Siddheshwar Swamiji: ನಾನು ಆರೋಗ್ಯವಾಗಿದ್ದೇನೆ; ವದಂತಿಗಳಿಗೆ ತೆರೆ ಎಳೆದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ
ನಡೆದಾಡುವ ದೇವರು ವಿಜಯಪುರ ನಗರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯದ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲ ವದಂತಿಗಳು ಹರಿದಾಡುತ್ತಿದೆ. ಚಳಿಯ ವಾತಾವರಣದಿಂದ ನೆಗಡಿ-ಕೆಮ್ಮು ಶ್ರೀಗಳನ್ನು ಬಾಧಿಸಿದ್ದು ಆಶ್ರಮದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ವಿಜಯಪುರ: ನಗರದ ಜ್ಞಾನ ಯೋಗಾಶ್ರಮದ ಪೀಠಾಧಿಪತಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯದ ಕುರಿತು ಹಲವಾರು ಊಹಾಪೋಹಗಳು ಎದ್ದಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಸ್ವಾಮೀಜಿ ಅವರ ಆರೋಗ್ಯದ ಕುರಿತು ವದಂತಿ ಹರಡಿಸಲಾಗಿದೆ. 83 ವರ್ಷದ ಶ್ರೀ ಸಿದ್ದೇಶ್ವರ ಶ್ರೀಗಳು ಸದ್ಯ ವಿಜಯಪುರ ನಗರದ ಜ್ಞಾನ ಯೋಗಾಶ್ರಮದಲ್ಲಿಯೇ ಇದ್ದಾರೆ. ನಿತ್ಯ ಎಂದಿನಂತೆ ಸ್ನಾನ ಪೂಜೆ ಮಾಡಿರುವ ಶ್ರೀಗಳು ಇಂದೂ ಸಹ ಭಕ್ತರಿಗೆ ದರ್ಶನ ಭಾಗ್ಯ ನೀಡಿದ್ದಾರೆ. ಚಳಿಗಾಲವಿರುವ ಕಾರಣ ಸಹಜವಾದ ನೆಗಡಿ ಕೆಮ್ಮು ಶ್ರೀಗಳನ್ನು ಬಾಧಿಸುತ್ತಿದೆ. ನೆಗಡಿ ಕೆಮ್ಮು ಬಿಟ್ಟು ಇತರೆ ಯಾವುದೇ ಆರೋಗ್ಯ ಸಮಸ್ಯೆ ನಡೆದಾಡುವ ದೇವರಿಗೆ ಇಲ್ಲ.
ಇಂದು(ಡಿ.10) ಆಶ್ರಮದ ಕೊಠಡಿಯಲ್ಲಿದ್ದ ಶ್ರೀ ಸಿದ್ದೇಶ್ವರ ಶ್ರೀಗಳು ಮಾಧ್ಯಮ ಬೆಳವಣಿಗೆಗಳ ಹಾಗೂ ಸುದ್ದಿ ಸಂಗ್ರಹದ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು. ಶ್ರೀಗಳಿಗೆ ಯಾವುದೇ ತೀವ್ರತರದ ಅನಾರೋಗ್ಯ ಇಲ್ಲ, ಸ್ವಾಮೀಜಿಗಳ ಆರೋಗ್ಯ ವಿಚಾರದಲ್ಲಿ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಆಶ್ರಮದಲ್ಲಿರುವ ಇತರೆ ಸ್ಚಾಮೀಜಿಗಳು ಭಕ್ತರಲ್ಲಿ ಮನವಿ ಮಾಡಿಕೊಂಡರು. ಇನ್ನು ಸಾಮಾಜಿಕ ಜಾಲತಾಣಗಳು ಇಲ್ಲದ ವದಂತಿಗೆ ಕಾರಣವಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿ ಸುಳ್ಳು. ಶ್ರೀಗಳಿಗೆ ಯಾವುದೇ ತೊಂದರೆ ಇಲ್ಲ, ಭಕ್ತರು ಯಾವುದೇ ಭಯಕ್ಕೆ ಒಳಗಾಗಬಾರದು ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆ ಸ್ವಾಮೀಜಿಗಳು ಎಂದಿನಂತೆ ಆಶ್ರಮಕ್ಕೆ ಬಂದ ಭಕ್ತರಿಗೆ ದರ್ಶನ ನೀಡಿದ್ಧಾರೆ. ಭಕ್ತರೊಂದಿಗೆ ಮಾತನಾಡಿ ಹಿತನುಡಿಗಳನ್ನು ಸಹ ಹೇಳಿದ್ದಾರೆ. ಕಳೆದ 2022 ರ ಜನೇವರಿ ತಿಂಗಳಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಫಾರ್ಮ್ ಹೌಸ್ನಲ್ಲಿನ ಬಾತ್ ರೂಂನಲ್ಲಿ ಜಾರಿ ಬಿದ್ದಿದ್ದರು. ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮಕ್ಕೆ ಪ್ರವಚನ ಹೇಳಲು ಆಗಮಿಸಿದ್ದ ವೇಳೆ ಅವಘಡ ನಡೆದಿತ್ತು. ಕಾಲು ಜಾರಿ ಬಿದ್ದ ಕಾರಣ ಶ್ರೀಗಳ ಚಪ್ಪೆಗೆ ಪೆಟ್ಟು ಬಿದ್ದಿತ್ತು. ಬಳಿಕ ಅವರನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ಹೇರಿ ಮಠದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದ ಶ್ರೀಗಳು ಮತ್ತೇ ಪ್ರವಚನ ಕಾರ್ಯವನ್ನು ಮುಂದುವರೆಸಿದ್ದರು.
