ಅಪ್ಪನದು ವಾಹನಗಳಿಗೆ ಗ್ರೀಸಿಂಗ್ ಮಾಡುವ ಕೆಲಸ, ಮಗಳದೋ ಅಂತಾರಾಷ್ಟ್ರೀಯ ಮಟ್ಟದ ಸಾಧನೆ -ಇದಕ್ಕೆ ಸಾಥ್​ ನೀಡಿದ್ದು ಟಿವಿ9

|

Updated on: May 23, 2023 | 10:33 AM

ನಿಸ್ಸಹಾಯಕ ಪಾಯಲ್ ನೆರವಿಗೆ ಬಂದಿದ್ದು ಟಿವಿ9 ಮಾರುವೇಷ ಕಾರ್ಯಕ್ರಮ. ಮಾರುವೇಷ ಕಾರ್ಯಕ್ರಮದಿಂದ ಪಾಯಲ್ ಗೆ ಸೈಕಲ್ ಜೊತೆಗೆ ಧನ ಸಹಾಯವೂ ಆಯಿತು. ಇದರಿಂದ ಆಕೆ ಜಿಲ್ಲೆಯಂದ ರಾಜ್ಯ ಮಟ್ಟಕ್ಕೆ, ರಾಷ್ಟ್ರ ಮಟ್ಟಕ್ಕೆ, ಮುಂದೆ ಅಂತರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗುವಂತಾಗಿದೆ.

ಅಪ್ಪನದು ವಾಹನಗಳಿಗೆ ಗ್ರೀಸಿಂಗ್ ಮಾಡುವ ಕೆಲಸ, ಮಗಳದೋ ಅಂತಾರಾಷ್ಟ್ರೀಯ ಮಟ್ಟದ ಸಾಧನೆ -ಇದಕ್ಕೆ ಸಾಥ್​ ನೀಡಿದ್ದು ಟಿವಿ9
ಅಪ್ಪನದು ವಾಹನಗಳಿಗೆ ಗ್ರೀಸಿಂಗ್ ಮಾಡುವ ಕೆಲಸ, ಮಗಳದೋ ಅಂತಾರಾಷ್ಟ್ರೀಯ ಮಟ್ಟದ ಸಾಧನೆ
Follow us on

