ಬಿಜೆಪಿ ನಾಯಕ ವಿಜುಗೌಡ ಪಾಟೀಲ್ ನಿವಾಸದಲ್ಲಿ ಶೋಧ: ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು
ಯಾವಾಗ ಹುಲಿ ಉಗುರು ಬಿಗ್ ಬಾಸ್ ಸ್ಪರ್ಧಿ ಸಂತೋಷ ಕೊರಳಲ್ಲಿ ಕಂಡು ಬಂತೋ ಆಗ ಅರಣ್ಯಾಧಿಕಾರಿಗಳು ಸ್ವಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದರು. ಬಳಿಕ ನಟರು, ಚಿತ್ರ ನಿರ್ಮಾಪಕರು ಹೀಗೆ ಕಂಡ ಕಂಡವರಿಗೆ ಸುತ್ತಿಕೊಂಡಿತು. ವಿಜಯಪುರದಲ್ಲೂ ಬಿಜೆಪಿ ನಾಯಕ ವಿಜುಗೌಡ ಪಾಟೀಲ್ ಪುತ್ರ ಹುಲಿ ಉಗುರು ಧರಿಸಿರುವ ಪೋಟೋ ವೈರಲ್ ಆಗಿದ್ದು, ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಿ ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದಿದ್ದಾರೆ.

ವಿಜಯಪುರ, ಅಕ್ಟೋಬರ್ 26: ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ (Vijugouda Patil) ಪುತ್ರ ಹುಲಿ ಉಗುರು ಧರಿಸಿದ ಆರೋಪ ಕೇಳಿಬಂದಿತ್ತು. ಇದಕ್ಕೆ ಸಾಕ್ಷಿವೆಂಬಂತೆ ಕೆಲ ಫೋಟೋಗಳು ವೈರಲ್ ಆಗಿದ್ದವು. ಬಳಿಕ ಅವರು ಅದು ನಕಲಿ ಹುಲಿ ಉಗುರು, ಬೇಕಾದರೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಮಾಡಲಿ ಎಂದಿದ್ದರು. ಇದರ ಬೆನ್ನಲ್ಲೇ ಇಂದು ನಗರದಲ್ಲಿರುವ ವಿಜುಗೌಡ ಪಾಟೀಲ್ ಮನೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ ಮಾಡಿದ್ದು, ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲಾ ಅರಣ್ಯಾಧಿಕಾರಿ ಶಿವಶರಣಯ್ಯ, ಸಹಾಯಕ ಅರಣ್ಯಾಧಿಕಾರಿ ಭಾಗ್ಯವಂತ ಮಸೂದೆ, ವಲಯ ಅರಣ್ಯಾಧಿಕಾರಿ ಸಂತೋಷ ಆಜೂರ ಹಾಗೂ ಸಿಬ್ಬಂದಿಗಳಿಂದ ವಿಜುಗೌಡ ಪುತ್ರ ಶಾಶ್ವತಗೌಡ ಪಾಟೀಲ ಹಾಕಿರುವ ಹುಲಿ ಉಗುರು ಕುರಿತು ಪರಿಶೀಲನೆಗೆ ಬಂದಿದ್ದಾರೆ. ಶಾಶ್ವತಗೌಡ ಪಾಟೀಲ ಹಾಕಿಕೊಂಡಿರುವ ಅಸಲಿ ಹುಲಿ ಉಗುರೋ ಅಥವಾ ನಕಲಿಯೋ ಎಂಬುದನ್ನು ಪರೀಕ್ಷೆ ಮಾಡಲಿದ್ದಾರೆ. ಪರಿಶೀಲನೆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.
ನಾನು ಚಿಲ್ಲರೇ ರಾಜಕಾರಣ ಮಾಡಲ್ಲ: ವಿಜುಗೌಡ ಪಾಟೀಲ್
ತಮ್ಮ ಪುತ್ರ ಧರಿಸಿದ್ದು ನಕಲಿ ಹುಲಿ ಉಗುರು. ಏಳು ವರ್ಷಗಳ ಹಿಂದೆ ಪೆಂಡೆಂಟ್ನಲ್ಲಿ ನಕಲಿ ಹುಲಿ ಉಗುರು ಹಾಕಿಕೊಂಡಿದ್ದ ಎಂದು ನಿನ್ನೆಯೇ ಸ್ಪಷ್ಟನೆ ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಬೇಕಾದರೆ ತನಿಖೆ ಮಾಡಲಿ. ನಾವು ತನಿಖೆಗೆ ಸಿದ್ಧ. ಅಧಿಕಾರಿಗಳು ಕೇಳಿದರೆ ಚೈನ್ ತೋರಿಸುತ್ತೇವೆ. ನಮಗೆ ಕಾನೂನಿನ ಅರಿವು ಇದೆ. ನಮ್ಮ ಕುಟುಂಬ ಕಾನೂನು ಪಾಲಿಸುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: ಹುಲಿ ಉಗುರು ವಿವಾದ: ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ಎಲ್ಲರ ಮೇಲೆಯೂ ಕ್ರಮ ಎಂದ ಅಧಿಕಾರಿ
