ವಿಜಯಪುರ: ಖ್ಯಾತ ಪ್ರವಚನಕಾರರು, ನಡೆದಾಡುವ ದೇವರಂದೆ ಇಡೀ ವಿಶ್ವದಾದ್ಯಂತ ಪ್ರಖ್ಯಾತಿಗೆ ಕಾರಣರಾದ ಸಿದ್ದೇಶ್ವರ ಸ್ವಾಮೀಜಿಗಳು (Siddeshwar Swamiji) ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕಳೆದ ಒಂದು ವಾರಕ್ಕಿಂತಲೂ ಹೆಚ್ಚು ದಿನದಿಂದ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿರುವ ಸ್ವಾಮೀಜಿಗಳ ದರ್ಶನಕ್ಕಾಗಿ ನಿತ್ಯ ಸಾವಿರಾರು ಭಕ್ತರು, ಜನಪ್ರತಿನಿಧಿಗಳು, ಸಚಿವರು, ಶಾಸಕರುಗಳು ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ. ಶ್ರೀಗಳ ಅನಾರೋಗ್ಯದ ಕಾರಣ ಡಿ. 31ರಂದು ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದುಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರೂ ಶ್ರೀಗಳು ಭಕ್ತರಿಗೆ ದರ್ಶನ ನೀಡುವುದನ್ನ ಮಾತ್ರ ಮರೆತಿಲ್ಲ. ದೈಹಿಕ ಬಳಲಿಕೆಯ ನಡುವೆಯೂ ಆಶ್ರಮಕ್ಕೆ ಹರಿದು ಬರುವ ಸಾವಿರಾರು ಭಕ್ತರಿಗೆ ಸಿದ್ಧೇಶ್ವರ ಶ್ರೀಗಳು ನಿತ್ಯ ದರ್ಶನ ನೀಡುತ್ತಿದ್ದಾರೆ. ನಿನ್ನೆಯವರೆಗೂ ಆಶ್ರಮದ ಕಟ್ಟಡದ ಆವರಣದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾ ಬಂದಿದ್ದಾರೆ. ಇನ್ನೂ ವೈದ್ಯರ ಸಲಹೆಯಂತೆ ಸ್ವಾಮೀಜಿಯವರನ್ನು ನೇರವಾಗಿ ಆಶ್ರಮದ ವೆಬ್ ಸೈಟ್ ಹಾಗೂ ಫೇಸ್ ಬುಕ್ನಲ್ಲಿ ದರ್ಶನ ಮಾಡಬೇಕೆಂದು ಆಶ್ರಮದ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದರೂ ಸಹ ಅಪಾರ ಪ್ರಮಾಣದಲ್ಲಿ ಭಕ್ತರು ಆಶ್ರಮಕ್ಕೆ ಹರಿದು ಬಂದಿದ್ದರು. ಮಧ್ಯಾಹ್ನ 1:00 ಸುಮಾರಿಗೆ ಮೊದಲ ಮಹಡಿಯಿಂದ ಭಕ್ತರಿಗೆ ದರ್ಶನ ನೀಡಿದ ಬಳಿಕ ಸಿದ್ಧೇಶ್ವರ ಸ್ವಾಮೀಜಿ ನೆಲ ಮಹಡಿಯವರೆಗೂ ವ್ಹೀಲ್ ಚೇರ್ನಲ್ಲಿ ಆಗಮಿಸಿ ಸುತ್ತಾಡಿದರು.
ಸ್ವಾಮೀಜಿಗಳ ದರ್ಶನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನಿಂದ ಆಗಮಿಸಿ ಶ್ರೀಗಳ ದರ್ಶನ ಪಡೆದುಕೊಂಡರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ಧೇಶ್ವರ ಸ್ವಾಮೀಜಿ ಆರೋಗ್ಯ ಕಳವಳಕಾರಿ ಆಗಿದ್ದರಿಂದ ನಾನು ಬಂದಿದ್ದೇನೆ. ಶ್ರೀಗಳ ಆರೋಗ್ಯ ವಿಚಾರವನ್ನು ನಾನು ಕಳೆದ ಒಂದು ವಾರದಿಂದ ನಿತ್ಯ ಪೋನ್ನಲ್ಲಿ ವಿಚಾರಿಸುತ್ತದ್ದೇನೆ. ಎರಡು ದಿನಗಳ ಹಿಂದೆ ಕರೆ ಮಾಡಿ ಮಾತನಾಡಿದಾಗ ಶ್ರೀಗಳು ಒಂದೆರಡು ಮಾತಾಡಿದ್ದರು. ಶ್ರೀಗಳ ಆರೋಗ್ಯ ಆಶ್ಚರ್ಯಕರ ರೀತಿಯಲ್ಲಿ ಸುಧಾರಿಸಿದೆ. ಈಗ ಪ್ರಧಾನಿಗಳು ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಕುರಿತು ಜೋಶಿ ಅವರೊಂದಿಗೆ ಮಾತನಾಡಿದ್ದಾರೆ. ಶ್ರೀಗಳು ಆದಷ್ಟು ಬೇಗ ಗುಣ ಆಗಲಿ ಎಂದು ನರೇಂದ್ರ ಮೋದಿ ಅವರು ಹಾರೈಸಿದ್ದಾರೆ. ಶ್ರೀಗಳ ಬದುಕೇ ಮಾದರಿಯಾಗಿದೆ. ನಡೆ, ನುಡಿ ನಮ್ಮೆಲ್ಲರಿಗೂ ದಾರಿ ದೀಪವಾಗಿದೆ ಎಂದು ಹೇಳಿದರು.
