ತಾಯಿ ಕರುಳೇ ಹಾಗೆ ತನ್ನ ಮಕ್ಕಳ ಉನ್ನತಿಗಾಗಿ ಜೀವವೇ ಪಣಕ್ಕಿಟ್ಟು ಏನೆಲ್ಲ ಸಾಹಸ ಮಾಡುತ್ತಾಳೆ. ಇಲ್ಲೊಬ್ಬ ತಾಯಿ ತನ್ನ ಮಗನಿಗೆ ಸರ್ಕಾರಿ ನೌಕರಿ ಸಿಕ್ಕರೆ ಸಾಕು ಸಿಡಿ ಆಡುತ್ತೇನೆ ಎಂದು ನಿಷೇಧಿತ ಸಿಡಿ ಆಡುವ ಹರಕೆ (Sidi Utsava) ಹೊತ್ತಿದ್ದಳು. ಅದರಂತೆ ಆಕೆಯ ಪುತ್ರನಿಗೆ ಸರ್ಕಾರಿ ನೌಕರಿ ಸಿಕ್ಕಿದ್ದರಿಂದ ಸಿಡಿ ಹರಕೆ ತೀರಿಸಲು (Harake) ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಇನ್ನು ನಿಷೇಧಿತ ಸಿಡಿ ಆಡುವ ಕಾರ್ಯ ನಡೆಸುತ್ತಿರುವ ದೇವಸ್ಥಾನದ ಕಮಿಟಿ ನಿರ್ಲಕ್ಷ್ಯದಿಂದಾಗಿ ಇಂದು ಒಂದು ಜೀವವೇ ಬಲಿಯಾಗಿದೆ. ದೇವರ ಹರಕೆ ತೀರಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ತಾಯಿಯ ಕುರಿತು ವರದಿ ಇಲ್ಲಿದೆ ನೋಡಿ. ಮಗನಿಗೆ ಸರ್ಕಾರಿ ನೌಕರಿ ಸಿಕ್ಕರೆ ಸಿಡಿ ಸೇವೆ ಮಾಡುವ ಹರಕೆ ಹೊತ್ತಿದ್ದ ತಾಯಿ (Mother)… ಸಿಡಿ ಹರಕೆ ತೀರಿಸುವಾಗ ಜರುಗಿದ ಅವಘಡ… ಮಗನಿಗಾಗಿ ಜೀವಕೊಟ್ಟ ಅಮ್ಮ…… ಹೌದು ಇಂತಹದ್ದೊಂದು ಹೃದಯ ಕಲಕುವಂತಹ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆ (Vijayapura) ಇಂಡಿ (Indi) ತಾಲೂಕಿನ ತಾಂಬಾ ಗ್ರಾಮದಲ್ಲಿ. ಗ್ರಾಮದ ಆರಾಧ್ಯ ದೈವ ಎನಿಸಿಕೊಂಡಿರುವ ಶ್ರೀ ಮಹಾಲಕ್ಷ್ಮಿ ದೇವಿಯ ಹರಕೆ ತೀರಿಸುವಾಗ ಅವಘಡ ನಡೆದಿದ್ದು, ಓರ್ವ ಮಹಿಳೆ ಬಲಿಯಾಗಿದ್ದಾರೆ. ತಾಂಬಾ ನಿವಾಸಿ ಲಕ್ಷ್ಮೀಬಾಯಿ ಪೂಜಾರಿ ಎಂಬ 55 ವರ್ಷದ ಮಹಿಳೆ ಸಿಡಿಯಾಡಿ ಹರಕೆ ತೀರಿಸುವಾಗ 50 ಅಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ.
