ಟಿವಿ9 ಇಂಪ್ಯಾಕ್ಟ್; ಐತಿಹಾಸಿಕ ಭೂತನಾಳ ಕೆರೆಗೆ ಹರಿದು ಬಂತು ನೀರು
ಕಳೆದ ಫೆಬ್ರವರಿಯಲ್ಲಿ ಟಿವಿ9 ಸುದ್ದಿವಾಹಿನಿಯಲ್ಲಿ ವಿಜಯಪುರ ನಗರದ 7 ವಾರ್ಡ್ಗಳ ಕುಡಿಯುವ ನೀರಿನ ಸಮಸ್ಯೆ ಹಾಗೂ ಈ ವಾರ್ಡ್ಗಳಿಗೆ ನೀರು ಪೂರೈಕೆ ಮಾಡುವ ಐತಿಹಾಸಿಕ ಭೂತನಾಳ ಕೆರೆ ಬತ್ತಿ ಹೋಗಿದ್ದರ ಕುರಿತು ವರದಿ ಬಿತ್ತರವಾಗಿತ್ತು. ನಮ್ಮ ವರದಿ ಬೆನ್ನಲ್ಲೇ ಇದೀಗ ಬತ್ತಿ ಹೋಗಿದ್ದ ಭೂತನಾಳ ಕೆರೆಗೆ ಕೃಷ್ಣೆ ಹರಿದು ಬಂದಿದ್ದಾಳೆ.
ವಿಜಯಪುರ, ಫೆ.23: ಕಳೆದ ಫೆಬ್ರವರಿ 10 ರಂದು ವಿಜಯಪುರ(Vijayapura) ನಗರದ ಹೊರ ಭಾಗದಲ್ಲಿರುವ ಭೂತನಾಳ ಕೆರೆಯು ಬರಗಾಲದ ಕಾರಣ ಬತ್ತಿ ಹೋಗಿದ್ದು ಹಾಗೂ ಈ ಕೆರೆಯಿಂದ ನಗರದ 7 ವಾರ್ಡ್ಗಳಿಗೆ ನೀರು ಪೂರೈಕೆ ಆಗದೇ ಜನರಿಗೆ ತೀವ್ರ ಸಮಸ್ಯೆಯಾಗಿದ್ದರ ಕುರಿತು ಟಿವಿ9 ನಲ್ಲಿ ವರದಿ ಬಿತ್ತರ ಮಾಡಲಾಗಿತ್ತು. ನಮ್ಮ ವಾಹಿನಿಯ ವರದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್, ನಗರ ಶಾಸಕ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಹಾಗೂ ಆಧಿಕಾರಿಗಳು ಗಮನ ಹರಿಸಿದರು. ಬಿರು ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದೆಂದು ಕ್ರಮ ತೆಗೆದುಕೊಳ್ಳಲಾಗಿದೆ.
ಬರಿದಾದ ಭೂತನಾಳ ಕೆರೆಗೆ ಕೃಷ್ಣಾನದಿಯಿಂದ ಮುಳವಾಡ ಏತ ನೀರಾವರಿಯ ತಿಡಗಂದಿ ವಯಾಡೆಕ್ಟ್ನಿಂದ ನೀರನ್ನು ಭೂತನಾಳ ಕೆರೆಗೆ ಭರಿಸಲಾಗುತ್ತಿದೆ. ಭೂತನಾಳ ಕೆರೆಯ ಸಮೀಪದ ವಾಯಡೆಕ್ಟ್ ಕಾಲುವೆಯ ಮೇಲ್ಬಾಗದಲ್ಲಿ ಕೊರೆದು ಸೈಪನ್ ಹಾಗೂ ಪಂಪ್ ಸೆಟ್ಗಳ ಮೂಲಕ ನೀರನ್ನು ಎತ್ತಿ ತಾತ್ಕಾಲಿಕ ಕಾಲುವೆ ನಿರ್ಮಾಣ ಮಾಡಿ ಅಲ್ಲಿಂದ ನೀರನ್ನು ಭೂತನಾಳ ಕೆರೆಗೆ ಹರಿಸಲಾಗುತ್ತಿದೆ. ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆಧಿಕಾರಿಗಳು ಕೆರೆಗೆ ನೀರು ಭರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 20 ಎಂಎಲ್ಡಿ ನೀರು ಹರಿಸೋ ಉದ್ದೇಶವಿದ್ದು, ಸದ್ಯ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಮುಂದಿನ ಮಾರ್ಚ 10 ರವರೆಗೂ ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ಅಲ್ಲಯವರೆಗೂ ಭೂತನಾಳ ಕೆರೆಗೆ ನೀರು ಹರಿಸಲಾಗುತ್ತದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ಟಿವಿ9 ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಹಾವೇರಿ: 900 ಎಕರೆಯ ಐತಿಹಾಸಿಕ ಕೆರೆ ಒತ್ತುವರಿ: ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪರದಾಟ
‘ಬಿರು ಬೇಸಿಗೆಯಲ್ಲಿ ಭೂತನಾಳ ಕೆರೆಯ ನೀರು ಖಾಲಿಯಾಗಿದ್ದ ಕಾರಣ, ನಗರದ 2, 4, 5, 6, 8, 10, 12 ವಾರ್ಡ್ಗಳಲ್ಲಿನ ಸುಮಾರು 2 ಲಕ್ಷದಷ್ಟು ಜನರಿಗೆ ನೀರಿನ ತೊಂದರೆಯಾಗಿತ್ತು. ಇನ್ನಿತರ 28 ವಾರ್ಡ್ಗಳಿಗೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಳಿಯ ಕೃಷ್ಣಾ ನದಿಯಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಬರಗಾಲದ ಕಾರಣ ಅಲ್ಲಿನ ಜಾಕ್ ವೆಲ್ನಲ್ಲೂ ನೀರಿನ ಮಟ್ಟ ಕುಸಿದಿತ್ತು. 28 ವಾರ್ಡ್ಗಳ ಜೊತೆಗೆ ಹೆಚ್ಚುವರಿ 7 ವಾರ್ಡ್ಗಳಿಗೂ ಅಲ್ಲಿಂದಲೇ ನೀರು ಪೂರೈಕೆ ಮಾಡುವುದು ಅನಿವಾರ್ಯವಾಗಿ 10 ರಿಂದ 15 ದಿನಕ್ಕೊಮ್ಮೆ ನೀರು ಬಿಡುವಂತಾಗಿತ್ತು. ಸದ್ಯ ಈ ಸಮಸ್ಯೆಗೆ ಮುಕ್ತಿ ಸಿಗವಂತಾಗಿದೆ. ಕೆಲವೇ ದಿನಗಳಲ್ಲಿ ನಗರದ 7 ವಾರ್ಡ್ ಗಳಿಗೆ ಭೂತನಾಳ ಕೆರೆಯಿಂದಲೇ ನೀರು ಪೂರೈಕೆ ಮಾಡಲಾಗುತ್ತದೆ.