ವಿಜಯಪುರ ಪುಣ್ಯ ಭೂಮಿಯನ್ನು ಅವರ ಕರ್ಮ ಭೂಮಿ ಮಾಡಿಕೊಂಡಿದ್ದು ನಮ್ಮ ಪುಣ್ಯವಾಗಿದೆ. ಸಿದ್ದೇಶ್ವರ ಸ್ವಾಮಿಗಳು ನಡೆದಾಡುವ ದೇವರು. ಅವರ ಆಚರಣೆ, ವಿಚಾರ ಎಲ್ಲವೂ ಪರಿಶುದ್ಧವಾಗಿದೆ. ಶ್ರೀಗಳು ಅಪರೂಪದ ತತ್ವಜ್ಞಾನಿಯಾಗಿದ್ದಾರೆ, ಬದುಕಿನ ಸೂಕ್ಷ್ಮತೆಯನ್ನು ನಿಖರವಾಗಿ ಸ್ಪಷ್ಟವಾಗಿ ತಿಳಿದುಕೊಂಡವರು ಸಿದ್ದೇಶ್ವರ ಸ್ವಾಮೀಜಿ. ಸಾಮಾನ್ಯ ಮನುಷ್ಯನ ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಕೊಟ್ಟ ಮಹಾತ್ಮರು. ಅವರ ಮಾತುಗಳನ್ನು ಕೇಳಿ ನಾವೆಲ್ಲ ಬದಲಾಗಿದ್ದೇವೆ. ಹಲವಾರು ಬಾರಿ ಶ್ರೀಗಳು ರೈತರ ಬಗ್ಗೆ, ನೀರಾವರಿ ಬಗ್ಗೆ, ತತ್ವಗಳ ಬಗ್ಗೆ ಗಂಟೆಗಟ್ಟಲೇ ಚರ್ಚೆ ಮಾಡಿದ್ದೇವೆ, ಆಗ ಸಮಯ ಹೋಗಿದ್ದೇ ಗೊತ್ತಾಗುತ್ತಿರಲಿಲ್ಲಾ. ನನ್ನನ್ನು ಅತ್ಯಂತ ಸಮಾಧಾನವಾಗಿ ಪ್ರೀತಿ ವಿಶ್ವಾಸದಿಂದ ಕಂಡಿದ್ದಾರೆ. ನಾನು ಸಿಎಂ ಆದ ಸಂದರ್ಭದಲ್ಲಿ ಫೋನ್ ಮಾಡಿದಾಗ ಬಹಳ ಸಂತೋಷವಾಗಿದೆ, ನಿನ್ನಿಂದ ನಾಡಿಗೆ ಒಳ್ಳೇದಾಗುತ್ತೆ ಎಂದು ಆಶೀರ್ವದಿಸಿದ್ದರು ಎಂದರು.