ಲಕ್ಷ್ಮಿಬಾಯಿ ಪೂಜಾರಿ ಎಂಬ ಮಹಿಳೆ ತನ್ನ ಮಗ ರಾಯಗೊಂಡನಿಗೆ ಸರ್ಕಾರಿ ನೌಕರಿ ಸಿಕ್ಕರೆ ಸಿಡಿ ಸೇವೆ ಸಲ್ಲಿಸುತ್ತೇನೆ ಎಂದು ಹರಕೆ ಕಟ್ಟಿಕೊಂಡಿದ್ದರಂತೆ. ಅದರಂತೆ ಲಕ್ಷ್ಮೀಬಾಯಿ ಪೂಜಾರಿ ಅವರ ಪುತ್ರ ರಾಯಗೊಂಡನಿಗೆ ಸರ್ಕಾರಿ ನೌಕರಿ ಸಿಕ್ಕಿದ್ದು ಸದ್ಯ ಆತ ವಿಧಾನಸೌಧದಲ್ಲಿ ಸೇವೆ ಮಾಡುತ್ತಿದ್ದಾನೆ. ಮಗ ರಾಯಗೊಂಡನಿಗೆ ನೌಕರಿ ಸಿಕ್ಕಿದ್ದರಿಂದ ಮೊನ್ನೆ ಶನಿವಾರ ಸಿಡಿ ಸೇವೆಯ ಹರಕೆ ತೀರಿಸಲೆಂದು ಸಿಡಿ ಆಡುತ್ತಿದ್ದ ವೇಳೆ ಮೇಲಿಂದ ಬಿದ್ದು ಜೀವ ಕಳೆದುಕೊಂಡಿದ್ದಾರೆ ಲಕ್ಷ್ಮೀಬಾಯಿ.
ಬೆನ್ನಿಗೆ ಕಬ್ಬಿಣದ ಹುಕ್ಕುಗಳನ್ನು ಚುಚ್ಚಿಕೊಂಡು ಅದನ್ನು ಹಗ್ಗದಿಂದ ಕಟ್ಟಿ ಎತ್ತರದ ಕಂಬಕ್ಕೆ ಕಟ್ಟಿರುತ್ತಾರೆ. ಬೆನ್ನಿಗೆ ಕಬ್ಬಿಣದ ಹುಕ್ಕುಗಳನ್ನು ಹಾಕಿ ಆ ಕಂಬಕ್ಕೆ ನೇತಾಡೋ ಮೂಲಕ ಸಿಡಿ ಸೇವೆ ಸಲ್ಲಿಕೆ ಮಾಡಲಾಗುತ್ತದೆ. ಇದೇ ಸೇವೆಯನ್ನು ತಾಂಬಾ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದ ಪಾದಗಟ್ಟೆಯಿಂದ ದೇವಸ್ಥಾನದವರೆಗೂ ಸುಮಾರು 300 ಮೀಟರ್ ಅಂತರ ಇರುವ ಸ್ಥಳದಿಂದ 50 ಅಡಿ ಎತ್ತರದ ಕಂಬಕ್ಕೆ ಜೋತು ಬಿದ್ದು ಸಿಡಿಯಾಡುತ್ತ ಬರುವಾಗ ಆಕಸ್ಮಿಕವಾಗಿ ಹಗ್ಗ ಹರಿದು ಮೇಲಿಂದ ಬಿದ್ದು ಲಕ್ಷ್ಮೀಬಾಯಿ ಸಾವನ್ನಪ್ಪಿದ್ದಾರೆ.
ಸಿಡಿ ಸೇವೆ ಸಲ್ಲಿಕೆ ಮಾಡುವ ವೇಳೆ 50 ಅಡಿಯಿಂದ ಲಕ್ಷ್ಮೀಬಾಯಿ ಪೂಜಾರ ಕೆಳಗೆ ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಆ ವಿಡಿಯೋ ಎಲ್ಲಡೆ ವೈರಲ್ ಆಗಿದೆ. ಈ ನಿಟ್ಟಿನಲ್ಲಿ ಇಂಥ ನಿಷೇಧಿತ ಆಚರಣೆಗಳಿಗೆ ತಡೆ ಹಾಕಬೇಕೆಂದು ಜಿಲ್ಲೆಯ ಜನರು ಒತ್ತಾಯ ಮಾಡಿದ್ಧಾರೆ.