ನೀರು ಪೂರೈಕೆಗೆ ಸುಮಾರು 50 ಲಕ್ಷಕ್ಕೂ ಆಧಿಕ ಹಣ ಖರ್ಚು
ಈ ಯೋಜನೆಗಾಗಿ ಸುಮಾರು 50 ಲಕ್ಷಕ್ಕೂ ಆಧಿಕ ಹಣ ಖರ್ಚು ಮಾಡಲಾಗುತ್ತಿದೆ. ಇನ್ನು ವಾಯಾಡೆಕ್ಟ್ನಿಂದ ನೀರು ಕೆರೆಗೆ ಹರಿದು ಹೋಗಲು ಸಂಸದ ರಮೇಶ್ ಜಿಗಜಿಣಗಿ ತಮ್ಮ ಜಮೀನಿನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಜಮೀನಿಗೆ ಹಾಕಿದ್ದ ತಡೆಗೋಡೆಯನ್ನು ತೆರವು ಮಾಡಿ ಜಮೀನಿನಲ್ಲಿ ತಾತ್ಕಾಲಿಕ ಕಾಲುವೆ ತೋಡಲು ಅವಕಾಶ ನೀಡಿದ್ದು ಸಹ ಬೇಗನೇ ನೀರು ಹರಿದು ಬರಲು ಸಾಧ್ಯವಾಗಿದೆ. 7 ವಾರ್ಡ್ಗಳ ನೀರಿನ ಸಮಸ್ಯೆ ಕುರಿತು ಟಿವಿ9 ವರದಿ ಮಾಡಿದ್ದಕ್ಕೆ ಕೃಷ್ಣಾ ನದಿಯ ನೀರು ಮುಳವಾಡ ಏತ ನೀರಾವರಿ ಯೋಜನೆಯ ತಿಡಗುಂಡಿ ವಯಾಡೆಕ್ಟ್ ಮೂಲಕ ಭೂತನಾಳ ಕೆರೆಗೆ ನೀರು ಭರಿಸೋ ಕಾರ್ಯಕ್ಕೆ ಚಾಲನೆ ಸಿಕ್ಕಿದೆ ಎಂದು ನಮ್ಮ ಟಿವಿ9 ವಾಹಿನಿಗೆ ಸ್ಥಳಿಯರು ಕೃತಜ್ಞತೆಯನ್ನು ಅರ್ಪಿಸಿದ್ದಾರೆ.
ಸದ್ಯ ಬರಗಾಲದ ಕಾರಣ ಬತ್ತಿ ಹೋಗಿದ್ದ ಭೂತನಾಳ ಕೆರೆಗೆ ಕೃಷ್ಣೆ ಹರಿದು ಬರುತ್ತಿದ್ದಾಳೆ. ನೀರಿನ ಸಮಸ್ಯೆಗೆ ಈಡಾಗಿದ್ದ 7 ವಾರ್ಡ್ಗಳ ಜನರು ಇದೀಗ ಸಂತಸಗೊಂಡಿದ್ದಾರೆ. ನೀರಿನ ಸಮಸ್ಯೆ ಬಗೆ ಹರಿಯಿತಲ್ಲ ಎಂದು ಖುಷಿ ಪಡುತ್ತಿದ್ದಾರೆ. ಆದರೆ, ಖುಷಿ ಪಡುವುದರ ಜೊತೆಗೆ ಬಿರು ಬೇಸಿಗೆ ಮುಗಿಯೋವರೆಗೆ ಜನರು ನೀರನ್ನು ಪೋಲು ಮಾಡದೇ ಸಮಯೋಜಿತವಾಗಿ ಮಿತವಾಗಿ ಬಳಕೆ ಮಾಡಬೇಕೆಂದು ಜನರಲ್ಲಿ ಟಿವಿ9 ಡಿಜಿಟಲ್ನ ಕಳಕಳಿಯ ಮನವಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