ಕಳೆದ 2022 ರ ಅಕ್ಟೋಬರ್ 12 ರಿಂದ ನವೆಂಬರ್ 13 ರವರೆಗೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಹೊರ ಭಾಗದಲ್ಲಿನ ಶ್ರೀ ಗುರುದೇವಾಶ್ರಮದಲ್ಲಿ ಪ್ರವಚನ ನೀಡಿದ್ದರು. ಪ್ರವಚನ ಕಾರ್ಯಕ್ರಮ ಮುಗಿದ ಬಳಿಕ ಒಂದು ವಾರಕ್ಕೂ ಆಧಿಕ ಕಾಲ ಕಾಖಂಡಕಿಯ ಶ್ರೀ ಗುರುದೇವಾಶ್ರಮದಲ್ಲೇ ಕಾಲ ಕಳೆದಿದ್ದರು. ಅಲ್ಲಿಂದ ಮಹಾರಾಷ್ಟ್ರದ ಕನ್ಹೇರಿ ಮಠಕ್ಕೆ ತೆರಳಿದ್ದರು. ಒಂದು ವಾರದ ಹಿಂದೆ ವಿಜಯಪುರ ನಗರದ ಶ್ರೀ ಜ್ಞಾನ ಯೋಗಾಶ್ರಮದಕ್ಕೆ ಬಂದಿದ್ದಾರೆ. ಸದ್ಯ ಚಳಿಯಿರೋ ಕಾರಣ ಸಹಜವಾದ ನೆಗಡಿ ಕೆಮ್ಮಿನ ತೊಂದರೆ ಕಾಣಿಸಿಕೊಂಡಿದೆ. ಇಷ್ಟಾಗಿಯೂ ದೈನಂದಿನ ಕಾರ್ಯಗಳಲ್ಲಿ, ಪೂಜೆ ಪುನಸ್ಕಾರಗಳಲ್ಲಿ ಶ್ರೀಗಳು ತೊಡಗಿದ್ದಾರೆ. ಜೊತೆಗೆ ಭಕ್ತರನ್ನೂ ಭೇಟಿಯಾಗಿದ್ದಾರೆ.
ಇದನ್ನೂ ಓದಿ:‘ಆರ್ಪಿ ಎಂದರೆ ರಿಷಬ್ ಪಂತ್ ಅಲ್ಲ’; ಬಹುದಿನಗಳ ವದಂತಿ ಬಗ್ಗೆ ಮೌನ ಮುರಿದ ನಟಿ ಊರ್ವಶಿ ರೌಟೇಲಾ
ಒಟ್ಟಾರೆ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯದ ವಿಚಾರದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ವದಂತಿ ಹರಡಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿನ ವದಂತಿ ಸುಳ್ಳಾಗಿದ್ದು ಸ್ವಾಮೀಜಿಗಳು ಎಂದಿನಂತೆ ಭಕ್ತರ ಜೊತೆಗೆ ಬೆರೆತಿದ್ದಾರೆ. ಈ ನಿಟ್ಟಿನಲ್ಲಿ ಭಕ್ತರು ಯಾವುದೇ ಭಯಗೊಳ್ಳಬಾರದು ಎಂದು ಆಶ್ರಮದಿಂದ ಮನವಿ ಮಾಡಿಕೊಳ್ಳಲಾಗಿದೆ.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