ಕಂಟ್ರಿ ಪಿಸ್ತೂಲ್ ತೋರಿಸಿ ಬಂಗಾರದ ಅಂಗಡಿ ದರೋಡೆ: ಬೆಚ್ಚಿ ಬೀಳಿಸೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಕಂಟ್ರಿ ಪಿಸ್ತೂಲ್ ಬಳಸಿ ಬಂಗಾರದ ಅಂಗಡಿ ದರೋಡೆ ನಡೆಸಿರುವ ಘಟನೆವಿಜಯಪುರ ಜಿಲ್ಲೆಯ ಹಲಸಂಗಿ ಗ್ರಾಮದಲ್ಲಿ ನಡೆದಿದೆ. ದರೋಡೆ ಕೋರರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ವೇಳೆ ಓರ್ವ ವ್ಯಕ್ತಿಗೆ ಗಾಯಗಳಾಗಿವೆ. ದರೋಡೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ರಾಬರಿ ಬಳಿಕ ಆರೋಪಿಗಳು ಮಹಾರಾಷ್ಟ್ರದತ್ತ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ವಿಜಯಪುರ, ಜನವರಿ 26: ಮೈಸೂರು ಜಿಲ್ಲೆಯ ಹುಣಸೂರು ಬಸ್ ನಿಲ್ದಾಣದ ಹಿಂಭಾಗದ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ʼಗೆ ನುಗ್ಗಿದ್ದ ಗ್ಯಾಂಗ್, ಸಿಬ್ಬಂದಿಗೆ ಗನ್ ತೋರಿಸಿ 7 ಕೆಜಿ ಚಿನ್ನ ಮತ್ತು ವಜ್ರ ದರೋಡೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಅಂತಹುದ್ದೇ ಮತ್ತೊಂದು ರಾಬರಿ ನಡೆದಿದೆ. ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ಕಂಟ್ರಿ ಪಿಸ್ತೂಲ್ ತೋರಿಸಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಚಿನ್ನದ ಅಂಗಡಿಯಲ್ಲಿ ದರೋಡೆ ನಡೆಸಿದ್ದಾರೆ.
ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿ ದರೋಡೆ
ಮಹಾರುದ್ರ ಕಂಚಗಾರ ಅವರಿಗೆ ಸೇರಿರುವ ಬಂಗಾರದ ಅಂಗಡಿಯಲ್ಲಿ ದರೋಡೆ ನಡೆದಿದ್ದು, ಅಂಗಡಿಗೆ ಬಂದಿದ್ದ ವೃದ್ಧೆಯನ್ನ ಸಹ ಪಿಸ್ತೂಲ್ ತೋರಿಸಿ ಹೆದರಿಸಿ ಆರೋಪಿಗಳು ಕಳುಹಿಸಿದ್ದಾರೆ. ಅಲ್ಲದೆ ದರೋಡೆಕೋರರು ಈ ವೇಳೆ ಗಾಳಿಯಲ್ಲಿ 2 ಸುತ್ತು ಗುಂಡು ಕೂಡ ಹಾರಿಸಿದ್ದು, ಆತ್ಮಲಿಂಗ ಹೂಗಾರ ಎಂಬುವನ ಕಾಲಿಗೆ ಬುಲೆಟ್ ತಾಗಿದೆ. ಗಾಯಾಳುವನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 205 ಗ್ರಾಂ ಬಂಗಾರದ ಆಭರಣ ಮತ್ತು 1 ಕೆ.ಜಿ. ಬೆಳ್ಳಿ ದೋಚಿದ ಆರೋಪಿಗಳು ಮಹಾರಾಷ್ಟ್ರದತ್ತ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣ; ಬಿಹಾರ ಮೂಲದ ಮೋಸ್ಟ್ ವಾಂಟೆಡ್ ಆರೋಪಿ ಪೊಲೀಸರ ಬಲೆಗೆ
ಸಿಸಿ ಕ್ಯಾಮರಾದಲ್ಲಿ ದರೋಡೆ ದೃಶ್ಯ ಸೆರೆ
ದರೋಡೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ SP ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ, DySP ಕಟ್ಟಿಮನಿ, ಇನ್ಸ್ಪೆಕ್ಟರ್ ಪರಶುರಾಮ ಮನಗೂಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿನ್ನದಂಗಡಿಗೆ ಎಂಟ್ರಿ ಕೊಟ್ಟು ಗನ್ ತೋರಿಸಿ ಆರೋಪಿಗಳು ದರೋಡೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ದರೋಡೆಕೋರರ ಬಂಧನಕ್ಕೆ ಖಾಕಿ ಬಲೆ ಬೀಸಿದೆ. ಮತ್ತೊಂದೆಡೆ ಮೇಲಿಂದ ಮೇಲೆ ನಡೆಯುತ್ತಿರುವ ದರೋಡೆ ಪ್ರಕರಣಗಳು ಚಿನ್ನದಂಗಡಿ ಮಾಲಕರ ನಿದ್ರೆಗೆಡಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:47 pm, Mon, 26 January 26