ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರ ಜಿಲ್ಲೆಯ ಯೋಧ ಸಾವು

ಭಾರತೀಯ ರೈಫಲ್ಸ್​ನ 51 ಯುನಿಟ್​ನ ಮಹಾರ್ ರೆಜಿಮೆಂಟ್ 13 ರಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕರ್ತವ್ಯ ನಿರತ ಯೋಧ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ವೇಳೆ ಮೃತಪಟ್ಟಿದ್ದಾರೆ. ಇಂದು ಅಥವಾ ನಾಳೆ ಯೋಧನ ಪಾರ್ಥೀವ ಶರೀರ ಜಿಲ್ಲೆಯ ಆಗಮಿಸುವ ನಿರೀಕ್ಷೆ ಇದೆ.

ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರ ಜಿಲ್ಲೆಯ ಯೋಧ ಸಾವು
ರಾಜು ಕರ್ಜಗಿ
Updated By: ಆಯೇಷಾ ಬಾನು

Updated on: Jul 02, 2024 | 9:26 AM

ವಿಜಯಪುರ, ಜುಲೈ.02: ಜಿಲ್ಲೆಯ ತಿಕೋಟಾ ಮೂಲದ ಯೋಧ (Soldier) ರಾಜು ಕರ್ಜಗಿ (35) ಮೃತಪಟ್ಟಿದ್ದಾರೆ. ಭಾರತೀಯ ರೈಫಲ್ಸ್​ನ 51 ಯುನಿಟ್​ನ ಮಹಾರ್ ರೆಜಿಮೆಂಟ್ 13 ರಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕರ್ತವ್ಯ ನಿರತ ಯೋಧ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ವೇಳೆ ಮೃತಪಟ್ಟಿದ್ದಾರೆ (Death). ಯೋಧ ಮೃತಪಟ್ಟಿರುವ ಬಗ್ಗೆ ಸೇನಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಕುಟುಂಬದವರಿಗೆ ಮಾಹಿತಿ ನೀಡಿದೆ.

ಮತ್ತೊಂದೆಡೆ ಯೋಧನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಇಂದು ಅಥವಾ ನಾಳೆ ಯೋಧನ ಪಾರ್ಥೀವ ಶರೀರ ಜಿಲ್ಲೆಯ ಆಗಮಿಸುವ ನಿರೀಕ್ಷೆ ಇದೆ. ಯೋಧನ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಪತ್ನಿ, ತಂದೆ ಹಾಗೂ ತಾಯಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಹಿಟ್​ ಌಂಡ್​ ರನ್​ಗೆ ಬೈಕ್ ಸವಾರ ಬಲಿಯಾಗಿದ್ದಾನೆ. ಮಾದಾವರ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟಿದ್ದಾನೆ. ನೆಲಗದರನಹಳ್ಳಿಯ ನಿವಾಸಿ ರಘು(39) ಮೃತ ಬೈಕ್ ಸವಾರ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಷೀನ್ ಸಮಸ್ಯೆ; ಪ್ರತಿ ದಿನ ಅಲೆದು ಚಪ್ಪಲಿ ಸವಿತು ಎಂದು ರೋಗಿಗಳ ಅಳಲು

ಪ್ರೀತಿ ನಿರಾಕರಿಸಿದಕ್ಕೆ ಯುವತಿ ಸಾವು

ಬೆಂಗಳೂರು ಉತ್ತರ ತಾಲೂಕಿನ ಕಾಚೋಹಳ್ಳಿಯಲ್ಲಿ ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಮೋಹನ ಕುಮಾರಿ(19) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪಾಪೇಗೌಡ ಮತ್ತು ಮಂಜುಳ ದಂಪತಿ ಪುತ್ರಿ ಮೋಹನ್ ಕುಮಾರಿ ತಮ್ಮದೇ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಿದ್ದೇಶ್​ನನ್ನು ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದಳು. ವಿಷಯ ತಿಳಿಯುತ್ತಿದ್ದಂತೆ ಪೋಷಕರು ಯುವತಿಯ ಕಾಲೇಜ್ ಬಿಡಿಸಿ ಚಿಕ್ಕಮ್ಮ ಪ್ರಮೀಳಾ ಮನೆಯಲ್ಲಿರಿಸಿದ್ದರು. ಈ ವಿಷಯವಾಗಿ ಮನನೊಂದ ಯುವತಿ ಮನೆಯ ರೂಂನ ಫ್ಯಾನ್​ಗೆ ವೇಲ್ ಬಳಸಿ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10ಕ್ಕೂ ಹೆಚ್ಚು ಅಂಗಡಿಗಳು ಧಗಧಗ

ಶಾರ್ಟ್ ಸರ್ಕ್ಯೂಟ್​ನಿಂದ 10ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಶಿವಮೊಗ್ಗದ ಗಾಂಧಿಬಜಾರ್​ನ ಉಪ್ಪಾರಗೇರಿ ಮಾರ್ಕೆಟ್​ನಲ್ಲಿ ಘಟನೆ ನಡೆದಿದ್ದು, ಅಂಗಡಿಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