ನಾನು ಚಿಲ್ಲರೇ ರಾಜಕಾರಣ ಮಾಡಲ್ಲ. ನಮ್ಮ ಮಗನ ಫೋಟೋ ಇಟ್ಟುಕೊಂಡು ಕೆಲವರು ಚಿಲ್ಲರೇ ರಾಜಕಾರಣ ಮಾಡುತ್ತಿದ್ದಾರೆ. ಅವರದ್ದು ನನ್ನ ಬಳಿ ಬಹಳ ಇದೆ ಎಂದು ಹೆಸರು ಹೇಳದೆ ಪರೋಕ್ಷವಾಗಿ ಸಚಿವ ಎಂ.ಬಿ ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅರಣ್ಯಾಧಿಕಾರಿ ಶಿವಶರಣಯ್ಯ ಹೇಳಿದ್ದಿಷ್ಟು
ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ನಿವಾಸದಲ್ಲಿ ಪರೀಕ್ಷೆ ಮಾಡಿದ ಬಳಿಕ ಅರಣ್ಯಾಧಿಕಾರಿ ಶಿವಶರಣಯ್ಯ ಪ್ರತಿಕ್ರಿಯಿಸಿದ್ದು, ವಿಜುಗೌಡ ಪಾಟೀಲ ಪುತ್ರ ಶಾಶ್ವತಗೌಡ ಪಾಟೀಲ್ ಹುಲಿ ಉಗುರು ಇರುವ ಪೆಂಡೆಂಟ್ ಹಾಕಿರುವ ಕುರಿತು ವಿಚಾರಣೆ ಮಾಡಿದ್ದೇವೆ. ವಿಜುಗೌಡ ಪಾಟೀಲ ಮನೆಯಲ್ಲಿ ಹುಲಿ ಉಗುರು ಇರುವ ಪೆಂಡೆಂಟ್ ವಶಕ್ಕೆ ಪಡೆದು ಮಹಜರು ಮಾಡಿದ್ದೇವೆ. ಈ ಪ್ರಕರಣದಲ್ಲಿ ನಾವು ಸ್ವಮೋಟೋ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಹುಲಿ ಉಗುರು ವಿವಾದ: ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಮರಳಿಸಲು ಕೊನೇ ಅವಕಾಶ ನೀಡಲು ಚಿಂತನೆ; ಸಚಿವ ಈಶ್ವರ ಖಂಡ್ರೆ
ಹುಲಿ ಉಗುರು ಅಸಲಿಯೋ, ನಕಲಿಯೋ ಎಂಬುದರ ಕುರಿತು ಪರೀಕ್ಷೆಯಾಗಬೇಕಿದೆ. ಡೆಹ್ರಾಡೂನ್ ನಲ್ಲಿರೋ ವೈಲ್ಡ್ ಲೈಫ್ ಇನ್ಸಸ್ಟಿಟ್ಯೂಟ್ ಆಫ್ ಇಂಡಿಯಾಗೆ ಕಳುಹಿಸುತ್ತೇವೆ. ಅಲ್ಲಿನ ಫಾರೆನ್ಸಿಕ್ ಲ್ಯಾಬ್ನಲ್ಲಿ ಉಗುರಿನ ಅಸಲಿಯತ್ತಿನ ಕುರಿತು ಡಿಎನ್ಎ ಪರೀಕ್ಷೆ ನಡೆಯುತ್ತದೆ. ವೈಲ್ಡ್ ಲೈಫ್ ಇನ್ಸಸ್ಟಿಟ್ಯೂಟ್ ಆಫ್ ಇಂಡಿಯಾದಿಂಧ ಈ ಉಗುರು ಹುಲಿಯುಗರೋ ಅಥವಾ ನಕಲಿಯೋ ಎಂಬ ವರದಿ ಬಂದ ಮೇಲೆಯೇ ಸತ್ಯಾಸತ್ಯತೆ ಗೊತ್ತಾಗಲಿದೆ. ಇದಕ್ಕಾಗಿ ಒಂದು ತಿಂಗಳ ಸಮಯ ಹಿಡಿಯುತ್ತದೆ. ಒಂದು ವೇಳೆ ಪರೀಕ್ಷೆಯಲ್ಲಿ ಹುಲಿ ಉಗುರು ಅಸಲಿ ಎಂದು ಬಂದರೆ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಕಾಪು ಬಜರಂಗದಳ ಪ್ರಖಂಡ ಸಂಚಾಲಕ ಸುಧೀರ್ ಸೋನು
ಕರಾವಳಿ ಜಿಲ್ಲೆ ಉಡುಪಿಗೂ ಕಾಲಿಟ್ಟ ಹುಲಿ ಉಗುರು
ಉಡುಪಿ: ಕರಾವಳಿ ಜಿಲ್ಲೆ ಉಡುಪಿಗೂ ಹುಲಿ ಉಗುರು ಕಾಲಿಟ್ಟಿದೆ. ಹುಲಿ ಉಗುರು ಪೆಂಡೆಂಟ್ ಧರಿಸಿದ ಹಿಂದೂ ಮುಖಂಡನ ಫೋಟೋ ವೈರಲ್ ಆಗಿದೆ. ಕಾಪು ಬಜರಂಗದಳ ಪ್ರಖಂಡ ಸಂಚಾಲಕ ಸುಧೀರ್ ಸೋನು ಹುಲಿ ಉಗುರು ಧರಿಸಿರುವ ಫೋಟೋ ವೈರಲ್ ಆಗಿವೆ. ಕತ್ತಿನ ತುಂಬಾ ಚಿನ್ನ ಧರಿಸುವ ಮೂಲಕ ಕಾಪು ಭಾಗದಲ್ಲಿ ಗಮನ ಸೆಳೆದಿರುವ ಸುಧೀರ್ ಸೋನು, ಜೊತೆಗೆ ಹುಲಿ ಉಗುರು ಪೆಂಡೆಂಟ್ ಕೂಡ ಧರಿಸಿದ್ದಾರೆ. ಸುಧೀರ್ ಸೋನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:41 pm, Thu, 26 October 23




