯಕ್ತಿಯೊಬ್ಬರು ಮನೆಗೆ ಕರೆದಿದ್ದರು. ಅವರ ಮನೆಯಲ್ಲಿ ಕಾಫಿ ಕುಡಿಯುವಾಗ ವಿಜಯೇಂದ್ರ ಸಹ ಬಂದ್ರು. ಆರಾಮಾ.. ಆರಾಮಾ.. ಎಂದು ಮಾತನಾಡಿಸಿದರು. ಅದನ್ನು ಬಿಟ್ಟು ಯಾವುದೇ ಹೊಂದಾಣಿಕೆ ಮಾತುಕತೆ ನಡೆದಿಲ್ಲ. ವಿಜಯೇಂದ್ರ ನನಗೆ ವೈಯಕ್ತಿಕವಾಗಿ ಬಹಳ ಹಾನಿ ಮಾಡಿದ್ದಾರೆ. ಬಿಎಸ್ವೈ ಸಿಎಂ ಆಗಿದ್ದಾಗ ನನ್ನ ಲೆಟರ್ಗಳನ್ನ ಹರಿದು ಹಾಕಿದ್ದಾರೆ. ನನಗೆ ಯಾವುದೇ ಅನುದಾನ ಬಾರದಂತೆ ಬಿಎಸ್ವೈ ತಡೆದಿದ್ದು, ನನ್ನ ಹತ್ತಿಕ್ಕಲು ಎಲ್ಲಾ ಕೆಲಸ ಮಾಡಿದ್ದಾರೆ. ಪ್ರತಿಸ್ಪರ್ಧಿಯೆಂದು ದ್ವೇಷ ಮಾಡಿದ್ದಾರೆ. ವಿಜಯೇಂದ್ರಗೂ ನನ್ನ ವಿರುದ್ಧ ವೈಯಕ್ತಿಕವಾಗಿ ದ್ವೇಷವಿದೆ. ನಮ್ಮ ನಡುವೆ ಏನೂ ಇಲ್ಲ ಎಂದು ಎಷ್ಟೇ ಪ್ರಚಾರ ಮಾಡಿದರೂ ನನಗೇನು ಸಮಸ್ಯೆಯಿಲ್ಲ. ವಿಜಯೇಂದ್ರ ನಾಯಕತ್ವ ಬದಲಾವಣೆ ಬಳಿಕವೇ ಮುಂದಿನ ಮಾತು ಎಂದವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ‘CD ತೋರಿಸಿ ಸಿದ್ದರಾಮಯ್ಯ ರಾಜೀನಾಮೆ ಪಡೆದಿದ್ದಾರೆ’: ಸ್ಫೋಟಕ ಆರೋಪ ಮಾಡಿದ ಯತ್ನಾಳ್
‘ಸ್ಥಾನಮಾನ ಕೊಟ್ರೆ ಬಿಜೆಪಿ, ಇಲ್ಲದಿದ್ದರೆ ಜೆಸಿಬಿ’
ಸಂಸತ್ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸೋಮಣ್ಣ ಕರೆದಿರುವ ಕಾರಣ ನಾಳೆ ದೆಹಲಿಗೆ ಹೋಗ್ತಿದ್ದೇನೆ. ಅಲ್ಲಿ ಯಾವುದೇ ರಾಷ್ಟ್ರೀಯ ನಾಯಕರನ್ನ ಭೇಟಿಯಾಗಲ್ಲ. ಕಬ್ಬು ಹೋರಾಟಗಾರರ ಬಗ್ಗೆ ಸಚಿವರ ಜೊತೆಗೆ ಮಾತನಾಡುತ್ತೇನೆ. ಆದರೆ ಬಿಜೆಪಿ ವಾಪಸಾತಿ ನಿಟ್ಟಿನಲ್ಲಿ ಯಾರ ಜೊತೆಗೂ ಮಾತನಾಡಲ್ಲ. ದೆಹಲಿ ಮಟ್ಟದಲ್ಲಿ ತಾನು ಬಿಜೆಪಿಗೆ ಮರಳಿ ಬರಬೇಕೆಂಬ ಕುರಿತು ಚರ್ಚೆ ನಡೆಯುತ್ತಿದೆಯಾದರೂ, ಸೂಕ್ತಸ್ಥಾನಮಾನ ನೀಡಿದರೆ ಮಾತ್ರ ಮರಳಿ ಪಕ್ಷ ಸೇರುತ್ತೇನೆ. ಇಲ್ಲದಿದ್ದರೆ ಜೆಸಿಬಿ ಇದ್ದೇ ಇದೆಯಲ್ಲ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:27 pm, Wed, 21 October 26
