ಬಿಜೆಪಿಗೆ ಮತ ಹಾಕಬೇಡಿ ಎಂದು ಬೆದರಿಕೆ ಹಾಕಿದ್ದ ಟಿಎಂಸಿ ಶಾಸಕನ ವಿರುದ್ಧ ಚುನಾವಣಾ ಆಯೋಗದ ಕ್ರಮ; ಪ್ರಚಾರದಿಂದ ನಿರ್ಬಂಧ
ಈ ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಯಾಗುತ್ತಿದ್ದಂತೆ ಮತ್ತು ತಮಗೆ ಚುನಾವಣಾ ಪ್ರಚಾರದಿಂದ ನಿರ್ಬಂಧ ಹೇರಲಾಗಿದೆ ಎಂಬುದು ಗೊತ್ತಾಗುತ್ತಿದ್ದಂತೆ ಶಾಸಕ ನರೇನ್ ಚಕ್ರಬರ್ತಿ ಉಲ್ಟಾ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಹಳೇಯದು ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ(West Bengal) ಒಂದು ಲೋಕಸಭಾ ಕ್ಷೇತ್ರ ಮತ್ತು ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 12ರಂದು ಉಪಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ಟಿಎಂಸಿ ಶಾಸಕ ನರೇನ್ ಚಕ್ರಬರ್ತಿ, ಬಿಜೆಪಿ ಬೆಂಬಲಿಗರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ‘ನೀವೆಲ್ಲ ಬಿಜೆಪಿಗೆ ಮತ ಹಾಕಿದರೆ ತೊಂದರೆಗೆ ಒಳಗಾಗಬೇಕಾಗುತ್ತದೆ. ಬಿಜೆಪಿ ಪಕ್ಷಕ್ಕೆ ಮತ ಹಾಕದೆ ಇದ್ದವರು ಮಾತ್ರ ಈ ರಾಜ್ಯದಲ್ಲಿ ಉಳಿದುಕೊಳ್ಳಬಹುದು. ಅಂಥವರಿಗೆ ಉದ್ಯೋಗ ಸಿಗುತ್ತದೆ, ಬೇಕಾದವರು ಸ್ವಂತ ಉದ್ಯಮ ಮಾಡಬಹುದು. ಅದಕ್ಕೆ ಟಿಎಂಸಿ ಬೆಂಬಲವನ್ನೂ ನೀಡುತ್ತದೆ’ ಎಂದು ಬಹಿರಂಗ ಸಭೆಯೊಂದರಲ್ಲಿ ಹೇಳಿದ್ದರು. ಈ ಮೂಲಕ ಬಿಜೆಪಿಗೆ ಮತ ಹಾಕುವವರಿಗೆ ಇದ್ಯಾವುದೂ ಸಿಗುವುದಿಲ್ಲ, ತೊಂದರೆ ಗ್ಯಾರಂಟಿ ಎಂಬರ್ಥದ ಮಾತುಗಳನ್ನು ಹೇಳಿದ್ದರು. ಈ ವಿಡಿಯೋವನ್ನು ಪಶ್ಚಿಮ ಬಂಗಾಳ ಬಿಜೆಪಿ ಸಹ ಉಸ್ತುವಾರಿ ಅಮಿತ್ ಮಾಳ್ವಿಯಾ ಶೇರ್ ಮಾಡಿಕೊಂಡು, ಗಮನಹರಿಸುವಂತೆ ಚುನಾವಣಾ ಆಯೋಗ (Election Commission)ಕ್ಕೆ ಮನವಿ ಮಾಡಿದ್ದರು.