ಒಂದು ಸಾಧನೆಯ ಹಿಂದೆ ಅಪಾರ ಪರಿಶ್ರಮ ಇರುತ್ತದೆ. ಸಾಧನೆಗೆ ಯಾವುದೂ ಅಡ್ಡಿ ಆಗಲ್ಲ; ಆಗಬಾರದು. ಸಾಧನೆ ಮಾಡುವ ಮನಸ್ಸು ದೃಢ ಸಂಕಲ್ಪ ಸತತ ಪ್ರಯತ್ನ ಮುಖ್ಯ. ಇಷ್ಟರ ಜೊತೆಗೆ ಸಾಧನೆ ಮಾಡುವವರ ಬೆನ್ನಿಗೆ ಪ್ರೋತ್ಸಾಹದ ಸಹಾಯವಿದ್ದರೆ ಯಾವುದೂ ಕಷ್ಟದ ಕೆಲಸವಲ್ಲ. ಈ ಸಾಲಿಗೆ ಸೇರುತ್ತಾಳೆ ಈ ಬಾಲಕಿ. ಬಡತನದ ಬೇಗೆಯಲ್ಲಿ ಬೆಳೆದ ಈಕೆ ಸಾಧನೆ ಮಾಡಬೇಕೆಂಬ ಕನಸು ಕಂಡಿದ್ದಳು. ಕನಸು ನನಸು ಮಾಡಲು ಕಠಿಣ ಶ್ರಮ ಹಾಕಿದ್ದಳು. ಆಕೆಯ ಶ್ರಮಕ್ಕೆ ಕನ್ನಡ ನಾಡಿನ ನಂಬರ್ ಒನ್ ನ್ಯೂಸ್ ಚಾನೆಲ್ ಟಿವಿ9 ಸಾಥ್ ನೀಡಿದ್ದು, ನಿರಂತರವಾಗಿ ಆಕೆಗೆ ಆಸರೆಯಾಗಿ ನಿಂತಿದ್ದೇ ಟಿವಿ9 ಸುದ್ದಿವಾಹಿನಿ (TV9 Impact). ಬಡತನದಲ್ಲಿದ್ದ ಪ್ರತಿಭೆ ಇಂದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಭಾರತ ದೇಶವನ್ನು ಪ್ರತಿನಿಧಿಸುವುದಕ್ಕೆ ಕಾರಣವಾಗಿದೆ. ಡಿಟೇಲ್ಸ್ ಇಲ್ಲಿದೆ ನೋಡಿ. ಅದು ಕಡು ಬಡತನದಲ್ಲಿದ್ದ ಪುಟ್ಟ ಕುಟುಂಬ. ಗಂಡ ಹೆಂಡತಿ ಮೂವರು ಮಕ್ಕಳ ಸಂಸಾರ. ವಿಜಯಪುರ (Vijayapura) ತಾಲೂಕಿನ ಭೂತನಾಳ ತಾಂಡಾದ ವಾಸಿಗಳು (Bhutanala thanda girl). ಮನೆಯ ಯಜಮಾನ ಖುಷಿಲಾಲ್ ಚೌವ್ಹಾಣ್ ಟ್ರಕ್ ಹಾಗೂ ಇತರೆ ವಾಹನಗಳಿಗೆ ಗ್ರೀಸಿಂಗ್ ಮಾಡುವ ಕೆಲಸ ಮಾಡಿ ಸಂಸಾರ ನಡೆಸುತ್ತಾರೆ. ಖುಷಿಲಾಲ್ ಪತ್ನಿ ಸುಶೀಲಾಬಾಯಿ ವಿಜಯಪುರ ನಗರದ ತರಕಾರಿ ಮಾರುಕಟ್ಟೆಗಳಲ್ಲಿ ತರಕಾರಿ ಮಾರಾಟ ಮಾಡಿ ಪತಿಗೆ ಸಾಥ್ ನೀಡುತ್ತಾಳೆ. ಪುತ್ರ ನಿತ್ಯ ಕೂಲಿ ಕೆಲಸ ಮಾಡುತ್ತಾನೆ. ಇವರ ಮೊದಲ ಮಗಳೇ ಪಾಯಲ್ ಚೌವ್ಹಾಣ್ ವಿಜಯಪುರ ನಗರದ ಕ್ರೀಡಾ ಶಾಲಾ ವಿದ್ಯಾರ್ಥಿನಿ. ಕಿರಿಯ ಪುತ್ರಿ ಕೋಕಿಲಾ ಸಹ ಇದೇ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ.

ಇಂಥ ಕಡು ಬಡತನದಲ್ಲಿ ಬೆಳೆದ ಪಾಯಲ್ ಉತ್ತಮ ಸೈಕ್ಲಿಸ್ಟ್ ಆಗಿ ರೂಪಗೊಂಡಳು. ಆದರೆ ವಿವಿಧ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಭಾಗಿಯಾಗಲು ಪಾಯಲ್ ಚೌವ್ಹಾಣ್ ಬಳಿ ಉತ್ತಮ ಸೈಕಲ್ ಇರಲಿಲ್ಲ. ಆಕೆಯ ತಂದೆ ಖುಷಿಲಾಲ್ ಗೆ ಸೈಕಲ್ ಕೊಡಿಸುವಷ್ಟು ಶಕ್ತಿ ಇರಲಿಲ್ಲಾ. ಇಷ್ಟರ ಮಧ್ಯೆ ಈ ಬಾಲಕಿ ಬೇರೆಯವರ ಸೈಕಲ್ ಪಡೆದು 2018 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಫ್ ನ ಸ್ಪರ್ಧೆಯ ಅಂಡರ್ ಫೋರ್ಟೀನ್ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಕಂಚಿನ ಮದಕ ಪಡೆದಳು.

