ವಿಜಯಪುರ ಜಿಲ್ಲಾ (Vijayapura) ಸಿಇಎನ್ ಪೊಲೀಸರು ವ್ಯವಸ್ಥಿತವಾಗಿ ನಿರಂತರ ಕಾರ್ಯಾಚರಣೆ ನಡೆಸಿದ್ದು, ಭಾರೀ ಪ್ರಮಾಣದ ಆನ್ಲೈನ್ ಹಣ ವಂಚನೆ (Online Fraud) ಪ್ರಕರಣಗಳನ್ನು ಭೇದಿಸಿದ್ದಾರೆ. 2022ನೇ ಸಾಲಿನಲ್ಲಿ ಇದುವರೆಗೂ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯಗಳ ಅಪರಾಧ ಪೊಲೀಸ್ ಠಾಣೆಯಲ್ಲಿ (CEN Police Station) ಒಟ್ಟು 31 ಆನ್ಲೈನ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಆ 31 ಪ್ರಕರಣಗಳಲ್ಲಿ ಒಟ್ಟು 39,99,854 ರೂಪಾಯಿಗಳ ವಂಚನೆ ನಡೆದಿರುವುದು ಪತ್ತೆಯಾಗಿತ್ತು. ಇದರಲ್ಲಿ ಒಟ್ಟು 24,45,729 ರೂ.ಗಳ ಮರಳಿ 31 ದೂರುದಾರರ ಖಾತೆಗಳಿಗೆ ಜಮಾವಣೆ ಮಾಡಲಾಗಿದೆ.
ಸಿಇಎನ್ ವಿಜಯಪುರ ಪೊಲೀಸ್ ಠಾಣೆಯಲ್ಲಿ 11 ವಂಚನೆ ಪ್ರಕರಣಗಳು ದಾಖಲಾಗಿದ್ದವು. 11 ಪ್ರಕರಣಗಳಲ್ಲಿ ಒಟ್ಟು 28,96,865 ರೂಪಾಯಿಗಳ ವಂಚನೆ ನಡೆದಿತ್ತು. ಈ ಪೈಕಿ 15,32,863 ರೂಪಾಯಿ ದೂರುದಾರರ ಬ್ಯಾಂಕ್ ಖಾತೆಗಳಿಗೆ ಜಮಾವಣೆಯಾಗಿದೆ. ವಂಚನೆಯಾದ 1 ತಾಸಿನಲ್ಲಿ (ಗೋಲ್ಡನ್ ಅವರ್) 2022 ರಲ್ಲಿ 10 ಪಿಟಿಶನ್ ಗಳು ದಾಖಲಾಗಿದ್ದವು. ಇದರಲ್ಲಿ ವಂಚನೆಯಾದ 6,15,156 ರೂಪಾಯಿಗಳಲ್ಲಿ 4,50,032 ರೂಪಾಯಿ ಮರಳಿ ದೂರುದಾರರ ಖಾತೆಗೆ ಜಮೆ ಮಾಡಿದ್ದಾರೆ ಸಿಇಎನ್ ಪೊಲೀಸರು.
ಇನ್ನು 2022ರಲ್ಲಿ MHA National Cyber Crime Portal Helpline No 1930 ಮೂಲಕ ಸಹ 10 ವಂಚನೆ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ವಂಚನೆಯಾದ ಒಟ್ಟು 4,87,833 ರೂಪಾಯಿಗಳ ಪೈಕಿ 4,62,834 ಮರಳಿ ವಂಚನೆಗೊಳಗಾದವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಆನ್ಲೈನ್ ವಂಚನೆ ಪ್ರಕರಣಗಳ ಭೇದಿಸಿದ ಕುರಿತು ವಿಜಯಪುರ ಎಸ್ಪಿ ಎಚ್ ಡಿ ಆನಂದಕುಮಾರ್ ಮಾಹಿತಿ ನೀಡಿದ್ದಾರೆ.
ಸಿಇಎನ್ ಇನ್ಸಪೆಕ್ಟರ್ ರಮೇಶ ಅವಜಿ ನೇತೃತ್ವದಲ್ಲಿ ನಡೆದಿರೋ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್ಪಿ ಆನಂದಕುಮಾರ್, ಪ್ರಕರಣ ಭೇದಿಸಿದತಂಡಕ್ಕೆ ನಗದು ಬಹುಮಾನ ನೀಡಿ ಶ್ಲಾಘಿಸಿದ್ದಾರೆ.