ವಿಜಯಪುರ: ಅಂಜುಟಗಿ ಬಳಿ ವಾಹನ ಪಲ್ಟಿ, 30ಕ್ಕೂ ಹೆಚ್ಚು ಕರುಗಳು ಸಾವು
ವಧೆ ಮಾಡಲು ಮಹಾರಾಷ್ಟ್ರದಿಂದ ವಿಜಯಪುರ ಜಿಲ್ಲೆಯ ಇಂಡಿಗೆ ಕರುಗಳನ್ನು ತರುತ್ತಿದ್ದ ವೇಳೆ ವಾಹನ ಪಲ್ಟಿಯಾಗಿ 30ಕ್ಕೂ ಹೆಚ್ಚು ಕರುಗಳು ಮೃತಪಟ್ಟಿವೆ.
ವಿಜಯಪುರ ಸೆ.16: ಇಂಡಿ (Indi) ತಾಲೂಕಿನ ಅಂಜುಟಗಿ ಗ್ರಾಮದ ಬಳಿ ತಡರಾತ್ರಿ ಅಕ್ರಮವಾಗಿ ಕರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನ (Vehicle) ಪಲ್ಟಿಯಾಗಿ ಮೂವತ್ತಕ್ಕೂ ಅಧಿಕ ಕರುಗಳು (Calf) ಮೃತಪಟ್ಟಿವೆ. ಇಂಡಿ ಭಾಗದಲ್ಲಿ ಕರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ದುಷ್ಕರ್ಮಿಗಳು ಕರುಗಳ ಕಾಲುಗಳನ್ನು ಕಟ್ಟಿ, ಬಾಯಿಗೆ ಪ್ಲಾಸ್ಟಿಕ್ ಟೇಪ್ ಅಂಟಿಸಿ MH 11 AG 2228 ವಾಹನ ಸಂಖ್ಯೆಯಲ್ಲಿ ಮಹಾರಾಷ್ಟ್ರದ ಸಾತಾರಾದಿಂದ ಇಂಡಿಗೆ ತರುತ್ತಿದ್ದರು. ಬರುವ ಮಾರ್ಗದಲ್ಲಿ ವಾಹನ ಪಲ್ಟಿಯಾಗಿದೆ. ವಾಹನದಲ್ಲಿ ವಧೆ ಮಾಡಲು ಬಳಕೆ ಮಾಡುವ ಮಾರಕಾಸ್ತ್ರಗಳು ಸಹ ಪತ್ತೆಯಾಗಿವೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾದಗಿರಿ ಚಿತ್ತಾಪುರ ರಸ್ತೆಯಲ್ಲಿ ಟ್ರಕ್ ಹರಿದು 25 ಕುರಿಗಳು ಸಾವು
ಯಾದಗಿರಿ ಸೆ.16: ಶನಿವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ ಯಾದಗಿರಿ ಹೊರವಲಯದ ಚಿತ್ತಾಪುರ ರಸ್ತೆಯಲ್ಲಿ ಟ್ರಕ್ ಹರಿದು 25 ಕುರಿಗಳು ಸಾವಿಗೀಡಾಗಿವೆ. ಯಾದಗಿರಿ ಸಂಚಾರ ಪೊಲೀಸರು ಟ್ರಕ್ ಚಾಲನನ್ನು ವಶಕ್ಕೆ ಪಡೆದಿದ್ದಾರೆ. ಕುರಿಗಾಯಿಗಳು ಕುರಿ ಮೇಯಿಸಲು ರಸ್ತೆ ದಾಟಿ ಹೋಗುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ಟ್ರಕ್ ಕುರಿಗಳ ಮೇಲೆ ಹರಿದಿದೆ. ಇದರಿಂದ ನಾಗಪ್ಪ, ಅಂಬಲಯ್ಯ, ಧರ್ಮರಾಜ ಹಾಗೂ ನಿಂಗಪ್ಪ ಎಂಬ ಕುರಿಗಾಯಿಗಳಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಯಾದಗಿರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರುವನ್ನು ಹೊತ್ತೊಯ್ದು ತಿಂದ ಚಿರತೆ
ಮಂಡ್ಯ: ಮದ್ದೂರು ತಾಲೂಕಿನ ಮಾದಾಪುರದೊಡ್ಡಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿ, ಹೊತ್ತೊಯ್ದು ತಿಂದಿದೆ. ಕರು ಕಳೆದುಕೊಂಡ ರೈತ ಕಂಗಾಲು ಆಗಿದ್ದಾನೆ. ಚಿರತೆ ಪ್ರತ್ಯಕ್ಷದಿಂದ ರೈತರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 am, Sat, 16 September 23