ಅದೇ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಅಂಡರ್ ಸಿಕ್ಸಟೀನ್ ಟೈಮ್ ಟ್ರಯಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಳು. ಬಳಿಕ 2018 ರ ನವೆಂಬರ್ ನಲ್ಲಿ ಹರಿಯಾನಾ ರಾಜ್ಯದ ಕುರುಕ್ಷೇತ್ರದಲ್ಲಿ ನಡೆದ 23ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಹಾಗೂ 10 ಕಿಲೋ ಮೀಟರ್ ವೈಯಕ್ತಿಕ ಟೈಮ್ ಟ್ರಯಲ್ ಇವೆಂಟ್ ನಲ್ಲಿ ಬೆಳ್ಳಿ ಪದಕ ಪಡೆದು ಎರಡನೇಯ ಸ್ಥಾನ ಪಡೆದಿದ್ದಳು.

2019 ರ ಜನೇವರಿ ತಿಂಗಳಲ್ಲಿ ನೆರೆಯ ಬಾಗಲಕೋಟೆ ಜಿಲ್ಲೆಯಲ್ಲಿ‌ ನಡೆದ 11ನೇ ರಾಜ್ಯ ಮಟ್ಟದ ಟ್ರ್ಯಾಕ್ ಸೈಕಲ್ ಚಾಂಪಿಯನ್ ಶಿಪ್​​ ನಲ್ಲಿ ಭಾಗವಹಿಸಿದ್ದ ಪಾಯಲ್ ಅಂಡರ್ 14 ವೈಯಕ್ತಿಕ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಒಂದು ಬೆಳ್ಳಿ ಪದಕ ಹಾಗೂ ಅಂಡರ್ 14 ವೈಯಕ್ತಿಕ ಪರ್ಸ್ಯೂಟ್ ನಲ್ಲಿ ಒಂದು ಬೆಳ್ಳಿ ಪದಕ ಪಡೆದಿದ್ದಳು. 2019 ಡಿಸೆಂಬರ್ ನಲ್ಲಿ ವಿಜಯಪುರ ನಗರದಲ್ಲಿ ನಡೆದ 12 ನೇ ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ ಶಿಫ್ ನಲ್ಲಿ ಭಾಗಿಯಾಗಿ ಅಂಡರ್ 14 ವೈಯಕ್ತಿಕ ಪರ್ಸ್ಯೂಟ್ ನಲ್ಲಿ ಒಂದು ಚಿನ್ನದ ಪದಕ ಹಾಗೂ ಅಂಡರ್ 16 ಟೈಮ್ ಟ್ರಯಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕ ಗಳಿಸಿದ್ದಳು.

ಸ್ವಂತ ಸೈಕಲ್ ಇಲ್ಲದೇ ವಿವಿಧ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಗೆದ್ದು ಬೀಗಿದ ಪಾಯಲ್ ಚೌವ್ಹಾಣ್ ಬಗ್ಗೆ ಟಿವಿ9 ಗಮನ ಹರಿಸಿತ್ತು. 2019 ರಲ್ಲಿ ಟಿವಿ9 ಮಾರುವೇಷದ ಮೂಲಕ ಪಾಯಲ್ ಬಗ್ಗೆ ಸುದ್ದಿ ಬಿತ್ತರ ಮಾಡಿದ ಕಾರಣ ಆಕೆಗೆ ಟಿವಿ9 ವೀಕ್ಷಕರಿಂದ ಧನ ಸಹಾಯ ಸಿಕ್ಕಿತು. ಬಳ್ಳಾರಿಯ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರು 7.25 ಲಕ್ಷ ರೂಪಾಯಿ ಮೌಲ್ಯದ ಸೈಕಲ್ ನನ್ನು ಕೊಡುಗೆಯಾಗಿ ನೀಡಿದರು. ಸೈಕಲ್ ಇಲ್ಲದೇ ಪರದಾಡುತ್ತಿದ್ದ ಪಾಯಲ್ ಕೈಗೆ ಉತ್ತಮ ಸೈಕಲ್ ಸಿಕ್ಕಿತ್ತು. ಪಾಯಲ್ ಸಂತಸಕ್ಕೆ ಪಾರವೇ ಇರಲಿಲ್ಲಾ.

