ವಿಜಯಪುರ: ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ದಂಪತಿ ತಮ್ಮ ಮಗನ ಚಿಕಿತ್ಸೆಗೆ ಲಕ್ಷ ಲಕ್ಷ ಹಣ ಹೊಂದಿಸಲಾಗದೇ ನಿತ್ಯವೂ ಪರದಾಡುತ್ತಿದ್ದಾರೆ. ಈ ಕುಟುಂಬ ನಿತ್ಯ ದುಡಿದ್ರೇನೆ ಆ ದಿನದ ಸಂಸಾರ ಸಾಗೋದು. ಇಂತಹ ಸ್ಥಿತಿಯಲ್ಲೂ ಆ ದಂಪತಿಯ ಮಗನಿಗೆ ಬಂದೆರಗಿದ ಮಾರಕ ಕಾಯಿಲೆ, ಮತಾಂತರ ನಿರ್ಧಾರಕ್ಕೆ ತಂದು ನಿಲ್ಲಿಸಿತ್ತು. ಆದ್ರೆ ಟಿವಿ9 ಪ್ರಸಾರ ಮಾಡಿದ ವರದಿಯಿಂದ ಆ ಕುಟುಂಬವೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪಟ್ಟಣದ ಈರಣ್ಣ ಹಾಗೂ ಸವಿತಾ ದಂಪತಿಗೆ ಮೂರು ಜನ ಮಕ್ಕಳು. ಇಬ್ಬರು ಹೆಣ್ಣು ಹಾಗೂ ಓರ್ವ ಗಂಡು ಮಗು. ಈರಣ್ಣ ಡಾಬವೊಂದರಲ್ಲಿ ಕೆಲ್ಸ ಮಾಡ್ತಿದ್ರೆ, ಸವಿತಾ ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಕಡುಬಡತನದಲ್ಲಿರೋ ಈ ದಂಪತಿಯ ಮೂರು ವರ್ಷದ ಮಗನಿಗೆ ಎದುರಾಗಿದ್ದು, ಥೆಲಿಸೇಮಿಯಾ ರೋಗ. ಈ ರೋಗ ಗುಣಪಡಿಸಬೇಕು ಅಂದ್ರೆ ಸುಮಾರು 10 ರಿಂದ 15 ಲಕ್ಷ ರೂಪಾಯಿ ಖರ್ಚಾಗುತ್ತೆ ಅಂತ ವೈದ್ಯರು ಹೇಳಿದ್ದಾರೆ. ಹಣಕ್ಕಾಗಿ ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಅಂಗಲಾಚಿದ್ದಾರೆ. ಯಾರಿದಂಲೂ ಹಣದ ಸಹಾಯವಾಗಿಲ್ಲ. ಕೊನೆಗೆ ಮತಾಂತರವಾದ್ರೆ ಹಣದ ಸಹಾಯ ಸಿಗುತ್ತೆ ಅಂತಾ ಅದ್ಯಾರೋ ಹೇಳಿದ ಮಾತು ಕೇಳಿ ಮಗನ ಚಿಕಿತ್ಸೆಗೆ ಹಣ ಹೊಂದಿಸುವ ಸಲುವಾಗಿ ಮತಾಂತರಕ್ಕೆ ಮುಂದಾಗಿದ್ರು.
ದಂಪತಿ ಹಣಕ್ಕಾಗಿ ಮತಾಂತರವಾಗ್ತಿರೋ ಬಗ್ಗೆ ಟಿವಿ9 ತಂಡ ಸುದ್ದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರವಾಗ್ತಿದ್ದಂತೆ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಆಧ್ಯಕ್ಷ, ಮಾಜಿ ಸಚಿವ ಎಂ.ಬಿ ಪಾಟೀಲ್, ಮಗುವಿಗೆ ತಮ್ಮ ಆಸ್ಪತ್ರೆಯಿಂದ ಉಚಿತ ಚಿಕಿತ್ಸೆ ನೀಡಿ ಗುಣಪಡಿಸುವುದಾಗಿ ಭರವಸೆ ನೀಡಿದ್ರು. ಕೂಡಲೇ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೂ ಸೂಚಿಸಿದ್ರು. ಸದ್ಯ ಪುಟ್ಟ ಬಾಲಕನಿಗೆ ಬಿ.ಎಂ ಪಾಟೀಲ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮಗನಿಗೆ ಉಚಿತ ಚಿಕಿತ್ಸೆ ಸಿಗುತ್ತಿರೋದ್ರಿಂದ ದಂಪತಿ ನಿಟ್ಟುಸಿರು ಬಿಟ್ಟಿದ್ದು, ಮತಾಂತರವಾಗುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಒಟ್ನಲ್ಲಿ ಬಡತನದ ಬೇಗೆಯಿಂದ ಬಳಲಿಚಿಕಿತ್ಸೆಗೆ ಹಣ ಹೊಂದಿಸಲಾಗದೆ ಪರದಾಡುತ್ತಿದ್ದ ಕುಟುಂಬದಲ್ಲೀಗ ನಗು ಮೂಡಿದೆ. ಮಗ ಹುಷಾರಾಗ್ತಾನೆ. ಎಲ್ಲರಂತೆ ಈತ ಕೂಡ ಆಡಿ ನಲಿಯುತ್ತಾನೆ ಅನ್ನೋ ಆಶಾ ಭಾವ ದಂಪತಿಯಲ್ಲಿ ಮನೆ ಮಾಡಿದೆ.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ
ಬಿಜೆಪಿಗೆ ಮತ ಹಾಕಬೇಡಿ ಎಂದು ಬೆದರಿಕೆ ಹಾಕಿದ್ದ ಟಿಎಂಸಿ ಶಾಸಕನ ವಿರುದ್ಧ ಚುನಾವಣಾ ಆಯೋಗದ ಕ್ರಮ; ಪ್ರಚಾರದಿಂದ ನಿರ್ಬಂಧ
Published On - 3:42 pm, Wed, 30 March 22