ಕಾನೂನು ಪ್ರಕಾರ ಕೆಲ ಆಚರಣೆಗಳನ್ನು ನಿಷೇಧಿಸಲಾಗಿದೆ. ಅವುಗಳಲ್ಲಿ ಸಿಡಿ ಆಡುವುದು ಅಂದರೆ ಸಿಡಿ ಸೇವೆ ಸಲ್ಲಿಸುವುದು ನಿಷೇಧಿತ ಆಚರಣೆಯಾಗಿದೆ. ಇಂಥ ಅಪಾಯಕಾರಿಯಾದ ಸಿಡಿ ಸೇವೆ ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕದ್ದುಮುಚ್ಚಿ ಆಚರಣೆ ಮಾಡುವುದು ನಡೆದುಕೊಂಡು ಬಂದಿದೆ. ಮೊನ್ನೆ ಶನಿವಾರ ತಾಂಬಾ ಗ್ರಾಮದಲ್ಲಿ ನಡೆದ ಈ ದುರಂತವೇ ಇಂಥ ನಿಷೇಧಿತ ಆಚರಣೆಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ.
ತಾಂಬಾದ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮಂಡಳಿಯೂ ಇಂಥ ಅಪಾಯಕಾರಿ ಆಚರಣೆಗೆ ತಡೆ ನೀಡದೇ ಪ್ರೋತ್ಸಾಹ ಕೊಟ್ಟಿದ್ದು ಸಹ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರೋ ಜಿಲ್ಲಾಡಳಿತ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ ವಿಜಯಮಹಾಂತೇಶ ದಾನಮ್ಮನವರ ನಿನ್ನೆ ತಾಂಬಾ ಗ್ರಾಮದಲ್ಲಿ ನಡೆದ ದುರಂತದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ತಾಂಬಾ ಗ್ರಾಮದಲ್ಲಿ ನಡೆದ ಘಟನೆ ಬಗ್ಗೆ ವರದಿ ತರಿಸಿಕೊಂಡು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಮಹಾಲಕ್ಷ್ಮೀ ದೇವಸ್ಥಾನದವರಿಗೆ ನೋಟಿಸ್ ಜಾರಿ ಮಾಡುತ್ತೇವೆಂದು ಹೇಳಿದ್ದಾರೆ.
ಸಿಡಿ ಆಡುವುದು ಅತ್ಯಂತ ಅಪಾಯಕಾರಿ ಆಗಿರುವುದರಿಂದ ಅದನ್ನು ರಾಜ್ಯ ಸರ್ಕಾರ ಈಗಾಗಲೇ ನಿಷೇಧ ಮಾಡಿದೆ. ಇಂತಹ ನಿಷೇಧಿತ ಸಿಡಿ ಆಡುವ ಕಾರ್ಯಕ್ರಮ ತಾಂಬಾ ಗ್ರಾಮದಲ್ಲಿ ಪ್ರತಿ ಶುಕ್ರವಾರ ನಡೆಯುತ್ತದೆ ಎಂಬುದೇ ಆಶ್ಚರ್ಯಕರವಾಗಿದೆ. ಇಷ್ಟೊಂದು ಜಾಗ್ರತೆ ಇರುವ ಈ ಸಂದರ್ಭದಲ್ಲೂ ಸಿಡಿ ಆಡುವುದು ಅದು ಹೇಗೆ ನಡೆದುಕೊಂಡು ಬಂದಿದೆ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ. ಇಂಥ ಆಚರಣೆಗಳು ನಡೆಯುತ್ತಿದ್ದರೂ ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳು ಇಷ್ಟು ದಿನ ಯಾಕೆ ಗಮನ ಹರಿಸಿಲ್ಲ ಎಂಬುದು ಸಹ ಹಲವಾರು ಸಂಶಯಗಳಿಗೆ ಕಾರಣವಾಗುತ್ತದೆ. ದೇವರ ಹೆಸರಿನಲ್ಲಿ ನಡೆಯುವ ಇಂತಹ ಅಪಾಯಕಾರಿ ಆಚರಣೆಗಳ ವೇಳೆ ಏನಾದರೂ ಘಟನೆಗಳು ಸಂಭವಿಸಿದಾಗಲೇ ಎಚ್ಚೆತ್ತುಕೊಳ್ಳುವ ತಾಲೂಕು, ಜಿಲ್ಲಾ ಆಡಳಿತಗಳು ಇಂತಹ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕಿದೆ.
ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