ಯಾವಾಗ ಪಾಯಲ್ ಕೈಗೆ ಆಕೆಯದ್ದೇ ಸೈಕಲ್ ಸಿಕ್ಕಿತೋ ಆಗ ಆಕೆಯ ಗೆಲುವಿನ ಆಭಿಯಾನ ಹೆಚ್ಚುತ್ತಲೇ ಹೋಯ್ತು. 2020 ರಲ್ಲಿ ಮಹಾಮಾರಿ ಕೊರೊನಾ ಕಾರಣದಿಂದ ಸೈಕ್ಲಿಂಗ್ ಸ್ಪರ್ಧೆಗಳು ನಡೆದಿರಲಿಲ್ಲ. ಬಳಿಕ 2021 ರ ಮಾರ್ಚ್ ತಿಂಗಳ 27 ರಿಂದ 31 ರವರೆಗೆ ಹೈದರಾಬಾದಿನಲ್ಲಿ ನಡೆದ ರಾಷ್ಟ್ರ ಮಟ್ಟದ 49 ನೇ ಸಬ್ ಜ್ಯೂನಿಯರ್ ಸೈಕ್ಲಿಂಗ್ ಟ್ರ್ಯಾಕ್ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಳು.

ನಂತರ ಪಾಯಲ್ ಚೌವ್ಹಾಣ್ ಪಂಜಾಬಿನ ಪಟಿಯಾಲಾದಲ್ಲಿರೋ ಕೇಂದ್ರ ಸರ್ಕಾರ ಸ್ವಾಮ್ಯದ ಎನ್ ಸಿ ಓ (National Centres of Excellence ) ನ್ಯಾಷನಲ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ ನಲ್ಲಿ ಸೈಕ್ಲಿಂಗ್ ತರಬೇತಿ ಪಡೆದು ರಾಷ್ಟ್ರ ಮಟ್ಟದ ಸೈಕ್ಲಿಸ್ಟ್ ಆಗಿ ರೂಪುಗೊಂಡಳು. ಪಟಿಯಾಲಾದ ಎನ್ ಸಿ ಓ ನಲ್ಲಿ ತರಬೇತಿ ಪಡೆಯುತ್ತಲೇ 2021 ರ ದಸರಾ ಪ್ರಯುಕ್ತ ಮೈಸೂರಿನಲ್ಲಿ ನಡೆದ ಸಿಎಂ ಕಪ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಳು.

ಬಳಿಕ ಅದೇ ಮೈಸೂರಿನಲ್ಲಿ 2021 ರ ಅಕ್ಟೋಬರ್ 22 ಹಾಗೂ 23 ರಂದು ಎರಡು ದಿನಗಳ ಕಾಲ ನಡೆದ 13 ನೇ ರಾಜ್ಯ ಮಟ್ಟದ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ 10 ಕಿಲೋ ಮೀಟರ್ ಟೈಂ ಟ್ರಯಲ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾಳೆ. 2021 ರ ನವೆಂಬರ್ 13 ರಂದು ಬೆಳಗಾವಿ ಜಿಲ್ಲೆ ಚಂದರಗಿಯ ಕ್ರೀಡಾ ಶಾಲೆ ಆಯೋಜಿಸಿದ್ದ 17 ನೇ ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾಳೆ.