ಇದನ್ನೂ ಓದಿ: Siddheshwar Swamiji: ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯ ವಿಚಾರ, ಹರಿದು ಬಂದ ಜನರು: ಭಕ್ತರಿಗೆ ದರ್ಶನ ನೀಡಿದ ನಡೆದಾಡುವ ದೇವರು
ಅವರ ಎಲ್ಲಾ ಮೆಡಿಕಲ್ ರಿಪೋರ್ಟ್ಗಳು ಸಾಮಾನ್ಯವಾಗಿವೆ. ಅವರು ಇನ್ನಷ್ಟು ದಿನ ಬದುಕಿ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುವಂತಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಸಿದ್ದೇಶ್ವರ ಸ್ವಾಮೀಜಿ ಧರ್ಮದ ಚೌಕಟ್ಟನ್ನು ಮೀರಿ ತತ್ವಗಳ ಮೇಲೆ ನಿಂತವರು, ಸಮಾಜದಲ್ಲಿ ಮೌಲ್ಯಗಳನ್ನು ಜೀವಂತವಾಗಿಡಲು ಶ್ರೀಗಳ ಅವಶ್ಯಕತೆ ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ವೈರಾಗ್ಯ ಮೂರ್ತಿ ನಡೆದಾಡುವ ದೇವರು ನಮ್ಮೆಲ್ಲರಿಗೂ ಒಂದಲ್ಲಾ ಒಂದು ರೀತಿ ಮಾರ್ಗದರ್ಶನ ಮಾಡಿ ಪ್ರೇರಣೆ ನೀಡಿದವರು ಸಿದ್ದೇಶ್ವರ ಸ್ವಾಮೀಜಿ. ಸಾರ್ವಜನಿಕ ಬದುಕಿನ ಬಗ್ಗೆ ಸಾರ್ವಜನಿಕ ಬದುಕಿನ ಮೌಲ್ಯಗಳನ್ನು ಕಲಿಸಿದ ಗುರುಗಳು. ನಡೆದಂತೆ ನುಡಿದು ಇತರರಿಗೆ ಆದರ್ಶ ಪ್ರಾಯವಾದಂತಹ ಜೀವನವನ್ನು ನಡೆಸುತ್ತಿದ್ದಾರೆ. ಅವರ ಆರೋಗ್ಯ ಕಳವಳಕಾರಿಯಾಗಿದೆ ಎಂದು ಕೆಲ ದಿನಗಳಿಂದ ನಮಗೆ ಗೊತ್ತಾಗಿದೆ. ಸ್ವಾಮೀಜಿಗಳ ಆಕ್ಸಿಜನ್ ರೇಟ್ ಕಡಿಮೆಯಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ ಕಾರಣ ನಾವು ಧಾವಿಸಿ ಬಂದಿದ್ದೇವೆ. ಶ್ರೀಗಳ ಆರೋಗ್ಯದ ಬಗ್ಗೆ ಪ್ರಧಾನಿ ಮೋದಿ ಅವರು ವಿಚಾರಿಸಿದ್ದಾರೆ ಎಂದು ಹೇಳಿದರು.
ಸ್ವಾಮೀಜಿಗಳು ಚಿಕಿತ್ಸೆ ಪಡೆದುಕೊಳ್ಳಬೇಕೆಂಬ ಅಪೇಕ್ಷೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಸೇರಿದಂತೆ ನಮ್ಮೆಲ್ಲರದ್ದು ಇದೆ. ಶ್ರೀಗಳಂತಹ ಆದರ್ಶ ಸ್ವಾಮೀಜಿ ಸಿಗೋದು ಬಹಳ ಕಷ್ಟ, ಹತ್ತಿಪ್ಪತ್ತು ಕೋಟಿಗೆ ಒಬ್ಬರು ಇಂತಹವರು. ಶ್ರೀಗಳು ಬೇಗ ಗುಣವಾಗಲಿ ಎಂದು ಪಾರ್ಥಿಸುತ್ತೇವೆ. ಪ್ರಧಾನಿಗಳು, ಅಮೀತ್ ಶಾ ಕಳವಳ ವ್ಯಕ್ತಪಡಿಸಿ, ಬೇಗ ಗುಣವಾಗಲಿ ಎಂದು ಹಾರೈಸಿದ್ದಾರೆ. ಶ್ರೀಗಳಿಗೆ ಬೇಕಾದಂತ ಚಿಕಿತ್ಸೆ, ಸೌಲಭ್ಯಗಳನ್ನು ಸಕಲ ಸಹಾಯವನ್ನು ಮಾಡಿ ಎಂದು ಹೇಳಿ ಕಳವಳ ವ್ಯಕ್ತಪಡಿಸಿದ್ದಾರೆ. ಸಮಾಜ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಲ್ಲ ರೀತಿಯ ಸಹಕಾರವನ್ನು ಕೊಡಲಿದ್ದೇವೆ. ಚಿಕಿತ್ಸೆಯ ಬಗ್ಗೆ ವಿನಂತಿ ಮಾಡಿದ್ದೇವೆ, ಚಿಕಿತ್ಸೆಯ ಕುರಿತು ಕೇಳಿದಾಗ ಆದರೆ ಅವರು ಕೈ ಮುಗಿಯುತ್ತಿದ್ದಾರೆ. ಶ್ರೀಗಳ ಸನ್ನೆಯನ್ನು ನೋಡಿದರೆ ಅವರು ಟ್ರೀಟಮೆಂಟ್ ತೆಗೆದುಕೊಳ್ಳಬಾರದು ಎಂದು ನಿರ್ಧರಿಸಿದ್ದಾರೆ ಎಂದು ನನಗೆ ಎನಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:51 am, Sun, 1 January 23