
ವಿಜಯಪುರ, (ಅಕ್ಟೋಬರ್ 02):ಭೂಮಿಯಾಳದಿಂದ ಬರುತ್ತಿರುವ ಭಾರೀ ಶಬ್ದ ಹಾಗೂ ಭೂಮಿ ನಡುಗಿರುವ (earthquake) ಅನುಭವ ವಿಜಯಪುರ (Vijayapura) ಜಿಲ್ಲೆಯ ಜನರ ನಿದ್ದೆಗಡೆಸಿದೆ. ಕಳೆದ ಎರಡು ತಿಂಗಳಲ್ಲಿ 12ಕ್ಕೂ ಆಧಿಕ ಬಾರಿ ಭೂಕಂಪನ ಅನುಭವವಾಗಿದೆ. ಕಳೆದ ಅಕ್ಟೋಬರ್ 21 ರಂದು 2.9 ತೀವ್ರತೆಯ ಭೂಕಂಪನ ರಿಕ್ಟರ್ ಮಾಪನದಲ್ಲಿ ದಾಖಲಾಗಿತ್ತು. ಇದರಿಂದ ಜನ ಬೆಚ್ಚಿಬಿದ್ದಿದ್ದು, ಮನೆಯೊಂದ ಹೊರಗೆ ಓಡೋಡಿ ಬಂದಿದ್ದರು. ನಂತರ ನೆಲದಿಂದ ಭಾರೀ ಶಬ್ದ ಹಾಗೂ ಭೂಮಿನಡುಗಿದ ಅನುಭವ ಮೇಲಿಂದ ಮೇಲೆ ಆಗುತ್ತಲೇ ಇದೆ. ಸಿಂದಗಿ ಬಸವನಬಾಗೇವಾಡಿ ವಿಜಯಪುರ ತಾಲೂಕುಗಳ ಭಾಗದಲ್ಲಿ ಈ ಅನುಭವ ಆಗುತ್ತಿದೆ. ಅದರಲ್ಲೂ ರಾತ್ರಿ ವೇಳೆಯೇ ಭೂಮಿಯಿಂದ ಬಾರೀ ಶಬ್ದ ಕೇಳಿ ಬರುವುದು ಭೂಕಂಪನ ಆದಂತ ಅನುಭವ ಆಗುತ್ತಿದ್ದು, ರಾತ್ರಿ ನೆಮ್ಮದಿಯ ನಿದ್ದೆಯನ್ನೂ ಮಾಡಲು ಜನರಿಗೆ ಆಗುತ್ತಿಲ್ಲ. ಯಾವಾಗ ಏನಾಗುತ್ತದೆಯೋ ಎಂಬ ಭಯದಲ್ಲಿ ಜನರು ಕಾಲ ಕಳೆಯುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆಯೂ ಇದೇ ಅನುಭವ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಗಿತ್ತು. ಆದಗ ದೆಹಲಿ ಹೈದರಾಬಾದ್ ನಿಂದ ವಿಶೇಷ ಪರಿಣಿತರನ್ನು ಜಿಲ್ಲಾಡಳಿತ ಜಿಲ್ಲೆಗೆ ಕರೆಯಿಸಿ ಪರೀಕ್ಷೆ ಮಾಡಿಸಲಾಗಿತ್ತು. ಪರೀಕ್ಷೆ ನಡೆಸಿದ ಪರಿಣಿತ ವಿಜ್ಞಾನಿಗಳು ಭೂಮಿಯಾಳದಿಂದ ಬರುವ ಶಬ್ದ ಹಾಗೂ ಕಂಪನ ಅನುಭವಕ್ಕೆ ವೈಜ್ಞಾನಿಕ ಕಾರಣಗಳನ್ನು ನೀಡಿ ಹೆಚ್ಚಿನ ತೀವ್ರತೆಯ ಕಂಪನ ಆಗಲ್ಲಾ ಎಂದುಹೇಳಿದ್ದರು. ಇದರಿಂದ ಜನರಿಗೆ ದೈರ್ಯ ಬಂದಿತ್ತು. ಈಗ ಅಂತಹ ಪರಿಣಿತರನ್ನು ಕರೆಯಿಸಿ ಇದಕ್ಕೆ ನಿಖರ ಕಾರಣ ಹಾಗೂ ದೈರ್ಯ ತುಂಬುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿದ್ದು, ಭೂಮಿಯಾಳದಿಂದ ಬರುವ ಬಾರೀ ಶಬ್ದ ಹಾಗೂ ಕಂಪನದ ಅನುಭವ ಕುರಿತು ಮಾಹಿತಿ ಇದೆ. ಇದು ಮಳೆಗಾಲದಲ್ಲಿ ಹಾಗೂ ಹೆಚ್ಚು ಮಳೆಯಾದ ವೇಳೆ ತೇವಾಂಶದಿಂದ ಭೂಮಿಯಾಳದಲ್ಲಿ ಉಂಟಾಗೋ ಪ್ರಕ್ರಿಯೆಯಿಂದ ಆಗುತ್ತಿದೆ. ಭೂಕಂಪನ ಆಗುವ ಪ್ರದೇಶಗಳ ಪೈಕಿ ನಮ್ಮ ಜಿಲ್ಲೆ ಇಲ್ಲ. ಭೂಮಿಯಲ್ಲಿ ನೀರು, ಸುಣ್ಣದ ಕಲ್ಲು ಸೇರಿದಂತೆ ಹಲವು ಹೋಂದಾಣಿಕೆಗಳು ಆಗುತ್ತಿರುವುದರಿಂದ ಹೀಗೆ ಸಣ್ಣ ಕಂಪನ ಆಗುತ್ತಿರುತ್ತದೆ. ಇದಕ್ಕೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಇಷ್ಟರ ಮದ್ಯೆ ಜಿಲ್ಲಾಡಳಿತದ ಮೂಲಕ ಹಿರಿಯ ಪರಿಣಿತ ಭೂಗರ್ಭಶಾಸ್ತ್ರಜ್ಞರನ್ನು ಜಿಲ್ಲೆಗೆ ಕರೆಯಿಸಿ ಪರೀಕ್ಷೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಜನರು ಭಯಗೊಳ್ಳಬಾರದು ಎಂದು ಹೇಳಿದ್ದಾರೆ.
ಸದ್ಯ ಭೂಕಂಪನ ಭಯದಿಂದ ಇರುವ ಜನರಿಗೆ ದೈರ್ಯ ತುಂಬುವ ಕಾರ್ಯ ಮಾಡಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಜಿಲ್ಲಾಡಳಿತದ ಮೂಲಕ ಪರಿಣಿತರ ತಂಡ ಕರೆಯಿಸೋ ಭರವಸೆ ನೀಡಿದ್ದಾರೆ. ಆದಷ್ಟು ಬೇಗಾ ಪರಿಣಿತ ವಿಜ್ಞಾನಿಗಳನ್ನು ಕರೆಯಿಸಿ ಪರೀಕ್ಷೆ ಮಾಡಿಸಿ ಜನರ ಆತಂಕ ದೂರ ಮಾಡಬೇಕಿದೆ.