ಬಳಿಕ 2023 ರಲ್ಲಿ ಮಹಾರಾಷ್ಟ್ರದ ನಾಸಿಕ್ ಸಿನ್ನರ್ ನಲ್ಲಿ ನಡೆದ ನ್ಯಾಷನಲ್ ಲೆವೆಲ್ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದ ಪಡೆದಳು. ನಂತರ ಇದೇ 2023 ರ ಜೂನ್ 7 ರಿಂದ 13 ರವರೆಗೆ ಢೈಲ್ಯಾಂಡ್ ದೇಶದಲ್ಲಿ ನಡೆಯುವ ಅಂತರಾಷ್ಟ್ರೀಯ ಏಷ್ಯಾ ಕಪ್ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ. ಈ ಅಂತರಾಷ್ಟ್ರೀಯ ಚಾಂಪಿಯನ್ ಶಿಪ್ ಗಾಗಿ ಕರ್ನಾಟಕದಿಂದ ಕೇವಲ ಇಬ್ಬರು ಸೈಕ್ಲಿಸ್ಟ್ ಗಳು ಮಾತ್ರ ಆಯ್ಕೆಯಾಗಿದ್ದು ಅದರಲ್ಲಿ ವಿಜಯಪುರ ಜಿಲ್ಲೆಯ ಪಾಯಲ್ ಚೌವ್ಹಾಣ್ ಒಬ್ಬಳಾಗಿದ್ದಾಳೆ. ಇನ್ನೋರ್ವ ಬಾಗಲಕೋಟೆ ಜಿಲ್ಲೆ ಜಮಖಂಡಿಯ ಅನುಪಮಾ ಬೋಳೆದ ಆಯ್ಕೆಯಾಗಿದ್ದಾಳೆ. ವಿಜಯಪುರ ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟ ಹಾಗೂ ಇದೀಗಾ ಅಂತರಾಷ್ಟ್ರ ಮಟ್ಟದ ಸ್ಪರ್ದೆಗಳಿಗೆ ಆಯ್ಕೆಯಾಗಿದ್ದು ಟಿವಿ9 ಸುದ್ದಿವಾಹಿನಿಯ ಸಹಾಯದಿಂದ ಎಂದು ಸ್ವತಃ ಪಾಯಲ್ ಚೌವ್ಹಾಣ್ ಸಂತಸವನ್ನು ವ್ಯಕ್ತಪಡಿಸಿದ್ದಾಳೆ.

2019 ರ ಮುಂಚೆ ನಮ್ಮ ಮಗಳಿಗೆ ಒಂದು ಸೈಕಲ್ ಸಹ ಕೊಡಿಸಲು ಸಾದ್ಯವಾಗಲೇ ಕೈಚೆಲ್ಲಿ ಕುಳಿತಿದ್ದೇವು, ಬಡತನ ನಮಗೆ ಶಾಪವಾಗಿತ್ತು. ನಮ್ಮ ಮಗಳ ಬಳಿ ಪ್ರತಿಭೆಯಿದ್ದರೂ ಸೌಕರ್ಯ ಇರದ ಕಾರಣ ಆಕೆಯ ಕ್ರೀಡಾ ಜೀವನದ ಮೇಲೆ ಕರಿಛಾಯೆ ಆವರಿಸಿತ್ತು. ನಿತ್ಯ ಮನೆ ಮಂದಿ ಒಂದು ಹೊತ್ತಿನ ಊಟಕ್ಕಾಗಿ ಕಷ್ಟ ಪಡುವ ವೇಳೆ ನಾವು ಹೇಗೆ ಲಕ್ಷಾಂತರ ರೂಪಾಯಿ ಮೌಲ್ಯದ ಸೈಕಲ್ ಕೊಡಿಸುವುದು ಹೇಗೆ ಎಂದು ಚಿಂತೆ ಮಾಡಿ ನಿಸ್ಸಹಾಯಕರಾಗಿ ಬಿಡುತ್ತಿದ್ದೇವು. ಆಗ ನಮ್ಮ ಮಗಳ ನೆರವಿಗೆ ಬಂದಿದ್ದು ಟಿವಿ9 ಅವರ ಮಾರುವೇಷ ಕಾರ್ಯಕ್ರಮ.