ಇದೀಗ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ತೃಣಮೂಲ ಕಾಂಗ್ರೆಸ್ ಶಾಸಕ ನರೇನ್ ಚಕ್ರಬರ್ತಿ ಇನ್ನು ಒಂದು ವಾರಗಳ ಕಾಲ ಉಪಚುನಾವಣಾ ಪ್ರಚಾರ ನಡೆಸುವಂತಿಲ್ಲ ಎಂದು ಹೇಳಿದೆ. ಅಂದರೆ ಚುನಾವಣಾ ಪ್ರಚಾರದಿಂದ ಅವರಿಗೆ ನಿರ್ಬಂಧ ಹೇರಿದೆ. ವಿಡಿಯೋ ಗಮನಕ್ಕೆ ಬಂದಿದೆ. ಅಲ್ಲಿ ಶಾಸಕರು ಹೇಳಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹೀಗಾಗಿ ಮಾರ್ಚ್ 30ರ ಬೆಳಗ್ಗೆ 10ಗಂಟೆಯಿಂದ ಏಪ್ರಿಲ್ 6ರ ರಾತ್ರಿ 8ಗಂಟೆಯವರೆಗೆ ನರೇನ್ ಚಕ್ರಬರ್ತಿ, ಉಪಚುನಾವಣೆ ಸಂಬಂಧಿತ ಯಾವುದೇ ಸ್ವರೂಪದ ಪ್ರಚಾರ ಕಾರ್ಯದಲ್ಲೂ ಪಾಲ್ಗೊಳ್ಳುವಂತಿಲ್ಲ. ಅಂದರೆ ಸಾರ್ವಜನಿಕ ಸಭೆ, ಸಾರ್ವಜನಿಕ ಚುನಾವಣಾ ಮೆರವಣಿಗೆ, ರ್ಯಾಲಿಗಳು, ರೋಡ್ ಶೋಗಳು, ಸಂದರ್ಶನ, ಟಿವಿ ಡಿಬೇಟ್ಗಳಲ್ಲಿ ಶಾಸಕ ನರೇನ್ ಭಾಗವಹಿಸುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಅಷ್ಟೇ ಅಲ್ಲ, ಚಕ್ರಬರ್ತಿ ಹೇಳಿಕೆಗಳು ಪ್ರಜಾಪ್ರತಿನಿಧಿ ನಿಬಂಧನೆಯ ಸ್ಪಷ್ಟ ಉಲ್ಲಂಘನೆ ಎಂದೂ ಹೇಳಿದೆ.
ಶಾಸಕನ ಉಲ್ಟಾ ಹೇಳಿಕೆ
ಇನ್ನು ಈ ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಯಾಗುತ್ತಿದ್ದಂತೆ ಮತ್ತು ತಮಗೆ ಚುನಾವಣಾ ಪ್ರಚಾರದಿಂದ ನಿರ್ಬಂಧ ಹೇರಲಾಗಿದೆ ಎಂಬುದು ಗೊತ್ತಾಗುತ್ತಿದ್ದಂತೆ ಶಾಸಕ ನರೇನ್ ಚಕ್ರಬರ್ತಿ ಉಲ್ಟಾ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಹಳೇಯದು. ಈಗ ಮಾತನಾಡಿದ್ದಲ್ಲ. ಚುನಾವಣಾ ಆಯೋಗದ ಆದೇಶ ನನಗೆ ತಲುಪಿಲ್ಲ. ಹಾಗೊಮ್ಮೆ ಪ್ರಚಾರ ಕಾರ್ಯದಿಂದ ನಿರ್ಬಂಧ ವಿಧಿಸಿದ್ದೇ ಆದಲ್ಲಿ, ನಾನದನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಬಿಜೆಪಿ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸದಾ ಏನಾದರೂ ಮಾಡುತ್ತಲೇ ಇರುತ್ತದೆ. ಸದನದಲ್ಲೂ ಟಿಎಂಸಿ ಶಾಸಕರ ಘನತೆಯನ್ನು ಕುಗ್ಗಿಸುವ ಆರೋಪಗಳನ್ನು ಬಿಜೆಪಿ ಜನಪ್ರತಿನಿಧಿಗಳು ಮಾಡುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ.
ವೈರಲ್ ಆಗಿದ್ದ ವಿಡಿಯೋ ಇಲ್ಲಿದೆ:
TMC’s Pandaveswar (Asansol) MLA Naren Chakraborty, is seen issuing open threats to BJP voters and supporters, asking them not to come out and vote, or else face consequences. Such criminals should be behind bars but in Bengal Mamata Banerjee patronises them.
ECI must take note. pic.twitter.com/5KiPsPZHVG
— Amit Malviya (@amitmalviya) March 29, 2022
ಇದನ್ನೂ ಓದಿ: ಬಿಜೆಪಿಗೆ ಮತ ಹಾಕಿದರೆ ನಿಮಗೆ ತೊಂದರೆ ಗ್ಯಾರಂಟಿ ಎಂದು ಬೆದರಿಕೆ ಹಾಕಿದ ಟಿಎಂಸಿ ಶಾಸಕ; ವಿಡಿಯೋ ಶೇರ್ ಮಾಡಿದ ಬಿಜೆಪಿ ನಾಯಕ
Published On - 2:58 pm, Wed, 30 March 22