ವಿಜಯಪುರ: ಆಂಧ್ರಪ್ರದೇಶದ (Andhra Pradesh) ಸುಕ್ಷೇತ್ರ ಶ್ರೀಶೈಲದಲ್ಲಿ ಕರ್ನಾಟಕದ ಸರ್ಕಾರಿ ಬಸ್ (Government Bus) ಚಾಲಕ ಹಾಗೂ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕೆಎಸ್ಆರ್ಟಿಸಿ ಬಸ್ ಚಾಲಕ ಬಸವರಾಜ್ ಬಿರಾದಾರ್ ಮತ್ತು ನಿರ್ವಾಹಕ ಜೆಡಿ ಮಾದರ್ ಹಲ್ಲೆಗೆ ಒಳಗಾಗಿದ್ದು, ದುಷ್ಕರ್ಮಿಗಳು ವಿಜಯಪುರ ಡಿಪೋಗೆ ಸೇರಿದ ಬಸ್ ಕಿಟಕಿ ಗಾಜುಗಳನ್ನ ಒಡೆದು ಹಾಕಿದ್ದಾರೆ. ಜೂನ್ 2 ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಶ್ರೀಶೈಲದಲ್ಲಿ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಿ ಊಟ ಮಾಡಿ ಕಟ್ಟೆಯ ಮೇಲೆ ಮಲಗಿದ್ದಾಗ ಏಕಾಏಕಿ ಪುಂಡರ ಗುಂಪೊಂದು ಬಂದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡಿಗರ ಬಗ್ಗೆ ಆಶ್ಲೀಲ ಪದ ಬಳಸಿ, ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಇನ್ನು ಘಟನೆಯಲ್ಲಿ ಚಾಲಕನ ಮುಖ ಹಾಗೂ ಕಾಲಿನ ಭಾಗಕ್ಕೆ ಭಾರಿ ಪೆಟ್ಟು ಬಿದ್ದಿದ್ದು, ತೀವ್ರ ರಕ್ತ ಸ್ರಾವವಾಗಿದೆ. ಚಾಲಕ ಬಸವರಾಜ್ ಚೀರಾಟ ಕೇಳಿ ಇತರೆ ಚಾಲಕರು ಹಾಗೂ ನಿರ್ವಾಹಕರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಇತರರು ಬರುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಶ್ರೀಶೈಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಯುಗಾದಿ ಸಂದರ್ಭದಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾಗಿತ್ತು. ಮಾರ್ಚ್ 31 ರಂದು ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿ ಕರ್ನಾಟಕದ ವಾಹನಗಳ ಗಾಜುಗಳನ್ನ ಒಡೆದು ಹಾಕಿದ್ದರು. ಇದೀಗ ಮತ್ತೇ ಕೃತ್ಯ ಎಸಗಿದ್ದಾರೆ. ಈ ಹಿಂದೆ ನೀರಿನ ವಿಚಾರವಾಗಿ ಬಾಗಲಕೋಟೆ ಮೂಲದ ಶ್ರೀಶೈಲ್ ವಾರಿಮಠ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದರು.
ರಾತ್ರಿ ಎಂಟು ಗಂಟೆಗೆ ಬಸ್ ಸ್ಟಾಪ್ಗೆ ಬಂದಿದ್ದೆವು. ಊಟ ಮಾಡಿ ಮಲಗಿದ್ದೆವು. ರಾತ್ರಿ 1 ಗಂಟೆ ಹೊತ್ತಿಗೆ ಆಟೋದಲ್ಲಿ 10ರಿಂದ 12 ಜನ ಬಂದು ನಮ್ಮ ಎಬ್ಬಿಸಿದರು. ನಂತರ ಹಲ್ಲೆ ಮಾಡಿದ್ದಾರೆ. ನಾವು ಕೂಗಿದ ತಕ್ಷಣ ಬೇರೆ ಬಸ್ಗಳ ಚಾಲಕರು ಮತ್ತು ನಿರ್ವಾಹಕರು ಸ್ಥಳಕ್ಕೆ ಬಂದರು. ಬೇರೆಯವರು ಬರ್ತಾಯಿದ್ದಂತೆ ಓಡಿಹೋದರು. ಸಿಬ್ಬಂದಿ ತಕ್ಷಣ ಆ್ಯಂಬುಲೆನ್ಸ್ ಕರೆ ಮಾಡಿದರು ಅಂತ ಚಾಲಕ ಮಾಹಿತಿ ನೀಡಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:40 am, Sat, 4 June 22