ಮಾರುವೇಷ ಕಾರ್ಯಕ್ರಮದಿಂದಲೇ ಪಾಯಲ್ ಗೆ ಸೈಕಲ್ ಜೊತೆಗೆ ಧನ ಸಹಾಯವೂ ಆಯಿತು. ಇದರಿಂದ ಆಕೆ ಜಿಲ್ಲೆಯಂದ ರಾಜ್ಯ ಮಟ್ಟಕ್ಕೆ, ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ, ರಾಷ್ಟ್ರಮಟ್ಟದಿಂದ ಅಂತರಾಷ್ಟ್ರ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗುವಂತಾಗಿದೆ. ಇಂದು ನಮ್ಮ ಮಗಳು ಪಾಯಲ್ ದೇಶದಿಂದ ವಿದೇಶಕ್ಕೆ ಹಾರಿ ಹೋಗಿ ಸ್ಪರ್ದೆ ಮಾಡಲಿದ್ದಾಳೆ. ಥೈಲ್ಯಾಂಡ್ ನಲ್ಲಿ ನಡೆಯೋ ಸ್ಪರ್ದೆಯಲ್ಲಿ ಆಕೆ ಗೆದ್ದು ಬರಲಿ ಎಂದು ಪಾಯಲ್ ಚೌವ್ಹಾಣ್ ಳ ಇಡೀ ಕುಟುಂಬ

ಸದ್ಯ ಸೈಕ್ಲಿಸ್ಟ್ ಪಾಯಲ್ ಚೌವ್ಹಾಣ್ ಕುಟುಂಬದಲ್ಲಿ ಖುಷಿ ಮನೆ ಮಾಡಿದೆ. ಏನೂ ಇಲ್ಲದೇ ಬಡತನದಲ್ಲೇ ಪರದಾಡುತ್ತಿದ್ದ ಪಾಯಲ್ ಚೌವ್ಹಾಣ್ ಇಂದು ಅಂತಾರಾಷ್ಟ್ರ ಮಟ್ಟದ ಸೈಕ್ಲಿಸ್ಟ್ ಆಗಿ ರೂಪುಗೊಂಡಿದ್ದಾಳೆ. ಜೂನ್ ನಲ್ಲಿ ಢೈಲ್ಯಾಂಡ್ ದೇಶದಲ್ಲಿ ನಡೆಯುವ ಅಂತರಾಷ್ಟ್ರೀಯ ಏಷ್ಯಾ ಕಪ್ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಪಾಯಲ್ ಚೌವ್ಹಾಣ್ ಉತ್ತಮ ಸಾಧನೆ ಮಾಡಲಿ. ಅಲ್ಲಿ ಚಿನ್ನದ ಪದಕ ಗೆದ್ದು ಭಾರತ ದೇಶದ ಕೀರ್ತಿ ಪತಾಕೆಯನ್ನು ಹಾರಿಸಲಿ ಎಂಬುದು ಟಿವಿ9 ಸುದ್ದಿವಾಹಿನಿಯ ಹಾಗೂ ಮಾರುವೇಷ ತಂಡದ ಶುಭಕೋರಿಕೆಯಾಗಿದೆ. ಸ್ಪರ್ದೆಯಲ್ಲಿ ಗೆಲ್ಲುವ ಮೂಲಕ ಭಾರತ ದೇಶದ ಜೊತೆಗೆ ಜಿಲ್ಲೆಯ ಹೆಸರೂ ಸಹ ಉತ್ತುಂಗಕ್ಕೆ ಬರಲಿ. ಟಿವಿ9 ಇಡೀ ತಂಡದ ಪರವಾಗಿ ಪಾಯಲ್ ಗೆ ಆಲ್ ದಿ ಬೆಸ್ಟ್.

ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