ವಿಜಯಪುರ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಮುಂದೂಡಿಕೆ
ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿ ಪ್ರಶ್ನಿಸಿ ಪಾಲಿಕೆ ಸದಸ್ಯರಾದ ಮಡಿವಾಳಪ್ಪ ಹಾಗೂ ಇತರ ಸದಸ್ಯರಿಂದ ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠಕ್ಕೆ ರಿಟ್ ಪಿಟೀಷನ್ ಸಲ್ಲಿಸಲಾಗಿತ್ತು. ಈ ಕುರಿತು ಶುಕ್ರವಾರ ವಿಚಾರಣೆ ನಡೆದಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಪೀಠ ಮುಂದೂಡಿದೆ.
ವಿಜಯಪುರ, ಅಕ್ಟೋಬರ್ 27: ವಿಜಯಪುರ ಮಹಾನಗರ ಪಾಲಿಕೆಯ (Vijayapura Corporation) ಮೇಯರ್ ಹಾಗೂ ಉಪಮೇಯರ್ ಚುನಾವಣೆ (Mayor, Deputy Mayor elections) ಮುಂದೂಡಿಕೆ ಮಾಡಲಾಗಿದೆ. ಇದೇ 30 ರಂದು ನಿಗದಿಯಾಗಿದ್ದ ಚುನಾವಣೆಯನ್ನು ಮುಂದೂಡುವಂತೆ ವಿಕ್ರಮ ಹುಲಿಲಗೋಳ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಹೆಚ್ಚುವರಿ ಅಡ್ವೊಕೇಟ್ ಜನರಲ್ ಸೂಚನೆ ಹಿನ್ನಲೆಯಲ್ಲಿ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಮುಂದೂಡಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿ ಪ್ರಶ್ನಿಸಿ ಪಾಲಿಕೆ ಸದಸ್ಯರಾದ ಮಡಿವಾಳಪ್ಪ ಹಾಗೂ ಇತರ ಸದಸ್ಯರಿಂದ ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠಕ್ಕೆ ರಿಟ್ ಪಿಟೀಷನ್ ಸಲ್ಲಿಸಲಾಗಿತ್ತು. ಈ ಕುರಿತು ಶುಕ್ರವಾರ ವಿಚಾರಣೆ ನಡೆದಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಪೀಠ ಮುಂದೂಡಿದೆ. ಹೀಗಾಗಿ ರಿಟ್ ಅರ್ಜಿ ಇತ್ಯರ್ಥವಾಗುವರೆಗೂ ಚುನಾವಣೆ ಮುಂದೂಡುವಂತೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪತ್ರ ಬರೆದಿದ್ದರು.
ಸದ್ಯ ಪಾಲಿಕೆಯ ಕಾಂಗ್ರೆಸ್ ಬಿಜೆಪಿ ಹಾಗೂ ಇತರ ಸದಸ್ಯರು ಹೈದರಾಬಾದ್, ಬೆಂಗಳೂರು, ಚಿಕ್ಕಮಗಳೂರು ಹಾಗೂ ಇತರೆಡೆ ಪ್ರವಾಸದಲ್ಲಿದ್ದಾರೆ. 35 ಸದಸ್ಯ ಬಲದ ಪಾಲಿಕೆ ಅಧಿಕಾರಕ್ಕಾಗಿ ಬಿಜೆಪಿ ಕಾಂಗ್ರೆಸ್ ಮದ್ಯೆ ಬಿಗ್ ಫೈಟ್ ಏರ್ಪಟ್ಟಿದೆ. 17 ಬಿಜೆಪಿ, 10 ಕಾಂಗ್ರೆಸ್, 5 ಪಕ್ಷೇತರರು, 2 ಎಐಎಂಐಎಂ ಹಾಗೂ 1 ಜೆಡಿಎಸ್ ಸದಸ್ಯರಿರೋ ಪಾಲಿಕೆ ಇದಾಗಿದೆ.
ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಬಿಜೆಪಿಯವರು ಅಪಹರಣ ಮಾಡಿ ಅಡಗುತಾಣದಲ್ಲಿಟ್ಟಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಇತ್ತೀಚೆಗೆ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ವಿಜಯಪುರ ರಾಜಕೀಯ ಚಟುವಟಿಕೆ ಬಿರುಸುಗೊಂಡಿತ್ತು.
ಇದನ್ನೂ ಓದಿ: ವಿಜಯಪುರದಲ್ಲಿ ಕಾವೇರಿದ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ: ಬಿಜೆಪಿ ಕಾಂಗ್ರೆಸ್ ತೀವ್ರ ಸೆಣಸಾಟ
ಜಿಲ್ಲೆಯಲ್ಲಿ ಮುಂದುವರಿದ ಹುಲಿ ಉಗುರು ಸದ್ದು
ವಿಜಯಪುರ ಜಿಲ್ಲೆಯಲ್ಲಿ ಹುಲಿ ಉಗುರು ಸದ್ದು ಮುಂದುವರೆದಿದೆ. ಭೀಮಾತೀರದ ಬಾಗಪ್ಪ ಹರಿಜನ ಹುಲಿ ಉಗುರು ಹಾಕಿಕೊಂಡಿರೋ ಪೋಟೋ ವೈರಲ್ ಆಗಿದೆ. ಹಳೆಯ ಫೋಟೊಗಳಲ್ಲಿ ಬಾಗಪ್ಪ ಹರಿಜನ ಕೊರಳಲ್ಲಿರೋ ಹುಲಿ ಉಗುರಿನ ಪೆಂಡೆಂಟ್ ಈಗ ವೈರಲ್ ಆಗಿದೆ. ಬಾಗಪ್ಪ ಕೈಯ್ಯಲ್ಲಿ ಗನ್ ಹಿಡಿದು, ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿ ಫೋಟೋ ತೆಗೆಸಿಕೊಂಡಿದ್ದರು. ಕಳೆದ ಹಲವಾರು ವರ್ಷಗಳ ಹಿಂದೆ ತೆಗೆದಿರುವ ಫೋಟೋ ಇದು ಎನ್ನಲಾಗಿದೆ.
ಇದೀಗ ಹುಲಿ ಉಗುರು ಧಾರಣೆ ವಿಚಾರ ಚರ್ಚೆಗೆ ಗ್ರಾಸವಾದ ಸಂದರ್ಭದಲ್ಲೇ ಬಾಗಪ್ಪ ಹರಿಜನ ಫೋಟೋಗಳು ವೈರಲ್ ಆಗಿವೆ.
ಗುರುವಾರವಷ್ಟೇ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ನಿವಾಸದಲ್ಲಿ ಅರಣ್ಯಾಧಿಕಾರಿಗಳು ಹುಲಿ ಉಗುರಿರೋ ಪೆಂಡೆಂಟ್ ವಶಪಡಿಸಿಕೊಂಡಿದ್ದರು. ವಿಜುಗೌಡ ಪುತ್ರ ಶಾಶ್ವತಗೌಡ ಹುಲಿ ಉಗುರುಗಳನ್ನು ಪೆಂಡೆಂಟ್ ನಲ್ಲಿ ಹಾಕಿಕೊಂಡಿದ್ದ ಫೋಟೋಗಳು ವೈರಲ್ ಆಗಿದ್ದವು. ಇದೀಗ ಬಾಗಪ್ಪ ಹರಿಜನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತಾರಾ ಎಂಬ ಚರ್ಚೆ ಆರಂಭವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